ADVERTISEMENT

ಚಿತ್ರದುರ್ಗ: ಕಾರ್ಮಿಕರ ವಿಭಾಗ ಬಲವರ್ಧನೆ ಅಗತ್ಯ- ಬಿ.ಎನ್. ಚಂದ್ರಪ್

ಕಾಂಗ್ರೆಸ್ ಕಾರ್ಮಿಕರ ವಿಭಾಗದ ಶ್ರಮಿಕ ಸಮ್ಮೇಳನದಲ್ಲಿ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 17:15 IST
Last Updated 26 ಸೆಪ್ಟೆಂಬರ್ 2021, 17:15 IST
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಕಾರ್ಮಿಕರ ವಿಭಾಗದ ಜಿಲ್ಲಾ ಅಧ್ಯಕ್ಷರಾಗಿ ಸೈಯದ್ ಮೊಹಿದ್ದೀನ್ ಚೋಟು ಅಧಿಕಾರ ಸ್ವೀಕರಿಸಿದರು. ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷ ಪುಟ್ಟಸ್ವಾಮಿ ಗೌಡ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಜಿ.ಎಸ್.ಮಂಜುನಾಥ್ ಇದ್ದರು.
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಕಾರ್ಮಿಕರ ವಿಭಾಗದ ಜಿಲ್ಲಾ ಅಧ್ಯಕ್ಷರಾಗಿ ಸೈಯದ್ ಮೊಹಿದ್ದೀನ್ ಚೋಟು ಅಧಿಕಾರ ಸ್ವೀಕರಿಸಿದರು. ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷ ಪುಟ್ಟಸ್ವಾಮಿ ಗೌಡ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಜಿ.ಎಸ್.ಮಂಜುನಾಥ್ ಇದ್ದರು.   

ಚಿತ್ರದುರ್ಗ: ‘ನಿರ್ಲಕ್ಷಕ್ಕೆ ಒಳಗಾಗುತ್ತಿರುವ ಕಾರ್ಮಿಕರ ಪರ ಬೆನ್ನೆಲುಬಾಗಿ ನಿಲ್ಲುವ ಸದುದ್ದೇಶದಿಂದ ಕಾಂಗ್ರೆಸ್‌ನಲ್ಲಿ ಪ್ರತ್ಯೇಕವಾಗಿ ಕಾರ್ಮಿಕ ವಿಭಾಗ ಸ್ಥಾಪಿಸಲಾಗಿದೆ. ಅದಕ್ಕಾಗಿ ಇದರ ಬಲವರ್ಧನೆ ತುಂಬಾ ಅಗತ್ಯವಿದೆ’ ಎಂದು ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಸಲಹೆ ನೀಡಿದರು.

ಉಮಾಪತಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಮಿಕರ ಜಿಲ್ಲಾ ವಿಭಾಗದಿಂದ ಭಾನುವಾರ ಆಯೋಜಿಸಿದ್ದ ಪದಗ್ರಹಣ ಹಾಗೂ ಜಿಲ್ಲಾಮಟ್ಟದ ಕಾರ್ಮಿಕ–ಶ್ರಮಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಅನಾದಿ ಕಾಲದಿಂದಲೂ ದುಡಿಯುವ ಕಾರ್ಮಿಕ ವರ್ಗಕ್ಕೂ ಮತ್ತು ಶ್ರೀಮಂತ ವರ್ಗದ ನಡುವೆ ಸಾಕಷ್ಟು ಅಂತರವಿದೆ. ಕಾರ್ಮಿಕರನ್ನು ಗುಲಾಮರಂತೆ ಕಾಣಲಾಗುತ್ತಿತ್ತು. ಇದನ್ನು ಹೋಗಲಾಡಿಸಲು ಬಸವಣ್ಣ ಅವರು ಕಲ್ಯಾಣ ಕ್ರಾಂತಿಗೆ ಮುಂದಾದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೂಡ ಕಾರ್ಮಿಕರ ಪರವಾಗಿ ಹೋರಾಟ ಮಾಡಿದರು. ಆದ್ದರಿಂದ ನೊಂದ ಕಾರ್ಮಿಕರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು’ ಎಂದರು.

ADVERTISEMENT

‘ಶ್ರಮಿಕ ವರ್ಗವೆಂದೇ ಗುರುತಿಸಿಕೊಂಡಿರುವ ಕಾರ್ಮಿಕರು ಸಂಕಷ್ಟದಲ್ಲಿ ಇದ್ದಾರೆ. ಅನ್ಯಾಯಕ್ಕೆ ಒಳಗಾಗುತ್ತಲೇ ಇದ್ದಾರೆ. ಕನಿಷ್ಠ ವೇತನವೂ ಸಿಗದೇ ಜೀವನ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಕೋವಿಡ್ ಅವಧಿಯಲ್ಲಿ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇಂತವರ ದನಿಯಾಗಿ, ಪಕ್ಷ ಕೆಲಸ ಮಾಡಬೇಕು. ಅದರಲ್ಲಿ ಈ ವಿಭಾಗ ಮುಂಚೂಣಿಯಲ್ಲಿ ಇರಬೇಕು’ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ‘ಬಿಜೆಪಿಯ ವೈಫಲ್ಯ ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನೂ ಕಾರ್ಯಕರ್ತರು ಮಾಡಬೇಕು. ನಿಮ್ಮ ವ್ಯಾಪ್ತಿಯ ಮನೆಗಳ ಸುತ್ತಮುತ್ತಲ ಜನರೊಂದಿಗೆ ನಿತ್ಯ ಒಂದೆರಡು ಗಂಟೆ ಚರ್ಚಿಸಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್‌ ಸದಸ್ಯರನ್ನಾಗಿಸುವ ಮೂಲಕ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮಾಡಬೇಕು. ಕಾಲಹರಣ ಮಾಡದೆ ಪಕ್ಷ ಸಂಘಟನೆಯಲ್ಲಿ ತೊಡಗಬೇಕು’ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷ ಪುಟ್ಟಸ್ವಾಮಿ ಗೌಡ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ ನಾಯಕ, ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮೊಹಿದ್ದೀನ್ ಚೋಟು, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಅಧ್ಯಕ್ಷ ಎನ್‌.ಡಿ.ಕುಮಾರ್, ಮಾಜಿ ಶಾಸಕ ಉಮಾಪತಿ, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಪಾತ್ಯರಾಜನ್, ಬಿ.ಟಿ. ಜಗದೀಶ್‌, ಯೋಗೀಶ್‌ ಬಾಬು, ಅಂಜಿನಪ್ಪ, ಜ್ಯೋತಿ ಲಕ್ಷ್ಮಿ, ಗೀತಾ ನಂದಿನಿಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.