ADVERTISEMENT

ಚಿತ್ರದುರ್ಗವನ್ನು ನಡುಗಿಸುತ್ತಿರುವ ಚಳಿ..!

ಮಂಜಿನಲ್ಲಿ ಮುಳುಗುತ್ತಿದೆ ಕಲ್ಲಿನಕೋಟೆ, ಅನಾರೋಗ್ಯ ಸಮಸ್ಯೆ ಹೆಚ್ಚಳ

ಎಂ.ಎನ್.ಯೋಗೇಶ್‌
Published 26 ನವೆಂಬರ್ 2024, 6:08 IST
Last Updated 26 ನವೆಂಬರ್ 2024, 6:08 IST
ಚಿತ್ರದುರ್ಗದ ನಗರದ ಬಿ.ಡಿ ರಸ್ತೆ ಸೋಮವಾರ ಬೆಳಿಗ್ಗೆ ಕಂಡಿದ್ದು ಹೀಗೆ
ಚಿತ್ರದುರ್ಗದ ನಗರದ ಬಿ.ಡಿ ರಸ್ತೆ ಸೋಮವಾರ ಬೆಳಿಗ್ಗೆ ಕಂಡಿದ್ದು ಹೀಗೆ   

ಚಿತ್ರದುರ್ಗ: ಕೋಟೆನಗರಿ ಸೇರಿದಂತೆ ಜಿಲ್ಲೆಯಾದ್ಯಂತ ಚಳಿ ತೀವ್ರಗೊಳ್ಳುತ್ತಿದ್ದು ಜನರು ನಡುಗುತ್ತಿದ್ದಾರೆ. ಶೀತದ ಸಮಸ್ಯೆಯಿಂದಾಗಿ ಮಕ್ಕಳು, ಹಿರಿಯ ನಾಗರಿಕರು ಅನಾರೋಗ್ಯದಿಂದ ಬಳಲುತ್ತಿದ್ದು ಕ್ಲಿನಿಕ್‌, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಪ್ರತಿ ಬಾರಿ ಕಾರ್ತೀಕ ಮಾಸ ಮುಗಿದು ಡಿಸೆಂಬರ್ ಮೊದಲ ಅಥವಾ 2ನೇ ವಾರದಲ್ಲಿ ಚಳಿ ಹೆಚ್ಚಳವಾಗುತ್ತಿತ್ತು. ಆದರೆ ಈ ವರ್ಷ ನವೆಂಬರ್‌ ಮುಗಿಯುವ ಮೊದಲೇ ಚಳಿ ತನ್ನ ತೀವ್ರ ಸ್ವರೂಪದ ದರ್ಶನ ಮಾಡಿಸಿದೆ. ಬೆಳಿಗ್ಗೆ ಹಾಸಿಗೆಯಿಂದ ಎದ್ದು ಹೊರಗೆ ಬರಲಾರದಷ್ಟು ಚಳಿ ಜನರನ್ನು ಕಾಡುತ್ತಿದೆ. ಮಕ್ಕಳು ಮುಂಜಾನೆ ಎದ್ದು ಶಾಲೆಗೆ ತೆರಳಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂಜಾನೆ ವಿಹಾರಿಗಳಿಂದ ತುಂಬಿ ತುಳುಕುತ್ತಿದ್ದ ನಗರದ ಜಿಲ್ಲಾ ಕ್ರೀಡಾಂಗಣ, ಸರ್ಕಾರಿ ಕಾಲೇಜು ಮೈದಾನ ಸೇರಿದಂತೆ ಉದ್ಯಾನಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ. ಮಂಜು ಮುಸುಕಿದ ವಾತಾವರಣದಲ್ಲಿ ಹೊರಗೆ ಬರಲು ಜನರು ಭಯಪಡುತ್ತಿದ್ದಾರೆ. ಸ್ವೆಟರ್‌, ಟೊಪ್ಪಿ ಧರಿಸಿಯೇ ಓಡಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಒನಕೆ ಓಬವ್ವ ಈಜುಕೊಳ ಸದಾ ಈಜುಪಟುಗಳಿಂದ ತುಂಬಿರುತ್ತಿತ್ತು. ಆದರೆ ಈಗ ಈಜುಕೊಳಕ್ಕೆ ಇಳಿಯುವವರ ಸಂಖ್ಯೆ ತಗ್ಗಿದೆ.

ADVERTISEMENT

ಬೆಳಿಗ್ಗೆ ಎದ್ದು ಕಲ್ಲಿನಕೋಟೆ, ಜೋಗಿಮಟ್ಟಿ ಸೇರಿದಂತೆ ಸುತ್ತಲೂ ಇರುವ ಗುಡ್ಡಗಳನ್ನು ಕಣ್ತುಂಬಿಕೊಳ್ಳುವುದೇ ನಗರದ ಜನರಿಗೆ ಒಂದು ಸುಂದರ ಅನುಭವ. ಆದರೆ ಈಗಿನ ಪರಿಸ್ಥಿತಿಯಲ್ಲಿ ಬೆಳಿಗ್ಗೆ 8.30 ಗಂಟೆಯಾದರೂ ಕೋಟೆ, ಸುತ್ತಲಿನ ಬೆಟ್ಟಗಳು ಕಣ್ಣಿಗೆ ಕಾಣದಷ್ಟು ಮಂಜಿನಿಂದ ಮುಚ್ಚಿ ಹೋಗಿವೆ. ಸಂಜೆ ಕೂಡ ಇದೇ ಪರಿಸ್ಥಿತಿ ಇದ್ದು 5 ಗಂಟೆಯಾಗುತ್ತಿದ್ದಂತೆ ಮಂದ ಮಂಜು ವಾತಾವರಣವನ್ನು ಮಬ್ಬಾಗಿಸುತ್ತಿದೆ.

ಕಳೆದೊಂದು ವಾರದಲ್ಲಿ ನ.23ರಂದು ಕನಿಷ್ಠ ಉಷ್ಣಾಂಶ 15.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ಗರಿಷ್ಠ ಉಷ್ಣಾಂಶ ಸರಾಸರಿ 27 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ.

ಅನಾರೋಗ್ಯ ಸಮಸ್ಯೆ:

ತೀವ್ರ ಚಳಿಯಿಂದಾಗಿ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು ಜನರು ಆಸ್ಪತ್ರೆ ಸೇರುತ್ತಿದ್ದಾರೆ. ಶೀತ ಜ್ವರ, ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳು ಉಲ್ಭಣಗೊಂಡಿವೆ. ಶೀತದಿಂದ ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳುವುದು ಪಾಲಕರಿಗೆ ಸವಾಲಾಗಿದೆ. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ತಗ್ಗಿದೆ. ಜ್ವರ, ಕೆಮ್ಮು, ನೆಗಡಿ ಇರುವ ಮಕ್ಕಳು ರಜೆ ಪಡೆಯಬೇಕು ಎಂದು ಶಾಲಾ ಆಡಳಿತ ಮಂಡಳಿಗಳು ಸೂಚನೆ ನೀಡಿವೆ.

ಶೀತದಿಂದಾಗಿ ಕೆಲವು ಹಿರಿಯ ನಾಗರಿಕರಲ್ಲಿ ಶ್ವಾಸಕೋಶದ ಸಮಸ್ಯೆಗಳು ಉಲ್ಭಣಗೊಂಡಿವೆ. ಅಸ್ತಮಾದಿಂದ ಬಳಲುವವರಿಗೆ ಇದು ಅತ್ಯಂತ ಕೆಟ್ಟ ಕಾಲವಾಗಿದೆ. ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳಲು ಅವರು ಪರದಾಡುತ್ತಿದ್ದಾರೆ. ಯುವಕರಿಗೂ ಕೀಲು ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಡಿನೋವು, ಸೊಂಟನೋವು ಹೆಚ್ಚಾಗಿದೆ. ನಗರದ ಆಯುಷ್‌ ಆಸ್ಪತ್ರೆ ಸೇರಿದಂತೆ ಆಯುರ್ವೇದ ಕ್ಲಿನಿಕ್‌ಗಳಲ್ಲಿ ಮಸಾಜ್‌ (ಪಂಚಕರ್ಮ ಚಿಕಿತ್ಸೆ) ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.

‘ಶೀತಜ್ವರ ಕಾಡಿದ ಪರಿಣಾಮ ಮನೆಮಂದಿಯೆಲ್ಲಾ ಒಂದು ಸುತ್ತು ಮಲಗಿ ಎದ್ದಿದ್ದೇವೆ. ಇಷ್ಟೊಂದು ಚಳಿಯನ್ನು ನಾವು ನೋಡಿರಲಿಲ್ಲ. ರೋಗ ನಿರೋಧಕ ಗುಳಿಗೆ ನುಂಗಿದ ಕಾರಣ ಇತರ ಅನಾರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಇಷ್ಟೊಂದು ಚಳಿಯನ್ನು ನಾವು ಮೊದಲು ಕಂಡಿರಲಿಲ್ಲ’ ಎಂದು ಜೋಗಿಮಟ್ಟಿ ರಸ್ತೆಯ ನಿವಾಸಿಯೊಬ್ಬರು ತಿಳಿಸಿದರು.

‘ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಾದ ಕಾರಣ ಜಿಲ್ಲೆಯಾದ್ಯಂತ ಕೆರೆ, ಕಟ್ಟೆ, ಹಳ್ಳ– ಕೊಳ್ಳ– ಹೊಂಡಗಳು ತುಂಬಿವೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದೆ. ನಗರದ ಬಂಡೆಗಳು ಕೂಡ ತಣ್ಣಗಾಗಿದ್ದು ಅದರ ಪರಿಣಾಮವನ್ನು ಜನರು ಅನುಭವಿಸುತ್ತಿದ್ದಾರೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು.

ಮಕ್ಕಳ ಆರೋಗ್ಯ ಜೋಪಾನ

‘ನವಜಾತ ಶಿಶು ಹಾಗೂ 10 ವರ್ಷದೊಳಗಿನ ಮಕ್ಕಳನ್ನು ಶೀತ ಹರಡದಂತೆ ನೋಡಿಕೊಳ್ಳಲು ಸಾಧ್ಯವಿದೆ. ಇಡೀ ದೇಹ ಮುಚ್ಚುವಂತಹ ಸ್ವೆಟರ್‌ ಕ್ಯಾಪ್‌ ಕೈಚೀಲ ಸಾಕ್ಸ್‌ ಧರಿಸಿ ಓಡಾಡಬೇಕು. ಕೆಮ್ಮು ಜಾಸ್ತಿ ಇದ್ದಾಗ ಮಕ್ಕಳಿಗೆ ಹಬೆ ಕೊಡಬೇಕು. ಚಳಿಗಾಲಕ್ಕೆ ನೆಬ್ಯುಲೈಸರ್‌ ಯಂತ್ರಗಳ ಮೂಲಕ ಹಬೆ ನೀಡುವುದು ಒಳ್ಳೆಯದು’ ಎಂದು ಮಕ್ಕಳ ತಜ್ಞ ಡಾ.ಶಿವಮೂರ್ತಿ ತಿಳಿಸಿದರು.

‘ಸಮತೋಲಿತ ಆಹಾರ ಸೇವನೆಯಿಂದ ವೈರಲ್‌ ಜ್ವರ ಹರಡುವುದನ್ನು ತಡೆಯಬಹುದು. ತರಕಾರಿ ಸೊಪ್ಪು ಮುಂತಾದ ಪೌಷ್ಟಿಕಾಂಶವುಳ್ಳ ಪದಾರ್ಥ ಸೇವನೆ ಮಾಡಬೇಕು. ತುಪ್ಪ ಬೆಣ್ಣೆ ಮುಂತಾದವುಗಳಿಂದ ಸ್ವಲ್ಪ ದಿನ ದೂರ ಇರಬೇಕು. ಚಳಿಗಾಲ ಮುಗಿಯುವವರೆಗೂ ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಬೇಕು’ ಎಂದರು.

ಭೂಮಿಯಲ್ಲಿ ತೇವಾಂಶ ಹೆಚ್ಚಿರುವ ಕಾರಣ ಚಳಿಯ ತೀವ್ರತೆಯೂ ಹೆಚ್ಚಾಗಿದೆ. ಜಲಮೂಲಗಳಲ್ಲಿ ನೀರು ತುಂಬಿದ್ದು ಭೂಮಿಯ ತೇವಾಂಶ ಹೆಚ್ಚಲು ಕಾರಣವಾಗಿದೆ. ಹೀಗಾಗಿ ಉಷ್ಣಾಂಶವೂ ಕುಸಿಯುತ್ತಿದೆ
ರಾಮಚಂದ್ರಯ್ಯ, ಹವಾಮಾನ ತಜ್ಞ, ಚಿತ್ರದುರ್ಗ ಹವಾಮಾನ ವೀಕ್ಷಣಾ ಕೇಂದ್ರ
ಪೊಲೀಸ್‌ ಸಮುದಾಯ ಭವನ ಮೈದಾನದ ನೋಟ

Graphic text / Statistics - ವಾರದ ಉಷ್ಣಾಂಶ ವಿವರ (ಡಿಗ್ರಿ ಸೆಲ್ಸಿಯಸ್‌) ದಿನಾಂಕ; ಕನಿಷ್ಠ; ಗರಿಷ್ಠ ನ.19; 16; 30 ನ.20; 17; 29 ನ.21; 17; 29 ನ.22; 17; 29 ನ.23; 15.8; 30 ನ.24; 16.6; 30 ನ.25;17; 29

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.