ಚಿತ್ರದುರ್ಗ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ಚಳ್ಳಕೆರೆ, ಚಿತ್ರದುರ್ಗ ಹಾಗೂ ಹಿರಿಯೂರು ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದಾರೆ.
ಮತದಾರರ ಪಟ್ಟಿಯ ಅಂತಿಮ ಪರಿಷ್ಕರಣೆಯ ಬಳಿಕ ಮಹಿಳಾ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದು ಬಹಿರಂಗವಾಗಿದೆ. ಮಹಿಳಾ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ಆರಂಭಿಸಿವೆ. ಸ್ತ್ರೀಶಕ್ತಿ ಸಂಘ, ಮಹಿಳಾ ಸಮುದಾಯವನ್ನು ಪ್ರಭಾವಿಸಬಲ್ಲವರಿಗೆ ಮಣೆ ಹಾಕಲು ಮುಂದಾಗಿವೆ.
ನ.9ರಂದು ಪ್ರಟಕಗೊಂಡ ಕರಡು ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ 13,48,457 ಮತದಾರರು ಇದ್ದರು. ಇದರಲ್ಲಿ 6,77,105 ಪುರುಷರು ಹಾಗೂ 6,71,277 ಮಹಿಳಾ ಮತದಾರರಿದ್ದರು. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಬಳಿಕ ಒಟ್ಟು ಮತದಾರರ ಸಂಖ್ಯೆ 13,80,670ಕ್ಕೆ ಹೆಚ್ಚಾಯಿತು. ಇದರಲ್ಲಿ 6,90,538 ಪುರುಷಕರು ಹಾಗೂ 6,90,074 ಮಹಿಳಾ ಮತದಾರರು ಇದ್ದು, ಮಹಿಳಾ ಮತ್ತು ಪುರುಷ ಮತದಾರರ ನಡುವಿನ ವ್ಯತ್ಯಾಸ 5,828ರಿಂದ 464ಕ್ಕೆ ಕಡಿಮೆಯಾಗಿದೆ.
ಡಿಸೆಂಬರ್‌ನಲ್ಲಿ ತಿಂಗಳು ಕಾಲ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹೊಸದಾಗಿ 46,235 ಮತದಾರರು ಸೇರ್ಪಡೆಯಾಗಿದ್ದಾರೆ. ಇದರಲ್ಲಿ 20,790 ಪುರುಷರು ಹಾಗೂ 25,437 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಪುರುಷರಿಗಿಂತ 4,647 ಮಹಿಳಾ ಮತದಾರರು ಹೆಚ್ಚಾಗಿ ಸೇರ್ಪಡೆಯಾಗಿರುವುದು ಗಮನಾರ್ಹ. ಆದರೆ, 18ರಿಂದ 19 ವರ್ಷದ ಹೊಸ ಮತದಾರರಲ್ಲಿ ಯುವತಿಯರ ಸಂಖ್ಯೆ ಕಡಿಮೆ ಇದೆ. 31,050 ಯುವ ಮತದಾರರ ಪೈಕಿ 16,886 ಯುವಕ ಹಾಗೂ 14,163 ಯುವತಿಯರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಮತದಾರರ ಪಟ್ಟಿಯ ಪರಿಷ್ಕರಣೆಗೂ ಮುನ್ನ ಚಿತ್ರದುರ್ಗ ಮತ್ತು ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇಲ್ಲಿ ಪುರುಷ ಮತ್ತು ಮಹಿಳಾ ಮತದಾರರ ನಡುವೆ ದೊಡ್ಡ ವ್ಯತ್ಯಾಸವೇನು ಇರಲಿಲ್ಲ. ವಿಶೇಷ ಪರಿಷ್ಕರಣೆಯ ಬಳಿಕ ಚಳ್ಳಕೆರೆ ಕ್ಷೇತ್ರವೂ ಸೇರಿ ಜಿಲ್ಲೆಯ ಹಲವೆಡೆ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ಜಾಗೃತಿಯ ಕಾರಣಕ್ಕೆ ಮಹಿಳೆಯರು ಹೆಚ್ಚಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂಬುದು ಅಧಿಕಾರಿಗಳ ವಿಶ್ಲೇಷಣೆ.
ಮಹಿಳಾ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಹಲವು ತಂತ್ರಗಳನ್ನು ಹೆಣೆಯುತ್ತಿವೆ. ಟಿಕೆಟ್ ಆಕಾಂಕ್ಷಿಗಳು, ರಾಜಕೀಯ ಪಕ್ಷದ ನಾಯಕರು ಮಹಿಳಾ ಮತದಾರರ ಮನೆ ಬಾಗಿಲು ತಟ್ಟುತ್ತಿದ್ದಾರೆ. ‘ನಾ ನಾಯಕಿ’ ಸಮಾವೇಶ ನಡೆಸಿದ ಕಾಂಗ್ರೆಸ್, ಮಹಿಳೆಯರಿಗೆ ಹಲವು ಕೊಡುಗೆಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ರಾಜಕಾರಣದಲ್ಲಿ ಮಹಿಳೆಗೆ ಆದ್ಯತೆ ನೀಡುವ ಆಶ್ವಾಸನೆ ಕೊಟ್ಟಿದೆ.
ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಸರ್ಕಾರಿ ಯೋಜನೆಗಳ ಫಲಾನುಭವಿ ಮಹಿಳೆಯರ ಪಟ್ಟಿ ಸಿದ್ಧಪಡಿಸಿದ್ದಾರೆ. ಮಹಿಳೆಯರನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜೆಡಿಎಸ್, ಆಮ್ ಆದ್ಮಿ ಪಾರ್ಟಿ (ಎಎಪಿ) ಸೇರಿ ಹಲವು ಪಕ್ಷಗಳು ಮಹಿಳಾ ಮತದಾರರನ್ನು ತಲುಪಲು ಹವಣಿಸುತ್ತಿವೆ.
**
ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರಿಗೆ ರೂಪಿಸಿದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾ ಮಟ್ಟದ ಮಹಿಳಾ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.
–ಶೈಲಜಾ ರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷೆ ಬಿಜೆಪಿ ಮಹಿಳಾ ಮೋರ್ಚಾ
**
ಮನೆಯ ಒಡತಿಗೆ ₹ 2 ಸಾವಿರ ನೀಡುವ ಯೋಜನೆ ಘೋಷಣೆ ಮಾಡಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಬೂತ್ ಮಟ್ಟದಲ್ಲಿ ಮಹಿಳೆಯರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ.
–ಗೀತಾ ನಂದಿನಿಗೌಡ, ಅಧ್ಯಕ್ಷೆ, ಜಿಲ್ಲಾ ಮಹಿಳಾ ಕಾಂಗ್ರೆಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.