ಚಿತ್ರದುರ್ಗ: ಎಡಗೈ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಹಟ್ಟಿ ಪ್ರವೇಶ ನಿರಾಕರಿಸಿದ ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಜನರ ಮೌಢ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಜಾತಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ತೀರಾ ಹಿಂದುಳಿದ ಗೊಲ್ಲ ಸಮುದಾಯದ ಮೂಢನಂಬಿಕೆಗಳು ಚರ್ಚೆಗೆ ಗ್ರಾಸವಾಗಿವೆ. ಸಂಸದರಿಗೆ ಪ್ರವೇಶ ನಿರಾಕರಿಸಿದ ಗ್ರಾಮಕ್ಕೆ ಭೇಟಿ ನೀಡಿ ಜನರ ಮನವೊಲಿಸಲು ಪ್ರಯತ್ನಿಸಿದ ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
* ಮೌಢ್ಯಚರಣೆ ಯಾದವ ಸಮುದಾಯದಲ್ಲಿ ಇಂದಿಗೂ ಜೀವಂತವಾಗಿರಲು ಕಾರಣ ಏನು?
ಕಾಡು ಗೊಲ್ಲರದು ಬುಡಕಟ್ಟು ಸಮುದಾಯ. ಬೆಟ್ಟ, ಗುಡ್ಡಗಳಲ್ಲಿ ವಾಸಿಸುತ್ತಿದ್ದ ಜನರು ಪ್ರತ್ಯೇಕ ಮನೆ ಕಟ್ಟಿಕೊಳ್ಳುತ್ತಿರಲಿಲ್ಲ. ಮುಟ್ಟಾದ ಮಹಿಳೆಯರ ವಿಶ್ರಾಂತಿಯ ದೃಷ್ಟಿಯಿಂದ ದನಗಳ ಕೊಟ್ಟಿಗೆ ಹೊರಭಾಗದಲ್ಲಿ ಆಶ್ರಯ ಕಲ್ಪಿಸುತ್ತಿದ್ದರು. ಇದು ಮೌಢ್ಯಾಚರಣೆಯಲ್ಲ, ಜನರ ನಂಬಿಕೆ. ನಾಗರಿಕತೆ ಬೆಳೆದ ಬಳಿಕವೂ ಮುಂದುವರಿದಿದ್ದು ವಿಪರ್ಯಾಸ.
ಗೊಲ್ಲ ಸಮುದಾಯ ಶಿಕ್ಷಣದಿಂದ ವಂಚಿತವಾಗಿದೆ. ಕೆಲ ಕಟ್ಟುಪಾಡುಗಳು ತಪ್ಪು ಎಂದು ಅರ್ಥಪಡಿಸಲು ಪ್ರಯತ್ನಿಸಿದ್ದೇವೆ. ಕಟ್ಟುಪಾಡು ಮೀರಿದರೆ ದೈವ ಕೇಡು ಬಯಸುತ್ತದೆ ಎಂಬ ನಂಬಿಕೆ ಬಲವಾಗಿದೆ.
* ಮಾದಿಗ ಸಮುದಾಯದ ಜನರನ್ನಷ್ಟೇ ಹಟ್ಟಿಯಿಂದ ಹೊರಗೆ ಇಡುವ ಮೌಢ್ಯ ಬೆಳೆದು ಬಂದಿದ್ದು ಏಕೆ?
ಅಸ್ಪೃಶ್ಯರೆಂಬ ಕಾರಣಕ್ಕೆ ಈ ಮೌಢ್ಯ ಬೆಳೆದಿದ್ದಲ್ಲ. ಗೊಲ್ಲ ಸಮುದಾಯ ಕೂಡ ಅತ್ಯಂತ ದಯನೀಯ ಸ್ಥಿತಿಯಲ್ಲಿದೆ. ದೈವಗಳ ಮೇಲಿನ ನಂಬಿಕೆಯಿಂದ ಇಂತಹ ಮೌಢ್ಯಗಳಿಗೆ ಕಟ್ಟುಬಿದ್ದಿದ್ದಾರೆ.
ಯಾದವರ ದೇವರು ಹಟ್ಟಿಗೆ ಬರುವಾಗ ಛಲವಾದಿಗಳು ಉರುಮೆ, ಮಾದಿಗರು ತಮಟೆ ಬಾರಿಸುತ್ತಿದ್ದರು. ತಮಟೆ ಕಾಯಿಸಲು ಹಾಕಿದ ಬೆಂಕಿ ಹಿಂದೊಮ್ಮೆ ಗುಡಿಸಲಿಗೆ ತಗುಲಿತ್ತು. ಕಾಕತಾಳೀಯವಾಗಿ ನಡೆದ ಈ ಘಟನೆ ಮಾದಿಗ ಸಮುದಾಯದ ಬಗ್ಗೆ ಅಸಹನೆ ಮೂಡಿಸಿದೆ.
ಮಾದಿಗ ಸಮುದಾಯದೊಂದಿಗೆ ಗೊಲ್ಲರು ಒಡನಾಟ ಹೊಂದಿದ್ದಾರೆ. ಹೀಗಾಗಿ, ‘ಕರಡಿ ಗೊಲ್ಲ’ ಪಂಗಡವೇ ನಮ್ಮಲ್ಲಿದೆ. ಯಾದವರ ದೈವಗಳಿಗೆ ಮಾದಿಗರು ನಡೆದುಕೊಳ್ಳುತ್ತಾರೆ. ಜಾಂಭವಂತನ ಮಗಳನ್ನು ಶ್ರೀಕೃಷ್ಣ ವಿವಾಹವಾಗಿಲ್ಲವೇ?
* ದೈವಾಂಶ ಸಂಬೂತರಾದ ಜುಂಜಪ್ಪ ಮತ್ತು ಕ್ಯಾತಪ್ಪರ ಮೇಲಿನ ನಂಬಿಕೆಯಿಂದ ಇಂಥ ಸಂಪ್ರದಾಯ ಇರುವುದಾಗಿ ಹಟ್ಟಿ ಜನ ಹೇಳುತ್ತಾರೆ. ಇದು ನಿಜವೇ?
ಗೋಮಾತೆ ಗೊಲ್ಲರ ಆರಾಧ್ಯ ದೈವ. ಹಸುವಿನ ಚರ್ಮದಿಂದ ಪಾದರಕ್ಷೆ ತಯಾರಿಸುತ್ತಾರೆ ಎಂಬ ನಂಬಿಕೆಯಿಂದ ಚಪ್ಪಲಿ ಕೂಡ ಹಾಕುತ್ತಿರಲಿಲ್ಲ. ಪೂಜಾರಿಗಳು ಈಗಲೂ ಚಪ್ಪಲಿ ಹಾಕುವುದಿಲ್ಲ. ವಿದ್ಯುತ್ ತಂತಿಗೆ ಗೋವಿನ ಚರ್ಮ ಬಳಸುತ್ತಾರೆ ಎಂಬ ನಂಬಿಕೆ ಗೊಲ್ಲರಲ್ಲಿತ್ತು. ಹೀಗಾಗಿ, ವಿದ್ಯುತ್ ದೀಪ ಅಳವಡಿಕೆಗೂ ವಿರೋಧ ವ್ಯಕ್ತಪಡಿಸುತ್ತಿದ್ದರು. ಯಾದವರು ಕುಟುಂಬ ಬಿಟ್ಟರೂ ನಂಬಿದ ದೈವವನ್ನು ಕೈಬಿಡುವುದಿಲ್ಲ.
* ಮೌಢ್ಯಚರಣೆ ಹೋಗಲಾಡಿಸುವ ನಿಟ್ಟಿನಲ್ಲಿ ಯಾದವ ಗುರುಪೀಠ ಏನು ಮಾಡುತ್ತದೆ?
ಮೌಢ್ಯಚರಣೆ ಹೋಗಲಾಡಿಸಲು ಮಠದಿಂದ ಮಾತ್ರ ಸಾಧ್ಯವಿಲ್ಲ. ಹಟ್ಟಿಯ ಪೂಜಾರಿ, ಯಜಮಾನರಲ್ಲಿ ಅರಿವಿನ ಬೀಜ ಬಿತ್ತಬೇಕು. ಗೊಲ್ಲರ ಹಟ್ಟಿಯಲ್ಲಿ ಬೆಳೆದು ಅಧಿಕಾರಸ್ಥ ಹುದ್ದೆಯಲ್ಲಿರುವ ಅಕ್ಷರಸ್ಥರು ಊರು ತಿದ್ದಲು ಮುಂದಾಗಬೇಕು. ಮೌಢ್ಯಾಚರಣೆಗೆ ಸಂಬಂಧಿಸಿದ ಕಾನೂನು ಬಿಗಿ ಆಗಬೇಕು.
ಮುಕ್ತ ಪ್ರವೇಶ ಕಲ್ಪಿಸಿದರೂ ಎಡಗೈ ಸಮುದಾಯದ ಅನೇಕರು ಹಟ್ಟಿಗೆ ಬರಲು ಹಿಂದೇಟು ಹಾಕುತ್ತಾರೆ. ಹಟ್ಟಿ ಪ್ರವೇಶಿಸಿದರೆ ತೊಂದರೆಯಾಗುತ್ತದೆ ಎಂಬ ನಂಬಿಕೆ ಅವರಲ್ಲಿಯೂ ಇದೆ. ಅದನ್ನೂ ಹೋಗಲಾಡಿಸುವ ಅಗತ್ಯವಿದೆ.
* ಗೊಲ್ಲರ ಹಟ್ಟಿಗಳು ಅಭಿವೃದ್ಧಿ ಕಾಣದಿರಲು ಕಾರಣವೇನು?
ಗೊಲ್ಲರ ಮುಗ್ಧತೆಯನ್ನು ರಾಜಕಾರಣಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ದೇಗುಲದಲ್ಲಿ ಸಭೆ ನಡೆಸಿ ಹಾಲಿನ ಮೇಲೆ ಪ್ರಮಾಣ ಮಾಡಿಸಿಕೊಳ್ಳುತ್ತಾರೆ. ಗೋವಿನ ಹಾಲು ಗೊಲ್ಲರಿಗೆ ದೇವರ ಸಮಾನ. ಮೂಲ ಸೌಲಭ್ಯಗಳೆಲ್ಲ ಹಟ್ಟಿಯ ಬದಲಾಗಿ ಕಂದಾಯ ಗ್ರಾಮಗಳನ್ನು ತಲುಪುತ್ತಿವೆ. ಹಟ್ಟಿಗಳು ವೋಟ್ ಬ್ಯಾಂಕ್‌ಗೆ ಮಾತ್ರ ಸೀಮಿತವಾಗಿವೆ. ರಾಜಕಾರಣಿಗಳಿಗೆ ಐದು ವರ್ಷಕ್ಕೊಮ್ಮೆ ಹಟ್ಟಿ ನೆನಪಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.