ADVERTISEMENT

ಕೆಐಓಸಿಎಲ್‌ಗೆ ಮರುಜೀವ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 11:41 IST
Last Updated 21 ಮಾರ್ಚ್ 2018, 11:41 IST
ಕೆಐಓಸಿಎಲ್‌ಗೆ ಮರುಜೀವ
ಕೆಐಓಸಿಎಲ್‌ಗೆ ಮರುಜೀವ   

ಹಲವು ವರ್ಷಗಳಿಂದ ಎದುರಿಸುತ್ತಿದ್ದ ಕಬ್ಬಿಣ ಅದಿರು ಸಮಸ್ಯೆಗಳನ್ನು ಮೇಕ್ ಇನ್ ಇಂಡಿಯಾ ಮೂಲಕ ಬಗೆಹರಿಸಿಕೊಂಡ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್) ಇದೀಗ ಹೊಸ ಅಧ್ಯಾಯದೊಂದಿಗೆ ವಿದೇಶಗಳಿಗೆ ಅದಿರು ಉಂಡೆಗಳನ್ನು ರಫ್ತು ಮಾಡುವತ್ತ ದಾಪುಗಾಲು ಹಾಕುತ್ತಿದೆ.

ಉತ್ಕೃಷ್ಟ ಅದಿರು ಲಭ್ಯವಾಗದ ಕಾರಣ ಹಲವು ವರ್ಷಗಳಿಂದ ಅದಿರು ಉಂಡೆಗಳ ಉತ್ಪಾದನೆಗೆ ಭಾರಿ ಹಿನ್ನಡೆಯಾಗಿತ್ತು. ಹೀಗಾಗಿ ವಿದೇಶಗಳಿಗೆ ಅದಿರು ಉಂಡೆಗಳ ರಫ್ತಿಗೆ ತೊಡಕಾಗಿತ್ತು. ಇದೀಗ ಉತ್ತಮ ಗುಣಮಟ್ಟದ ಅದಿರು ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ ಸಂಸ್ಥೆಯು ಅದಿರು ಉಂಡೆಗಳಿಗೆ ಬೇಡಿಕೆ ಹೆಚ್ಚಿಸಿಕೊಂಡಿದೆ. ಮಂಗಳೂರಿನಲ್ಲಿ ಅದಿರು ಉಂಡೆಗಳನ್ನು ಉತ್ಪಾದಿಸಿ ರಫ್ತು ಮಾಡುವ ವಹಿವಾಟು ಚುರುಕುಗೊಂಡಿದೆ.

ಕಳೆದ ಐದು ವರ್ಷಗಳಿಂದ ಜಪಾನ್‌ಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಅದಿರು ಉಂಡೆ ರಫ್ತು ಇದೀಗ ಮತ್ತೆ ಪುನಾರಂಭಗೊಂಡಿದೆ. ಇರಾನ್, ಚೀನಾ, ದಕ್ಷಿಣ ಕೊರಿಯಾಗಳಿಗೆ ಇತ್ತೀಚೆಗೆ ರಫ್ತು ಮಾಡಲಾಗುತ್ತಿದ್ದು, ಲಾಭದತ್ತ ಕೆಐಒಸಿಎಲ್ ಹೆಜ್ಜೆ ಇಟ್ಟಿದೆ. ದಕ್ಷಿಣ ಕೊರಿಯಾ ರಾಷ್ಟ್ರಕ್ಕೆ ಅತಿ ಹೆಚ್ಚು ಅದಿರು ಉಂಡೆ ರಫ್ತು ಮಾಡಲಾಗುತ್ತಿದ್ದು, ಪ್ರತಿ ತಿಂಗಳು ಸುಮಾರು ಒಂದು ಲಕ್ಷ ಟನ್ ರಫ್ತಾಗುತ್ತಿದೆ.

ADVERTISEMENT

ಐದು ವರ್ಷಗಳ ಬಳಿಕ ಜಪಾನ್‌ಗೆ 60 ಸಾವಿರಕ್ಕೂ ಹೆಚ್ಚು ಟನ್ ರಫ್ತಾಗುತ್ತಿದೆ. ಕಳೆದ ಒಂದು ವರ್ಷದ ಹಿಂದೆ ಇರಾನ್‌ನೊಂದಿಗೆ 66,500 ಟನ್ ರಫ್ತು ವ್ಯವಹಾರ ಕುದುರಿಸಿಕೊಂಡು ರಫ್ತು ಮಾಡಲಾಗುತ್ತಿದೆ. ಚೀನಾಕ್ಕೂ ಬೇಡಿಕೆಗೆ ತಕ್ಕಂತೆ ಅದಿರು ಉಂಡೆ ರಫ್ತು ಮಾಡಲಾಗುತ್ತಿದೆ. ಉತ್ಕೃಷ್ಟ ಗುಣಮಟ್ಟದ ಕಬ್ಬಿಣದ ಅದಿರನ್ನು ಬ್ರೆಜಿಲ್ ರಾಷ್ಟ್ರದಿಂದ ಆಮದು ಮಾಡಿಕೊಂಡು ಅದನ್ನು ಮಂಗಳೂರಿನಲ್ಲಿ ಉಂಡೆ ಮಾಡಿ ರಫ್ತು ಮಾಡಲಾಗುತ್ತಿದೆ.

ಛತ್ತೀಸ್‌ಗಢದ ಕೆರಂದೂರು ಮತ್ತು ಬಚೇರಿಯಿಂದ ಕಬ್ಬಿಣದ ಅದಿರು ಪಡೆಯಬಹುದು. ಆದರೆ, ಬ್ರೆಜಿಲ್‌ನ ಗುಣಮಟ್ಟ ಇಲ್ಲಿನ ಅದಿರಿಗೆ ಇರುವುದಿಲ್ಲ. ಅಲ್ಲದೇ, ಛತ್ತೀಸ್‌ಗಡದಿಂದ ಕಬ್ಬಿಣದ ಅದಿರು ತರಲು ಬ್ರೆಜಿಲ್‌ಗಿಂತ ಹೆಚ್ಚಿನ ಮೊತ್ತ ಭರಿಸಬೇಕಾಗುತ್ತದೆ. ಛತ್ತೀಸ್‌ಗಡದಿಂದ ರೈಲಿನಲ್ಲಿ ವಿಶಾಖಪಟ್ಟಣಂ ಬಂದರಿಗೆ ತಂದು ಅಲ್ಲಿಂದ ಅದಿರನ್ನು ಮಂಗಳೂರಿಗೆ ತರಬೇಕು. ಇದು ದುಬಾರಿಯಾಗಲಿದೆ. ಹೀಗಾಗಿ ಬ್ರೆಜಿಲ್‌ನಿಂದ ಕಡಿಮೆ ಮೊತ್ತದಲ್ಲಿ ಉತ್ಕೃಷ್ಟ ಕಬ್ಬಿಣ ಅದಿರು ಲಭ್ಯವಾಗುವುದರಿಂದ ಅಲ್ಲಿಂದ ಆಮದು ಮಾಡಿಕೊಂಡು ಅದಿರು ಉಂಡೆಗಳನ್ನು ತಯಾರಿಸಲಾಗುತ್ತದೆ ಎನ್ನುತ್ತಾರೆ ಕೆಐಒಸಿಎಲ್‌ನ ಅಧಿಕಾರಿಗಳು.

ಲಾಭದತ್ತ ಕೆಐಒಸಿಎಲ್‌: ನಷ್ಟದ ಹಾದಿಯಲ್ಲಿದ್ದ ಸಂಸ್ಥೆಯು ಇದೀಗ ಲಾಭದತ್ತ ಸಾಗಿದ್ದು, ಕಬ್ಬಿಣದ ಅದಿರು ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಶೀಘ್ರದಲ್ಲಿಯೇ ರಾಜ್ಯದಲ್ಲಿ ಅದಿರು ತೆಗೆಯುವ ಕಾರ್ಯ ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ. ಕುದುರೆಮುಖದಲ್ಲಿನ ಗಣಿಗಾರಿಕೆ ಸ್ಥಗಿತಗೊಂಡ ತರುವಾಯ ಬಳ್ಳಾರಿ ಗಣಿಗಾರಿಕೆಗೆ ಸುಪ್ರೀಂ ಕೋರ್ಟ್‌ ನಿಷೇಧ ಹೇರಿತು. ಪರಿಣಾಮ ಅದಿರು ಉಂಡೆ ಉತ್ಪನ್ನಕ್ಕೆ ಭಾರಿ ಹಿನ್ನಡೆ ಉಂಟಾಗಿತ್ತು. ಮಂಗಳೂರಿನ ಅದಿರು ಉಂಡೆ ಉತ್ಪನ್ನ ಘಟಕಕ್ಕೆ ಕೆಲಸವೇ ಇಲ್ಲದಂತಾಯಿತು. ವರ್ಷದಲ್ಲಿ ಕೇವಲ 20-30 ದಿನಗಳ ಕಾಲ ಮಾತ್ರ ಕೆಲಸ ಮಾಡಿರುವ ಉದಾಹರಣೆಗಳಿವೆ. ಆದರೆ, ಈಗ ಅದಿರು ನಿರಂತರ ಕೆಲಸ ನಡೆಯುವಂತಾಗಿದೆ ಎಂದು ವಿವರಿಸುತ್ತಾರೆ ಅಧಿಕಾರಿಗಳು.

ಕಬ್ಬಿಣದ ಅದಿರು ಸಂಸ್ಕರಿಸಿ ಸಣ್ಣ ಉಂಡೆಗಳನ್ನಾಗಿ (ಪೆಲೆಟ್) ಮಾಡುವ ಘಟಕ ಸ್ಥಾಪಿಸಲು ಕುದುರೆಮುಖ ಕಬ್ಬಿಣ ಅದಿರು ಕಂಪನಿ (ಕೆಐಒಸಿಎಲ್) ಆಂಧ್ರಪ್ರದೇಶದ ಖನಿಜ ಅಭಿವೃದ್ಧಿ ನಿಗಮ (ಎಪಿಎಂಡಿಸಿ) ಮತ್ತು ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (ಆರ್‌ಐಎನ್‌ಎಲ್) ಜತೆ ಒಪ್ಪಂದ ಮಾಡಿಕೊಂಡಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ₹1 ಸಾವಿರ ಕೋಟಿಯಿಂದ ₹1,500 ಕೋಟಿವರೆಗೆ ಹೂಡಿಕೆ ಮಾಡಿ, ಈ ಘಟಕ ಸ್ಥಾಪಿಸಲಾಗುತ್ತಿದೆ. ವಾರ್ಷಿಕ 12 ಲಕ್ಷ ಟನ್ ಕಬ್ಬಿಣ ಉಂಡೆ ತಯಾರಿಸುವ ಸಾಮರ್ಥ್ಯದ ಘಟಕ ಇದಾಗಲಿದೆ. ಅನಂತಪುರ ಜಿಲ್ಲೆಯ ನೇಮಕಲ್ ಮತ್ತು ಹಿರದಹಾಳು ಗ್ರಾಮಗಳಲ್ಲಿ ಕೆಐಒಸಿಎಲ್ ಈ ಕಂಪೆನಿಗಳ ಸಹಭಾಗಿತ್ವದಲ್ಲಿ ಕಬ್ಬಿಣ ಅದಿರು ಶೋಧ ನಡೆಸಲಿದ್ದು, ಈ ಪಾಲುದಾರಿಕೆ ಸಂಸ್ಥೆಯಲ್ಲಿ ಕೆಐಒಸಿಎಲ್ ಶೇ 51ರಷ್ಟು ಮತ್ತು ಎಪಿಎಂಡಿಸಿ ಶೇ 49ರಷ್ಟು ಪಾಲು ಹೊಂದಿವೆ. ಇಲ್ಲಿ ಸಂಸ್ಕರಿಸುವ ಅದಿರನ್ನು ‘ಆರ್‌ಎನ್‌ಐಎಲ್’ಗೆ ಪೂರೈಸಲಾಗುತ್ತದೆ. ಘಟಕ ಆರಂಭವಾಗಲು ಇನ್ನೂ 36 ತಿಂಗಳು ಬೇಕಾಗುತ್ತದೆ, ಇದರಿಂದ 3,500 ಉದ್ಯೋಗಾವಕಾಶ ಸೃಷ್ಟಿಯಾಗಲಿವೆ.

ಕೆಐಒಸಿಎಲ್‌ ಕಾರ್ಯಚಟುವಟಿಕೆ ವಿಸ್ತರಣೆ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ (ಕೆಐಒಸಿಎಲ್‌) ಅಧುನೀಕರಣ ಹಾಗೂ ವಿಸ್ತರಣಾ ಚಟುವಟಿಕೆಗಾಗಿ ಕೇಂದ್ರ ಸರ್ಕಾರ ₹200 ಕೋಟಿ ಮಂಜೂರು ಮಾಡಲಾಗಿದೆ.

ಕೆಐಒಸಿಎಲ್‌ ಮಂಗಳೂರಿಗೆ ಸೀಮಿತ ಆಗುವುದು ಬೇಡ ಎಂಬ ಉದ್ದೇಶದಿಂದ ಚಟುವಟಿಕೆಗಳನ್ನು ದೇಶದ ವಿವಿಧೆಡೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ಬಳ್ಳಾರಿಯ ದೇವದಾರಿ ವಲಯದಲ್ಲಿ 470 ಹೆಕ್ಟೇರ್‌ ಪ್ರದೇಶದಲ್ಲಿ ಕಂಪನಿಯು ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ರಾಜ್ಯ ಸರ್ಕಾರದಿಂದ ಕೆಲ ಪ್ರಕ್ರಿಯೆಗಳು ಬಾಕಿ ಉಳಿದಿವೆ ಎಂದು ಕೇಂದ್ರ ಉಕ್ಕು ಖಾತೆ ಸಚಿವ ಚೌಧರಿ ಬೀರೇಂದ್ರ ಸಿಂಗ್ ಹೇಳುತ್ತಾರೆ.

‘ನಂಜನಗೂಡಿನ ಉದೂರು ಬಳಿ ಚಿನ್ನದ ನಿಕ್ಷೇಪದ ಶೋಧ ಕಾರ್ಯವನ್ನು ಕೆಐಒಸಿಎಲ್‌ಗೆ ವಹಿಸಲಾಗಿದೆ. ವಿಶಾಖಪಟ್ಟಣದ ರಾಷ್ಟ್ರೀಯ ಇಸ್ಪಾತ್‌ ನಿಗಮ ಲಿಮಿಟೆಡ್‌ (ಆರ್‌ಐಎನ್‌ಎಲ್‌) ಜತೆಗೆ ಕೆಐಒಸಿಎಲ್‌ ಒಪ್ಪಂದ ಮಾಡಿಕೊಂಡಿದ್ದು, ವಿಶಾಖಪಟ್ಟಣದಲ್ಲಿ ಕಬ್ಬಿಣದ ಉಂಡೆಗಳ ತಯಾರಿಕೆ ಘಟಕವನ್ನು ಸ್ಥಾಪಿಸಲಿದೆ. ಇಲ್ಲಿ ಉತ್ಪಾದಿಸುವ ಕಬ್ಬಿಣವನ್ನು ಆರ್‌ಐಎನ್‌ಎಲ್‌ಗೆ ಒದಗಿಸಲಾಗುತ್ತಿದ್ದು, ಹೆಚ್ಚಿನ ಕಬ್ಬಿಣವನ್ನು ವಿದೇಶಗಳಿಗೆ ರಫ್ತು ಮಾಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಗಣಿಗಾರಿಕೆ ಮತ್ತು ಖನಿಜ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಷ್ಟ್ರೀಯ ಖನಿಜ ಶೋಧನಾ ಕಾರ್ಯಕ್ರಮದಡಿ ಕುದುರೆಮುಖ ಕಬ್ಬಿಣ ಅದಿರು ಕಂಪನಿ (ಕೆಐಒಸಿಎಲ್‌)ಗೆ ಚಿನ್ನದ ನಿಕ್ಷೇಪ ಶೋಧನೆಗೆ ಅನುವು ಮಾಡಿಕೊಡಲಾಗಿದೆ.

ಮೈಸೂರಿನಲ್ಲಿಚಿನ್ನದ ನಿಕ್ಷೇಪ ಶೋಧಕ್ಕಾಗಿ 200 ಚ.ಕಿ.ಮೀ. ಪ್ರದೇಶವನ್ನು ಈಗಾಗಲೇ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. ಇದರ ಜತೆಗೆ ತಮಿಳುನಾಡಿನ ತಿರುಪುರದಲ್ಲಿ 100 ಚ.ಕಿ.ಮೀ. ಪ್ರದೇಶದಲ್ಲಿ ಕಬ್ಬಿಣದ ಅದಿರು ಶೋಧನೆ ನಡೆಸುವುದರೊಂದಿಗೆ ಮುಂದಿನ 6 ತಿಂಗಳೊಳಗೆ ಇದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ.

₹28 ಕೋಟಿ ಲಾಭ ಕೆಐಓಸಿಎಲ್‌ ಈ ವರ್ಷ 10.33 ಲಕ್ಷ ಟನ್‌ ಕಬ್ಬಿಣದ ಉಂಡೆಗಳನ್ನು ವಿದೇಶಗಳಿಗೆ ರಫ್ತು ಮಾಡಿದ್ದು, 7.3 ಲಕ್ಷ ಟನ್‌ ಕಬ್ಬಿಣದ ಉಂಡೆಗಳನ್ನು ದೇಶಿಯ ಘಟಕಗಳಿಗೆ ಪೂರೈಸಿದೆ. ಈ ವರ್ಷ ಒಟ್ಟಾರೆ ₹28 ಕೋಟಿ ಲಾಭ ಗಳಿಸಿದ್ದು, ತೆರಿಗೆ ಕಳೆದು ₹18.27 ಕೋಟಿ ನಿವ್ವಳ ಲಾಭ ಗಳಿಸಿದೆ.

ದೇಶದಾದ್ಯಂತ ಸದ್ಯಕ್ಕೆ 12 ಕೋಟಿ ಟನ್ ಕಬ್ಬಿಣ ಉತ್ಪಾದನೆ ಮಾಡಲಾಗುತ್ತಿದ್ದು, 2020ರ ವೇಳೆಗೆ ಇದನ್ನು 15 ಕೋಟಿ ಟನ್‌ಗೆ ಏರಿಸುವ ಉದ್ದೇಶವಿದೆ. 2030ರವರೆಗೆ 30 ಕೋಟಿ ಟನ್‌ ಕಬ್ಬಿಣ ಉತ್ಪಾದಿಸಲು ಉಕ್ಕು ನೀತಿ–2017ರ ಅಡಿಯಲ್ಲಿ ಕೇಂದ್ರ ಸರ್ಕಾರ ಯೋಜನೆಗಳನ್ನು ರೂಪಿಸಿದೆ.

***

ಮೇಕ್ ಇಂಡಿಯಾ ಪರಿಕಲ್ಪನೆ ಅಡಿ ಅದಿರು ಉಂಡೆಗಳನ್ನು ಉತ್ಪನ್ನ ಮಾಡಲಾಗುತ್ತಿದೆ. ಇರಾನ್ ರಾಷ್ಟ್ರಕ್ಕೆ ಸಂಸ್ಥೆಯಿಂದ ಮೊದಲ ಬಾರಿಗೆ ಮತ್ತು ಜಪಾನ್‌ಗೆ ಐದು ವರ್ಷಗಳ ನಂತರ ಅದಿರು ಉಂಡೆಗಳನ್ನು ರಫ್ತು ಮಾಡುತ್ತಿರುವುದು ಸಂಭ್ರಮದ ಕ್ಷಣವಾಗಿದೆ. ದಕ್ಷಿಣ ಕೊರಿಯಾಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ. ಮಂಗಳೂರಿನಲ್ಲಿ ಅದಿರು ಉಂಡೆ ಉತ್ಪಾದನೆ ನಿರಂತರವಾಗಿ ನಡೆಯುತ್ತಿರುವುದರಿಂದ ವ್ಯವಹಾರ ಲಾಭದತ್ತ ತಿರುಗಿದೆ.
– ಎಂ.ವಿ.ಸುಬ್ಬಾರಾವ್, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ

**

ಕೇಂದ್ರ ಸರ್ಕಾರದ ಉಕ್ಕು ನೀತಿ 2017 ರ ಅಡಿಯಲ್ಲಿ ಮಂಗಳೂರಿನ ಕೆಐಒಸಿಎಲ್‌ ಘಟಕದಲ್ಲಿ ಡಕ್ಟೈಲ್‌ ಐರನ್‌ (ಡಿಐ) ಪೈಪ್‌ಗಳನ್ನು ಉತ್ಪಾದಿಸಲು ತೀರ್ಮಾನಿಸಲಾಗಿದೆ.
–ಅರುಣಾ ಶರ್ಮಾ, ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.