ಪಶ್ಚಿಮ ಘಟ್ಟದ ಶಿರಾಡಿ ಘಾಟಿಯ ಕಾಗಿನಿರೆ, ಕೆಂಚನಕುಮೇರಿ, ಬೆಟ್ಟಕುಮುರಿ ಅರಣ್ಯ ಪ್ರದೇಶದ ಕಣಿವೆಗಳ ಮೇಲೆ ‘ಎತ್ತಿನ ಹೊಳೆ ಯೋಜನೆ’ ಎಂಬ ತೂಗುಕತ್ತಿ ತೂಗುತ್ತಿದೆ. ದೊಣ್ಣೆ ನಾಯಕನ ಅಪ್ಪಣೆ ದೊರೆತ ತಕ್ಷಣ ಜೆಸಿಬಿ, ಬುಲ್ಡೋಜರ್ ನಂತಹ ಬೃಹತ್ ಯಂತ್ರಗಳು ಹಸಿರು ಕಣಿವೆಯ ಉಸಿರನ್ನು ಕಸಿದುಕೊಳ್ಳಲಿವೆ. ರಾಜಕಾರಣಿಗಳ ಅಟ್ಟಹಾಸದ ಕೇಕೆಗೆ ಮುಗ್ಧ ಶಿರಾಡಿ ಕಾನನವು ನುಚ್ಚು ನೂರಾಗಿ ಕೊಚ್ಚಿಹೋಗಲಿದೆ.
ಪಶ್ಚಿಮ ಘಟ್ಟದಿಂದ ಒಂದು ಹಿಡಿ ಮಣ್ಣನ್ನೂ ಎತ್ತಬಾರದೆನ್ನುವ ಅಭಯಾರಣ್ಯದ ಕಾಯ್ದೆ, ಕಾನೂನು ನಿಯಮಗಳು ಇಲ್ಲಿ ಅಡ್ಡಡ್ಡ ಮಲಗಿ ನೇತ್ರಾವತಿ ನದಿಯ ಮೂಲದ ಅರಣ್ಯವನ್ನು ಕೇಳುವವರಿಲ್ಲವಾಯಿತೇ? ದ.ಕ ಜಿಲ್ಲೆಯೂ ಈ ಯೋಜನೆಗೆ ವಿರೋಧವಾಗಿದ್ದು, ಈ ಯೋಜನೆಯ ಫಲಾನುಭವಿಗಳಾಗಬೇಕಿದ್ದ ಚಿಕ್ಕಬಳ್ಳಾಪುರ, ಕೋಲಾರದ ಜನತೆಯೂ ವಿರೋಧಿಸುತ್ತಿದ್ದಾರೆ.
ಹಾಗಾದರೆ ₨ 12,700 ಕೋಟಿ ಖರ್ಚುಮಾಡಿ ಈ ಯೋಜನೆ ಯಾರಿಗಾಗಿ? ಯೋಜನೆಯಿಂದ ತೊಂದರೆಗೊಳಗಾಗುವವರನ್ನು ಮತ್ತು ಫಲಾನುಭವಿಗಳನ್ನು ಒಟ್ಟು ಸೇರಿಸಿ ಚರ್ಚಿಸಿ ತಿರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಬ್ಬರದ ಸದ್ದು ಯಾಕೆ ಠುಸ್ಸಾಯಿತು? ವೀರಪ್ಪ ಮೊಯಿಲಿ ಅವರು ನೇತ್ರಾವತಿ ನದಿಯನ್ನು ತಮ್ಮದೇ ಸ್ವಂತ ಆಸ್ತಿ ಎಂಬಂತೆ ಹಠದಿಂದ ಶಂಕುಸ್ಥಾಪನೆ ಮಾಡುವುದೆಂದರೆ ನೇತ್ರಾವತಿ ನದಿಗೆ ಹಕ್ಕುದಾರರೇ ಇಲ್ಲವಾಯಿತೇ?
ಎತ್ತಿನಹೊಳೆ ಯೋಜನೆ ಬಹಳಷ್ಟು ವಿವಾದಗಳಿಗೆ ಕಾರಣವಾಗಿರುವುದು ರಾಜಕಾರಣಿಗಳ ಉದ್ಧಟತನ ಮತ್ತು ಸ್ವಯಂ ನಿಲುವುಗಳಿಂದ ಹಾಗೂ ನದಿಯ ಫಲಾನುಭವಿಗಳನ್ನೇ ಗಣನೆಗೆ ತೆಗೆದುಕೊಳ್ಳದೆ ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಂಡಿರುವುದರಿಂದ. ದ.ಕ. ಜಿಲ್ಲೆಯ ಜನರು ನೇತ್ರಾವತಿ ತಿರುವು ಯೋಜನೆಗೆ ಸಾಕಷ್ಟು ಪ್ರಬಲವಾದ ಹೋರಾಟಗಳನ್ನು ಮಾಡದೇ, ನೇತ್ರಾವತಿ ನದಿಯ ಬಗ್ಗೆ ಗಂಭೀರವಾದ ಕಾಳಜಿ ವಹಿಸದೇ ಇರುವುದು ಕೂಡಾ ಈ ಯೋಜನೆಯು ಇಷ್ಟು ದಷ್ಟಪುಷ್ಟವಾಗಲು ಇನ್ನೊಂದು ಕಾರಣ. ಎತ್ತಿನಹೊಳೆ ಯೋಜನೆಯಿಂದ ದ.ಕ. ಜಿಲ್ಲೆಗೆ ಸಾಕಷ್ಟು ಹಾನಿಯಾಗುವುದು ನಿಜವಾದರೂ, ಪಶ್ಚಿಮ ಘಟ್ಟದ ಶಿರಾಡಿ ಅರಣ್ಯ ಪ್ರದೇಶವು ತನ್ನ ಸಹಜ ನೆಮ್ಮದಿಯನ್ನು ಕಳೆದುಕೊಂಡು ಪ್ರಾಕೃತಿಕ ದುರಂತಕ್ಕೆ ಒಳಗಾಗುವುದು ಘೋರ ಸತ್ಯ.
ಎತ್ತಿನಹೊಳೆ ಯೋಜನೆಯಿಂದ 24 ಟಿಎಂಸಿ ನೀರನ್ನು ಕೊಂಡೊಯ್ಯುವುದೆಂದು ಲೆಕ್ಕಾಚಾರವಿದೆ. ನೇತ್ರಾವತಿಯ ಉಪನದಿಯಾಗಿರುವ ಕೆಂಪು ಹೊಳೆಯ ತೊರೆಗಳಾದ ಎತ್ತಿನಹೊಳೆ, ಹೊಂಗದಹೊಳೆ, ಕಾಡುಮನೆಹೊಳೆ, ಹಕ್ಕಿಹೊಳೆ, ಕೇರಿಹೊಳೆ, ಕಬ್ಬಿನಾಲೆಹೊಳೆ, ಅಡ್ಡಹೊಳೆುಂದ ನೀರೆತ್ತುವುದೆನ್ನುತ್ತದೆ ಈ ಯೋಜನೆ. ಎತ್ತಿನ ಹೊಳೆಯ ಸುತ್ತಮುತ್ತಲಿನ ಹೊಳೆಗಳಿಗೆ ನೀರು ಲಭಿಸಬೇಕಾದರೆ ಶಿರಾಡಿ ರಕ್ಷಿತಾರಣ್ಯದ ಬೆಟ್ಟಕುಮುರಿ, ಕಾಗಿನರೆ, ಕೆಂಚನಕುಮೇರಿ, ಮತ್ತಿಕೋಲು, ಅಬ್ಲುಬುಡಿ ಅರಣ್ಯಪ್ರದೇಶಗಳು ಸುರಕ್ಷಿತವಾಗಿರಬೇಕು. ಅಲ್ಲಿನ ಯಾವುದೇ ಸೂಕ್ಷ್ಮ ಜೈವಿಕ ತಾಣಗಳಿಗೆ ಸ್ವಲ್ಪ ಹಾನಿಯಾದರೂ ಅಲ್ಲಿನ ಹೊಳೆಗಳಲ್ಲಿ ನೀರಿನ ಹರಿವು ಕಡಿಮೆಯಾಗಿ ಹೊಳೆಗಳು ಬತ್ತಿ ಹೋದೀತು. ಹೀಗಿರುವಾಗ ಈ ಸೂಕ್ಷ್ಮ ಪ್ರದೇಶಗಳಲ್ಲಿ ಅಣೆಕಟ್ಟು, ಮಾಲಾ ಕಾಲುವೆ ಬೃಹತ್ ಕೊಳವೆ ಮಾರ್ಗ ನಿರ್ಮಿಸಿದರೆ, ರಾಕ್ಷಸಾಕಾರದ ಬೃಹತ್ ಯಂತ್ರಗಳು ತಮ್ಮ ಅಧಿಪತ್ಯ ಸ್ಥಾಪಿಸಿಕೊಂಡರೆ ಹೊಳೆಯ ಗತಿ ಏನಾದೀತು?
ಎತ್ತಿನಹೊಳೆ ಯೋಜನೆಯು ನೇತ್ರಾವತಿ ನದಿ ತಿರುವಿಗೆ ಒಂದು ಪೀಠಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಅತೀ ಶೀಘ್ರದಲ್ಲೇ ನೇತ್ರಾವತಿ ನದಿತಿರುವು ಯೋಜನೆಯನ್ನು ಜಾರಿಗೆ ತರುವುದು ನಿಶ್ಚಿತ. ಚಿಕ್ಕಬಳ್ಳಾಪುರ ಕೋಲಾರದ ಜನತೆಗೂ ಎತ್ತಿನ ಹೊಳೆ ಯೋಜನೆಯಲ್ಲಿ ನಂಬಿಕೆ ಇಲ್ಲವಾಗಿದ್ದು, ಅವರ ಚಿತ್ತದ ಹುತ್ತದಲ್ಲಿ ಪ್ರಬಲವಾಗಿರುವ ಶಾಶ್ವತ ನೀರಾವರಿ ಯೋಜನೆ ಎಂಬ ನೇತ್ರಾವತಿ ನದಿ ತಿರುವು ಯೋಜನೆಯೇ ಬೇಕೆಂಬುದು ಅವರ ಹಠವೂ ಆಗಿರುತ್ತದೆ. ಪರಮಶಿವಯ್ಯನವರು ಅಲ್ಲಿನ ಜನರಿಗೆ ನೇತ್ರಾವತಿ ನದಿ ತಿರುವು ಯೋಜನೆಯೇ ಕೋಲಾರದಂತಹ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಎಂಬ ಛೂಮಂತ್ರವನ್ನು ಸುರಿದು ಸರಿದಿದ್ದಾರೆ.
ಲೋಕಸಭಾ ಚುನಾವಣೆ ಬಂದಿದೆ. ಮತ್ತೆ ಮನೆ ಬಾಗಿಲಿಗೆ ರಾಜಕಾರಣಿಗಳು ಬಂದು ಅದೇ ಹಳಸಲು ಆಶ್ವಾಸನೆಗಳ ವಾಸನೆಯೊಂದಿಗೆ ಮತ ಬೇಡಲು ಬರುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುತ್ತೇವೆ ಎಂದು ಸುಳ್ಳು ಭರವಸೆಗಳನ್ನು ನೀಡುತ್ತಾರೆ.
ಎತ್ತಿನಹೊಳೆ ವಿರೋಧಿ ಎನ್ನುವ ಅಭ್ಯರ್ಥಿಯೇ ಇನ್ನೊಂದು ಕಡೆಯಲ್ಲಿ ಇಡೀ ದ.ಕ.ಜಿಲ್ಲೆಯ ನೆಲ, ಜಲ, ವಾಯುಮಾಲಿನ್ಯ ಮಾಡುವಂತಹ ಎತ್ತಿನಹೊಳೆ ಯೋಜನೆುಂದಲೂ ಭೀಕರವಾಗಿರುವ ಪಿಸಿಪಿಐಆರ್ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಂಚು ಮಾಡುತ್ತಾ ಇದ್ದಾರೆ. ಎತ್ತಿನಹೊಳೆ ಯೋಜನೆ ಚಾಲನೆಯಾಗುವಾಗ ಅದೇ ಆಳುವ ಪಕ್ಷದ ಸಂಸದರಾಗಿದ್ದವರು ಕೂಡಾ ಆಗ ಸುಮ್ಮನಿದ್ದು ಈ ಯೋಜನೆಗೆ ‘ಜೈ’ ಎಂದವರು ಈಗ ಎತ್ತಿನಹೊಳೆ ಯೋಜನೆಗೆ ತನ್ನದು ಕೂಡಾ ವಿರೋಧವಿದೆ ಎಂದು ಮತದಾರರನ್ನು ವಂಚಿಸುತ್ತಿದ್ದಾರೆ. ಅಭ್ಯರ್ಥಿಗಳ ಈ ವಿರೋಧ ಸ್ವಯಂ ನಿಲುವುಗಳೇ ಹೊರತು ಪಕ್ಷಗಳ ನಿಲುವುಗಳಲ್ಲ.
ನಿಮ್ಮ ಮನೆ ಬಾಗಿಲಿಗೆ ಬಂದು ಮತ ಬೇಡುವವರಿಗೆ ನೇತ್ರಾವತಿ ನದಿ ತಿರುವಿನ ಬಗ್ಗೆ ಪ್ರಶ್ನಿಸಿ. ನೇತ್ರಾವತಿ ನದಿಯ ಮೂಲಕ ನಮಗೆ ವಂಚನೆ ಮಾಡಿರುವಂತಹ ನಿಮಗೆ ನಮ್ಮ ಮತ ನೀಡುವುದಿಲ್ಲವೆಂದು ಚುನಾವಣಾ ಬಹಿಷ್ಕಾರ ಮಾಡುವೆವೆಂದು ಉತ್ತರ ನೀಡಿ. ಮತ ಪೆಟ್ಟಿಗೆಯಲ್ಲಿ ‘ನೋಟಾ’ ಮತ ಚಲಾಯಿಸುವುದರ ಮೂಲಕ ಎತ್ತಿನಹೊಳೆ ಯೋಜನೆಗೆ ಬೆಂಬಲ ನೀಡುವ ಪಕ್ಷಗಳಿಗೆ ದ.ಕ. ಜಿಲ್ಲೆಯ ಜನರು ಸೂಕ್ತ ಪಾಠ ಕಲಿಸಬೇಕಾದ ಅನಿವಾರ್ಯತೆ ಇದೆ. ಅಪರಾಧಿಗಳಾಗದೇ ನೇತ್ರಾವತಿ ನದಿಯನ್ನೇ ಅಪಹರಿಸುವಂತಹ ರಾಜಕಾರಣಿಗಳಿಗೆ ಮತ್ತೆ ನಾವು ಮತ ನೀಡಿದಲ್ಲಿ ಮುಂದೊಂದು ದಿನ ಕರಾವಳಿಯನ್ನೇ ಸರ್ವನಾಶ ಮಾಡಿಯಾರು, ಎಚ್ಚರಿಕೆ...!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.