ಚಿತ್ರದುರ್ಗ: ಸ್ವಾಮಿ ವಿವೇಕಾನಂದರ ತತ್ವಜ್ಞಾನ ಮತ್ತು ಅವರ ಆದರ್ಶಗಳು ಯುವಜನತೆಗೆ ದೊಡ್ಡ ಸಂಪನ್ಮೂಲ ಹಾಗೂ ಸ್ಫೂರ್ತಿಯ ಮೂಲವಾಗಿವೆ ಎಂದು ಶಾರದಾ ರಾಮಕೃಷ್ಣ ಆಶ್ರಮದ ಬ್ರಹ್ಮನಿಷ್ಠಾನಂದ ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಂ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
‘ಯುವಕರು ಈ ದೇಶದ ಶಕ್ತಿ. ವಿವೇಕಾನಂದರ ಯುವಕರು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಮುನ್ನಡೆಯಬೇಕು’ ಎಂದರು.
‘ಸ್ವಾಮಿ ವಿವೇಕಾನಂದ ಅವರ ಜೀವನ ಚರಿತ್ರೆ ನಮಗೆಲ್ಲರಿಗೂ ಮಾದರಿಯಾಗಿದೆ. ವಿದ್ಯಾರ್ಥಿಗಳು ಅವರ ಪುಸ್ತಕಗಳನ್ನು ಓದಬೇಕು. ಈ ಮೂಲಕ ಅರ್ಥಪೂರ್ಣ ಜೀವನ ಸಾಗಿಸಬೇಕು’ ಎಂದು ಪ್ರಾಂಶುಪಾಲ ಡಾ.ಕೆ.ಸಿ.ರಮೇಶ್ ತಿಳಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಮಜಹರ್ ಉಲ್ಲಾ, ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ಅರುಣ್ ಕುಮಾರ್, ಯುವ ರೆಡ್‌ಕ್ರಾಸ್ ಸಂಯೋಜಕ ಡಾ.ನಾಜಿರಾಉನ್ನಿಸ, ರಾಷ್ಟ್ರೀಯ ಸೇವಾ ಯೋಜನೆಯ ರೇವಣ್ಣ ಇದ್ದರು.
ತತ್ವಾದರ್ಶ ಪಾಲಿಸಲು ಸೂಚನೆ: ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು.
‘ಸ್ವಾಮಿ ವಿವೇಕಾನಂದರ ಮಾತುಗಳು ಯುವಕರನ್ನು ಬಡಿದೆಬ್ಬಿಸುವ ರೀತಿಯಲ್ಲಿದ್ದು, ಎಲ್ಲ ಮಕ್ಕಳು ಅವರ ತತ್ವಾದರ್ಶ ಮತ್ತು ವಿಚಾರಧಾರೆಗಳನ್ನು ಅನುಸರಿಸಬೇಕು’ ಎಂದು ಸಾವಯವ ಕೃಷಿಕ ಅಭಿಲಾಷ್ ಹೇಳಿದರು.
‘ದೇಹಬಲ, ಮನೋಬಲ ಮತ್ತು ಆತ್ಮಬಲ ಅಂಶಗಳು ಉತ್ತಮ ವ್ಯಕ್ತಿಯನ್ನು ನಿರ್ಮಾಣ ಮಾಡುತ್ತವೆ. ಈ ಅಂಶಗಳನ್ನು
ಪಾಲನೆ ಮಾಡಬೇಕು’ ಎಂದು ಪ್ರಾಂಶುಪಾಲ ಬಿ.ಎಂ.ಪ್ರಜ್ವಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.