ADVERTISEMENT

ಅಧಿಕಾರ ಉಳಿಸಿಕೊಂಡ ಕಾಂಗ್ರೆಸ್‌

ಮಂಗಳೂರು ತಾಲ್ಲೂಕು ಪಂಚಾಯಿತಿ

ಹೈಮದ್ ಹುಸೇನ್
Published 24 ಫೆಬ್ರುವರಿ 2016, 5:34 IST
Last Updated 24 ಫೆಬ್ರುವರಿ 2016, 5:34 IST

ಮಂಗಳೂರು: ಈ ಭಾಗದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದರೂ, ಮಂಗಳೂರು ತಾಲ್ಲೂಕು ಪಂಚಾಯಿತಿಯಲ್ಲಿ ಅಧಿಪತ್ಯ ಉಳಿಸಿಕೊಳ್ಳುವಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಸಫಲವಾಗಿದೆ. ಚುನಾವಣೆ ಪ್ರಚಾರದಲ್ಲಿ ಪ್ರಬಲ ಪೈಪೋಟಿ ನೀಡುತ್ತಿದ್ದ ಕಾಂಗ್ರೆಸ್‌–ಬಿಜೆಪಿಯ ಜಿದ್ದಾಜಿದ್ದಿ ಫಲಿತಾಂಶದ ದಿನವೂ ಮುಂದುವರಿಯಿತು. ತಾಲ್ಲೂಕು ಪಂಚಾಯಿತಿಯ ಬೊಳಿಯಾರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿ ಖಾತೆ ತೆರೆದರೆ, ಬಾಳ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿ ಪ್ರಬಲ ಪೈಪೋಟಿ ನೀಡಿತು.

ಒಂದರ ಹಿಂದೆ ಇನ್ನೊಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯ ಗಳಿಸಿ ಮುನ್ನಡೆ ಸಾಧಿಸಿದರೆ, 10 ಗಂಟೆಯ ನಂತರದ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಒಂದು ಹಂತದಲ್ಲಿ ಎರಡೂ ಪಕ್ಷಗಳು ತಲಾ 18 ಕ್ಷೇತ್ರಗಳಲ್ಲಿ ಗೆಲುವು ಪಡೆಯುವ ಮೂಲಕ ಸಮಬಲ ಸಾಧಿಸಿದವು. ನಂತರ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ಬಹುಮತಕ್ಕೆ ಅಗತ್ಯವಿರುವ ಸಂಖ್ಯೆಯನ್ನು  ತಲುಪಿತು. 19 ಕ್ಷೇತ್ರಗಳಲ್ಲಿ ಜಯ ಸಾಧಿಸಿದ ಬಿಜೆಪಿ ಅಧಿಕಾರದ ಗದ್ದುಗೆಯ ತುಸು ದೂರದಲ್ಲೇ ಹಿನ್ನಡೆ ಕಂಡಿತು.

ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭವಾಯಿತು. ಆ ಸಮಯಕ್ಕಾಗಲೇ ಎರಡೂ ಪಕ್ಷಗಳ ಬೆಂಬಲಿಗರು ಮತ ಎಣಿಕೆ ಕೇಂದ್ರ ಮುಂದೆ ಜಮಾಯಿಸಿದ್ದರು. ವಿಜಯೋತ್ಸವವನ್ನು ನಿಷೇಧಿಸಿದ ಕಾರಣ ಯಾರೂ ಜಯಕಾರ ಹಾಕಲಿಲ್ಲ. ಬದಲಿಗೆ ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಮೊದಲ ಫಲಿತಾಂಶ ಬೆಳಿಗ್ಗೆ 9.45ರ ವೇಳೆಗೆ ಹೊರ ಬಿದ್ದಿತ್ತು. ಮತ ಎಣಿಕೆ ಕೇಂದ್ರದ ಹೊರಗಿದ್ದ ಕಾರ್ಯಕರ್ತರು ಸಂಭ್ರಮಿಸಿದರು.

ADVERTISEMENT

ಸಚಿವ ಖಾದರ್‌ ಭೇಟಿ
ಕಾಂಗ್ರೆಸ್‌ ಅಭ್ಯರ್ಥಿಗಳು ಜಯ ಸಾಧಿಸಿದ ವಿಷಯ ತಿಳಿದ ತಕ್ಷಣ ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರು ಗೆದ್ದ ಅಭ್ಯರ್ಥಿಗಳೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಧಾವಿಸಿದರು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೊಣಾಜೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಅತಿಹೆಚ್ಚು ಅಂತರದಿಂದ (4,480 ಮತ) ಗೆಲುವು ಸಾಧಿಸಿದ ರಶೀದಾ ಬಾನು, ನೀರುಮಾರ್ಗ ಕ್ಷೇತ್ರದಲ್ಲಿ  ಜಯಭೇರಿ ಬಾರಿಸಿದ ಸೀಮಾ ಮೆಲ್ವಿನ್‌ ಡಿಸೋಜ ಅವರು ಜತೆಗಿದ್ದರು.

ಚುನಾವಣೆ ಫಲಿತಾಂಶದ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ನಂತರ ಸಚಿವ ಖಾದರ್‌ ಅಲ್ಲಿಂದ ಹೊರಟರು. ಖಾದರ್‌ ಹೊರತಾಗಿ ಕಾಂಗ್ರೆಸ್‌ನ ಯಾವುದೇ ಸಚಿವರು, ಶಾಸಕರು ಮತ ಎಣಿಕೆ ಕೇಂದ್ರಕ್ಕೆ ಬರಲಿಲ್ಲ. ಬಿಜೆಪಿ ಮುಖಂಡರೂ ಮತ ಕೇಂದ್ರದತ್ತ ಮುಖ ಮಾಡಲಿಲ್ಲ.

ಜಿಲ್ಲಾ ಚುನಾವಣಾಧಿಯೂ ಆದ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ಮತ ಎಣಿಕೆ ಕೇಂದ್ರದಲ್ಲಿದ್ದರು. ನಗರ ಪೊಲೀಸ್‌ ಆಯುಕ್ತ ಎಂ. ಚಂದ್ರ ಶೇಖರ್‌ ಅವರು ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಬಂದೋಬಸ್ತ್‌ ಅನ್ನು ವೀಕ್ಷಿಸಿದರು. ಡಿಸಿಪಿಗಳಾದ ಕೆ.ಎಂ. ಶಾಂತರಾಜು, ಸಂಜೀವ್‌ ಎಂ ಪಾಟೀಲ್‌ ಇದ್ದರು.

***
ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯ ಜನಾದೇಶವನ್ನು ಸ್ವೀಕರಿಸುತ್ತೇವೆ. ಆತ್ಮಾವಲೋಕನ ಸಭೆ ನಡೆಸಿ, ತಪ್ಪನ್ನು ತಿದ್ದಿಕೊಳ್ಳಲಾಗುವುದು.
-ಯು.ಟಿ. ಖಾದರ್‌
ಆರೋಗ್ಯ ಸಚಿವ

***
ನನ್ನ ತಂದೆ 25 ವರ್ಷದಿಂದ ಕಾಂಗ್ರೆಸ್‌ ಪಕ್ಷದಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದಾರೆ.  ತಂದೆ ಹಾಕಿಕೊಟ್ಟ ಹಾದಿಯಲ್ಲೇ ಮುಂದುವರಿದು, ಕ್ಷೇತ್ರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ.
-ರಶೀದಾ ಬಾನು
ಜಿ.ಪಂ.ಗೆ ಆಯ್ಕೆಯಾದ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.