ADVERTISEMENT

ಖಾಸಗಿ ಬಸ್‌ ದರದಲ್ಲೇ ಜೆನರ್ಮ್‌ ಬಸ್‌ ಓಡಾಟ

18ರೊಳಗೆ ನಗರದ ರಸ್ತೆಗಿಳಿಯಲಿವೆ 17 ಬಸ್‌ಗಳು

ಹೈಮದ್ ಹುಸೇನ್
Published 8 ಡಿಸೆಂಬರ್ 2015, 5:26 IST
Last Updated 8 ಡಿಸೆಂಬರ್ 2015, 5:26 IST

ಮಂಗಳೂರು: ಜೆನರ್ಮ್‌ ಯೋಜನೆ­ಯಡಿಯಲ್ಲಿ ನಗರಕ್ಕೆ ಮಂಜೂರಾಗಿರುವ 35 ಬಸ್‌ಗಳ ಪೈಕಿ ಪರವಾನಗಿ ಪಡೆದುಕೊಂಡಿರುವ 17 ಬಸ್‌ಗಳ ಓಡಾಟಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರಾದೇಶಿಕ ಸಾರಿಗೆ ಅಧಿಕಾರಿ ನಿಗದಿ ಪಡಿಸಿದ ದರವನ್ನೇ ಕೆಎಸ್‌ಆರ್‌ಟಿಸಿ ಗ್ರಾಹಕರಿಗೆ ವಿಧಿಸಲಿದೆ.

ಡಿ.18ರೊಳಗೆ ಬಸ್‌ಗಳು ರಸ್ತೆಗಿಳಿಯಬೇಕು. ಇದಕ್ಕಾಗಿ ನಗರ ವ್ಯಾಪ್ತಿಯಲ್ಲಿ ಬಸ್‌ಗಳ ಪರೀಕ್ಷಾರ್ಥ ಓಡಾಟವೂ ನಡೆದಿದ್ದು, ಪ್ರತಿಯೊಂದು ಬಸ್‌ ತಂಗುದಾಣ ಹೆಸರನ್ನು ಬಸ್‌ ಒಳಗೆ ಘೋಷಿಸಲು ಬೇಕಾಗುವ ವ್ಯವಸ್ಥೆಯನ್ನು ಜಾರಿಗೆ ತರುವ ಕೆಲಸ ಭರದಿಂದ ಸಾಗಿದೆ. ಅಲ್ಲದೆ, ಪ್ರತಿಯೊಂದು ಬಸ್‌ ತಂಗುದಾಣ­ದಲ್ಲಿ ಡಿಜಿಟಲ್‌ ಬೋರ್ಡ್‌ ಅನ್ನು ಅಳವಡಿಸುವ ಕುರಿತು ಚಿಂತನೆ ನಡೆದಿದೆ.

‘ಜೆನರ್ಮ್‌ ಬಸ್‌ಗಳನ್ನು ಓಡಿಸಲು ಡಿ. 18ರವರೆಗೆ ಸಮಯವಿದೆ. ಆದ್ದ­ರಿಂದ ಪ್ರತಿಯೊಂದು ಬಸ್‌ ನಿಲ್ದಾಣಗಳ ಹೆಸರು ಘೋಷಿಸಲು ವಾಯ್ಸ್‌ ರೆಕಾ­ರ್ಡಿಂಗ್‌ ಕೆಲಸ ನಡೆಯುತ್ತಿದೆ. ಇದಕ್ಕಾಗಿ ನಗರದಲ್ಲಿ ಬಸ್‌ಗಳು ಪರೀಕ್ಷಾರ್ಥವಾಗಿ ಓಡಾಟ ನಡೆಸಿವೆ’ ಎಂದು ಕೆಎಸ್‌ಆರ್‌­ಟಿಸಿ ವಿಭಾಗೀಯ ನಿಯಂ­ತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ ವಿವರಿಸಿದರು.

‘ಬಸ್‌ ತಂಗುದಾಣಗಳ ಹೆಸರನ್ನು ಬಸ್‌ನೊಳಗೆ ಘೋಷಣೆ ಮಾಡಲು ಮತ್ತು ಡಿಜಿಟಲ್‌ ಬೋರ್ಡ್‌ಗಳಲ್ಲಿ ಹೆಸರನ್ನು ಹಾಕುವ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಯವರಿಗೆ ವಹಿಸಲಾಗಿದೆ. ಏಜೆನ್ಸಿಯವರು ಪರವಾನಗಿ ಪಡೆದ 17 ರೂಟ್‌ಗಳಲ್ಲಿ ಬಸ್‌ಗಳನ್ನು ಓಡಿಸಿ ವಾಯ್ಸ್‌ ರೆಕಾರ್ಡಿಂಗ್‌ ಕೆಲಸ ಮಾಡು­ತ್ತಿದ್ದಾರೆ’ ಎಂದು ಹೇಳಿದರು.

‘ಜೆನರ್ಮ್‌ ಬಸ್‌ನ ಚಾಲಕ ಮತ್ತು ನಿರ್ವಾಹಕರ ನೇಮಕಾತಿ ಈಗಾಗಲೇ ನಡೆದಿದೆ. ಅವರೆಲ್ಲರೂ ಹಾಸನದಲ­್ಲಿರುವ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದುಕೊಂಡು ನಗರಕ್ಕೆ ಬಂದಿದ್ದಾರೆ. ಮೈಸೂರು ವಿಭಾಗದಿಂದ ಬಂದಿರುವ ಬಸ್‌ಗಳಿಗೆ ಕೆಎಸ್‌ಆರ್‌ಟಿಸಿ ಡಿಪೊ–2ರಲ್ಲಿ ಚಿಕ್ಕಪುಟ್ಟ ಮಾರ್ಪಾಟು ಮಾಡಿ­ಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.

‘ಖಾಸಗಿ ಬಸ್‌ಗಳಿಗೆ ವಿಧಿಸಿರುವ ದರದಲ್ಲಿಯೇ ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂಬುದು ಪತ್ರಿಕಾ ವರದಿಯಿಂದ ತಿಳಿದು ಬಂದಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಕೆಎಸ್‌ಆರ್‌ಟಿಸಿ ಅವರು ಈ ಮಾಹಿತಿಯನ್ನು ಶೀಘ್ರದಲ್ಲೇ ಕೊಡುವ ಸಾಧ್ಯತೆ ಇದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ)  ಜಿ.ಎಸ್‌. ಹೆಗಡೆ ಹೇಳಿದರು.

ಬಸ್‌ ನಿಲ್ದಾಣವಿಲ್ಲ; ನಿಲುಗಡೆ ಮಾತ್ರ ಡಿಪೊದಲ್ಲಿ: ಜೆನರ್ಮ್‌ ಯೋಜನೆಯಲ್ಲಿ ಓಡಿಸುವ ಬಸ್‌ಗಳಿಗಾಗಿ ನಗರದಲ್ಲಿ ಪ್ರತ್ಯೇಕವಾಗಿ ಯಾವುದೇ ಬಸ್‌ ನಿಲ್ದಾಣವನ್ನು ನಿಗದಿ ಪಡಿಸಿಲ್ಲ. ಆರ್‌ಟಿಎ ಸಭೆಯಲ್ಲಿ ಕೆಎಸ್‌ಆರ್‌ಟಿಸಿಯು ಸ್ಟೇಟ್‌ ಬ್ಯಾಂಕ್‌ ವೃತ್ತದಿಂದ ಬಸ್‌ಗಳು ಓಡಲಿವೆ ಎಂದಷ್ಟೇ ಹೇಳಿತ್ತು. ಆದರೆ, ಬಸ್‌ಗಳು ಕೆಎಸ್‌ಆರ್‌ಟಿಸಿ ಡಿಪೊದಿಂದಲೇ ಪ್ರಯಾಣ ಆರಂಭಿಸಲಿವೆ.

‘ಬಸ್‌ಗಳ ನಿರ್ವಹಣೆ ಕೆಲಸ ಮತ್ತು ಡೀಸೆಲ್‌ ತುಂಬಿಸುವ ಕೆಲಸ ನಿರಂತರ ಇರುವುದರಿಂದ ಬಸ್‌ಗಳನ್ನು ಡಿಪೊಗೆ ತರಿಸಿಕೊಳ್ಳಲಾಗುತ್ತದೆ. ಬಸ್‌ಗಳ ಚಾಲಕ ಮತ್ತು ನಿರ್ವಾಹಕರ ಕೆಲಸ ಡಿಪೊ­ದಿಂದಲೇ ಆರಂಭವಾಗಲಿದೆ. ಡಿಪೊ­ದಿಂದ ಹೊರಡುವ ಬಸ್‌ಗಳು ಸ್ಟೇಟ್‌ ಬ್ಯಾಂಕ್‌ ಮಾರ್ಗವಾಗಿ ಕಾರ್ಯಾಚರಣೆ ನಡೆಸಲಿವೆ’ ಎಂದು ವಿವೇಕಾನಂದ ಹೆಗ್ಡೆ ತಿಳಿಸಿದರು.

‘ಜೆನರ್ಮ್‌ ಯೋಜನೆಯ ಬಸ್‌ಗಳಿ­ಗಾಗಿಯೇ ಯಾವುದೇ ಬಸ್‌ ನಿಲ್ದಾಣ­ವಿಲ್ಲ. ಆದರೆ, ವಾಹನ ದಟ್ಟಣೆ ಹೆಚ್ಚಾದ ನಂತರ ಹೊಸ ಬಸ್‌ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ನಡೆಯಬಹುದು’ ಎಂದು ಆರ್‌ಟಿಒ (ಪ್ರಭಾರ) ಜಿ.ಎಸ್‌. ಹೆಗಡೆ ಹೇಳಿದರು.

ಉದ್ಘಾಟನೆಗೆ ಮುಂಚೆಯೇ ಬಸ್‌ ಓಡಾಟ?
ಜೆನರ್ಮ್‌ ಯೋಜನೆಯ ಬಸ್‌ಗಳ ಓಡಾಟಕ್ಕೆ ಡಿ.18ರ ಗಡುವು ವಿಧಿಸಲಾಗಿದೆ. ಮಾಸಾಂತ್ಯದವರೆಗೆ ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಉದ್ಘಾಟನಾ ಸಮಾರಂಭ ನಡೆಯುವ ಮುಂಚೆಯೇ ಬಸ್‌ಗಳ ಓಡಾಟ ಆರಂಭವಾಗುವ ಸಾಧ್ಯತೆ ಇದೆ. ಕೆಲ ಬಸ್‌ಗಳು ಈಗಾಗಲೇ ಸಂಚಾರ ಆರಂಭಿಸಿವೆ.

‘ನೀತಿ ಸಂಹಿತೆ ಜಾರಿಯಲ್ಲಿ­ರುವುದರಿಂದ ಕಾರ್ಯಕ್ರಮವನ್ನು ಹೇಗೆ ಆಯೋಜಿಸಬಹುದು ಎಂಬುದರ ಬಗ್ಗೆ ವ್ಯವಸ್ಥಾಪಕ ನಿರ್ದೇಶಕ­ರೊಂದಿಗೆ ಚರ್ಚಿಸಲಾಗುತ್ತಿದೆ. ಮಾತುಕತೆ ನಡೆಸಿದ ನಂತರ ಬಸ್‌ಗಳನ್ನು ಹಾಗೆಯೇ ಓಡಿಸುವುದೋ ಅಥವಾ ಉದ್ಘಾಟನಾ ಸಮಾರಂಭ ನಡೆಸಿದ ನಂತರ ಬಸ್‌ಗಳನ್ನು ಓಡಿಸುವುದೋ ಎಂಬುದನ್ನು ನಿರ್ಧರಿಸಲಾಗುವುದು’ ಎಂದು ವಿವೇಕಾನಂದ ಹೆಗ್ಡೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT