ADVERTISEMENT

ಸನಾತನ ಸಂಸ್ಥೆ ನಿಷೇಧಿಸುವ ಷಡ್ಯಂತ್ರ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 11:13 IST
Last Updated 30 ಆಗಸ್ಟ್ 2018, 11:13 IST
ಹಿಂದೂ ಸಂಘಟನೆಗಳ ಅಮಾಯಕ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಪ್ರಜಾವಾಣಿ ಚಿತ್ರ
ಹಿಂದೂ ಸಂಘಟನೆಗಳ ಅಮಾಯಕ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯನ್ನು ನಿಷೇಧ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಮನ್ವಯಕಾರ ಗುರುಪ್ರಸಾದ್ ಮಾತನಾಡಿ, ‘ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅವರಿಗೆ ಹಿಂಸೆ ನೀಡಿರುವ ಎಸ್‌ಐಟಿ ಪೊಲೀಸರು ತಮಗೆ ಬೇಕಾದ ಹಾಗೆ ಹೇಳಿಕೆಗಳನ್ನು ಬರೆಯಿಸಿಕೊಂಡಿದ್ದಾರೆ. ಅವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ’ ಎಂದು ದೂರಿದರು.

ಬಂಧಿತ 14 ಮಂದಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಆದರೆ ಅವರಲ್ಲಿ ಒಬ್ಬರೂ ಸನಾತನ ಅಥವಾ ಹಿಂದೂ ಜನ ಜಾಗೃತಿ ಸಮಿತಿ ಸದಸ್ಯರಲ್ಲ. ಆದರೂ ಈ ಸಂಘಟನೆಗಳ ಹೆಸರು ಎಳೆದು ತರಲಾಗುತ್ತಿದ್ದು, ಇದರ ಹಿಂದೆ ನಿಷೇಧ ಮಾಡುವ ಷಡ್ಯಂತ್ರ ಇದೆ. ಹಿಂದೂಗಳೆಲ್ಲರೂ ಇದರ ವಿರುದ್ಧ ಒಗ್ಗಟ್ಟಾಗಬೇಕು ಎಂದು ಹೇಳಿದರು.

ADVERTISEMENT

ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ವಿನಾಕಾರಣ ಬಂಧಿಸಿದರೆ ಪ್ರಜಾಪ್ರಭುತ್ವದ ವಿಜಯ ಎಂದು ವ್ಯಾಖ್ಯಾನಿಸುವ ವಿಚಾರವಾದಿಗಳು, ಎಡಪಂಥೀಯರನ್ನು ಬಂಧಿಸಿದಾಗ ಪ್ರಜಾಪ್ರಭುತ್ವದ ವೈಫಲ್ಯ ಎನ್ನುತ್ತಾರೆ. ದೇಶ ವಿರೋಧಿ ಚಟುವಟಿಕೆಗಳನ್ನು ಪ್ರೇರೇಪಿಸುವವರ ವಿರುದ್ಧ ಮಾತನಾಡಿದರೆ ಅದನ್ನು ಕೋಮುವಾದ ಎನ್ನುತ್ತಾರೆ ಎಂದರು.

ನಗರದ ದಾಜಿಬಾನ್ ಪೇಟೆಯಿಂದ ತಹಶೀಲ್ದಾರ್ ಕಚೇರಿ ವರೆಗೆ ಮೆರವಣಿಗೆ ನಡೆಸಿದ ಅವರು ಘೋಷಣೆಗಳನ್ನು ಕೂಗಿದರು. ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.