ಮಂಗಳೂರು: ನಗರದ ವೆಲೆನ್ಸಿಯಾದಲ್ಲಿ ಜುಲೈ 1ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡ ಲೀನಾ ಬಿನೋಯ್ (42) ಅವರ ಮಿದುಳು ನಿಷ್ಕ್ರಿಯವಾಗಿರುವುದರಿಂದ ಅವರ ಅಪೇಕ್ಷೆಯಿದ್ದಂತೆ ಪಿತ್ತಜನಕಾಂಗ, ಕಣ್ಣಿನ ಕಾರ್ನಿಯಾ ಮತ್ತು ಎರಡು ಕಿಡ್ನಿಗಳನ್ನು ದಾನ ಮಾಡಲಾಗಿದೆ.
ವೆಲೆನ್ಸಿಯಾದಲ್ಲಿ ಬುಧವಾರ ಸಂಜೆ 4.30ಕ್ಕೆ ಅಪಘಾತದಲ್ಲಿ ಗಾಯಗೊಂಡ ಲೀನಾ ಅವರಿಗೆ ಹತ್ತಿರದ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಬಳಿಕ ರಾತ್ರಿ ಎ. ಜೆ. ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರ ಮಿದುಳು ನಿಷ್ಕ್ರಿಯವಾಗಿರುವುದಾಗಿ ವೈದ್ಯರು ಹೇಳಿದರು. ಮಿದುಳು ನಿಷ್ಕ್ರಿಯವಾದಲ್ಲಿ ಅಂಗಾಂಗಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ಆದರೆ ಇಂತಹ ಸ್ಥಿತಿಯಲ್ಲಿ ಅಂಗಾಂಗ ದಾನ ಮಾಡುವ ಅವಕಾಶ ವೈದ್ಯವಿಜ್ಞಾನದಲ್ಲಿ ಇರುವುದರಿಂದ ಲೀನಾ ಅವರ ಅಂಗಾಂಗ ದಾನ ಮಾಡಲು ಕುಟುಂಬದವರು ಒಪ್ಪಿಗೆ ನೀಡಿದ್ದಾರೆ.
ಲೀನಾ ಅವರಿಗೆ ಅಂಗಾಂಗ ದಾನ ಮಾಡಬೇಕು ಎಂಬ ಅಪೇಕ್ಷೆ ಇದ್ದುದಾಗಿಯೂ ಕುಟುಂಬಿಕರು ತಿಳಿಸಿದಾಗ ಎ.ಜೆ.ಆಸ್ಪತ್ರೆಯ ವೈದ್ಯರು ಕಾರ್ಯಪ್ರವೃತ್ತರಾದರು. ಬೆಂಗಳೂರಿನಲ್ಲಿರುವ ಅಂಗಾಂಗ ಕಸಿಗೆ ಸಂಬಂಧಿಸಿದ ವಲಯ ಸಮಿತಿಯ ವೈದ್ಯರ ತಂಡಕ್ಕೆ ಮಾಹಿತಿ ನೀಡಿದಾಗ ಅವರು ಶುಕ್ರವಾರ ಮಂಗಳೂರಿಗೆ ಬಂದು ಲೀನಾ ಅವರ ಪಿತ್ತಜನಕಾಂಗವನ್ನು ತೆಗೆದು ಮಧ್ಯಾಹ್ನ 12.15ರ ಜೆಟ್ ಏರ್‌ವೇಸ್‌ನಲ್ಲಿ ಬೆಂಗಳೂರಿಗೆ ರವಾನಿಸಿದ್ದಾರೆ.
ನಂತರ ಒಂದು ಕಿಡ್ನಿಯನ್ನು ತೆಗೆಯಲಾಗಿದ್ದು ಎ.ಜೆ. ಆಸ್ಪತ್ರೆಯಲ್ಲಿಯೇ ಇರುವ ರೋಗಿಯೊಬ್ಬರಿಗೆ ದಾನ ಮಾಡಲಾಗಿದೆ. ಇನ್ನೊಂದು ಕಿಡ್ನಿಯನ್ನು ಬೆಂಗಳೂರಿಗೆ ಸಂಜೆ 4.30ರ ವಿಮಾನದಲ್ಲಿ ರವಾನಿಸಲಾಗಿದ್ದು, ಬೆಂಗಳೂರಿನ ಆಸ್ಪತ್ರೆಗಳ ಅಗತ್ಯ ಗಮನಿಸಿಕೊಂಡು ದಾನ ಮಾಡಲಾಗುವುದು ಎಂದು ಎ. ಜೆ. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಪ್ರಸಾದ್ ತಿಳಿಸಿದ್ದಾರೆ.
ಲೀನಾ ಅವರ ಕಾರ್ನಿಯಾವನ್ನು ತೆಗೆಯಲಾಗಿದ್ದು ಐ ಬ್ಯಾಂಕ್‌ನಲ್ಲಿ ಇರಿಸಲಾಗಿದೆ. ಅಗತ್ಯ ಇರುವವರಿಗೆ ಅದನ್ನು ಕಸಿ ಮಾಡಲಾಗುವುದು ಎಂದು ಅವರು ಹೇಳಿದರು. ಬೆಳಕು ಕಾಣಲು ಹವಣಿಸುವವರಿಗೆ ಲೀನಾ ಅವರ ಕಣ್ಣಗಳು ಬೆಳಕು ನೀಡಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.