ಮಂಗಳೂರು: ನೇತ್ರಾವತಿಯ ತಟದಲ್ಲಿ ಮಳೆಯ ‘ಕಾರ್ಮೋಡ’ದ ನಡುವೆಯೇ ಆರಂಭಗೊಂಡ ‘ವಿಶ್ವ ತುಳುವೆರೆ ಪರ್ಬ’ ಅನೇಕ ಸಂಭ್ರಮ ಸಡಗರದ ನೆನಪುಗಳೊಂದಿಗೆ ತುಳುವರ ಮನಮನಗಳಲ್ಲಿ ಲೀನವಾಯಿತು. ಮೊದಲ ಎರಡು ದಿನ ‘ಹಬ್ಬ’ದ ವಾತಾವರಣ ಕಾಣಿಸದಿದ್ದರೂ, ಕೊನೆಯ ದಿನವಾದ ಭಾನುವಾರ ಸಹ್ಯಾದ್ರಿಯ ಅಂಗಳ ತುಂಬಿ ‘ತುಳು’ಕಿತು.
ತುಳು ಕ್ರೀಡೆಗಳಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿದ, ನೇತ್ರಾವತಿಯಲ್ಲಿ ವಿಹರಿಸಿದ, ಭಾಷೆ ಸಂಸ್ಕೃತಿಯ ಝಲಕ್‌ಗಳನ್ನು ಕಟ್ಟಿಕೊಟ್ಟ ಪ್ರಾತ್ಯಕ್ಷಿಕೆಗಳನ್ನು ಕಣ್ತುಂಬಿಕೊಂಡ, ತುಳು ಪ್ರಹಸನಗಳ ಹಾಸ್ಯವನ್ನು ಮನಸೋ ಇಚ್ಛೆ ಸವಿದ ಖುಷಿಯ ನೆನಪುಗಳೊಂದಿಗೆ ತುಳುವರು ವಿಶ್ವ ತುಳು ಹಬ್ಬವನ್ನು ಬೀಳ್ಕೊಟ್ಟರು.
ಐದು ವರ್ಷಕ್ಕೊಮ್ಮೆ ಪರ್ಬ ‘ತುಳುವರ ಸಂಸ್ಕೃತಿಯನ್ನು ಮೆಲುಕು ಹಾಕುವ ಸಲುವಾಗಿ ಪ್ರತಿ ಐದು ವರ್ಷಕ್ಕೊಮ್ಮೆ ವಿಶ್ವ ತುಳುವರ ಹಬ್ಬ ನಡೆಸಬೇಕಾದ ಅಗತ್ಯ ಇದೆ’ ಎಂಬ ಆಶಯವನ್ನು ವೀರೇಂದ್ರ ಹೆಗ್ಗಡೆ ಸಮಾರೋಪದಲ್ಲಿ ವ್ಯಕ್ತಪಡಿಸಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ಈ ವಿಚಾರ ಪ್ರಸ್ತಾಪಿಸಿದ ಮುಂಬೈ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ‘ಮುಂದಿನ ವಿಶ್ವ ತುಳು ಸಮ್ಮೇಳನ ನಡೆಸುವ ಅವಕಾಶವನ್ನು ಮುಂಬೈನ ತುಳುವರಿಗೆ ನೀಡಬೇಕು’ ಎಂಬ ಬೇಡಿಕೆ ಮುಂದಿಟ್ಟರು.
ಇದಕ್ಕೆ ಸಮ್ಮತಿಯ ಮುದ್ರೆ ಒತ್ತುವಂತೆ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ‘ಮುಂದಿನ ತುಳು ಸಮ್ಮೇಳನ ಮುಂಬೈನಲ್ಲಿ, ಅದರ ನಂತರದ್ದು ದುಬೈನಲ್ಲಿ ನಡೆಯಲಿ’ ಎಂದರು. ‘ಉದ್ಯಮಶೀಲರಾದ ತುಳುವರಿಗೆ ಇಂತಹ ಸಮ್ಮೇಳನಗಳನ್ನು ನಿರಾಯಾಸವಾಗಿ ನಡೆಸುವಂತಹ ಛಾತಿ ಇದೆ’ ಎಂದು ಬೆನ್ನು ತಟ್ಟಿದರು.
ಸಮ್ಮೇಳನದಲ್ಲಿ ಮಂಡನೆಯಾದ ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ, ಕಂಬಳ ನಿಷೇಧ ಹಿಂಪಡೆಯುವ, ಎತ್ತಿನಹೊಳೆ ಯೋಜನೆ ಕೈಬಿಡುವುದಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಈಡೇರಿಸುವ ಹೊಣೆಯನ್ನು ಸಂಘಟಕರು ಜನಪ್ರತಿನಿಧಿಗಳ ಹೆಗಲಿಗೆ ಕಟ್ಟಿದರು.
ಇದಕ್ಕೆ ಭಾಷಣದಲ್ಲಿ ಉತ್ತರಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ‘ಕೇಂದ್ರದಲ್ಲಿ ತುಳು ಮಾತನಾಡುವ ಆರು ಮಂದಿ ಸಂಸದರು, ಒಬ್ಬ ಸಚಿವರು ಇದ್ದೇವೆ. ಈ ಎಲ್ಲಾ ನಿರ್ಣಯಗಳೂ ರಾಜ್ಯ ಸರ್ಕಾರದ ಅಂಕಿತ ಪಡೆದು ಕೇಂದ್ರಕ್ಕೆ ಬರಲಿ. ಆಗ ನಾವು ಇವುಗಳನ್ನು ಈಡೇರಿಸುವುದಕ್ಕೆ ಬೇಕಾದ ಪ್ರಯತ್ನ ಮಾಡುತ್ತೇವೆ’ ಎಂದರು.
‘ಎಸ್‌ಇಜೆಡ್, ಎಂಆರ್‌ಪಿಎಲ್‌ನಂತಹ ಭಾರಿ ಕೈಗಾರಿಕೆಗಳು ಜಿಲ್ಲೆಯಲ್ಲಿ ಈಗಾಗಲೇ ಇರುವುದರಿಂದ ರಾಜ್ಯ ಸರ್ಕಾರಿ ನಿಡ್ಡೋಡಿ ಯೋಜನೆಯನ್ನು ಬೇರೆ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಿ’ ಎಂದು ಸಲಹೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ‘ಕಂಬಳ ಉಳಿಸಲು ರಾಜಕೀಯ ಮರೆತು ಎಲ್ಲ ಜನಪ್ರತಿನಿಧಿಗಳೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದರು.
ಎತ್ತಿನಹೊಳೆ ಯೋಜನೆಯ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸದ ಸಚಿವ ರೈ, ‘ಜಿಲ್ಲೆಗೆ ಅಗೌರವ ತರುವ ಕೆಲಸವನ್ನು ತುಳುನಾಡಿನ ಸಚಿವರು ಎಂದೂ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ’ ಎಂದು ಒಗಟಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪೇಜಾವರ ಭಾಷಾ ಸಾಮರಸ್ಯ ಸೂತ್ರ
ಕನ್ನಡ ಜನನಿಯ ತನುಜಾತೆ ಜಯಹೇ ನಮ್ಮ ತುಳು ಮಾತೆ
ಕುವೆಂಪು ರಚಿಸಿ ಭಾರತ ಜನನಿಯ ತನುಜಾತೆ ಪದ್ಯದ ಸಾಲುಗಳನ್ನು ಪೇಜಾವರ ವಿಶ್ವೇಶತೀರ್ಥ ಸ್ವಾಮಿಜಿ ತುಳುವಿಗೆ ಅನ್ವಯಿಸಿದ್ದು ಹೀಗೆ. ಕನ್ನಡ ಮರಾಟಿ, ಮಲೆಯಾಳ, ಕೊಂಕಣಿ ಬ್ಯಾರಿ ಭಾಷೆಗಳ ಜತೆಗೆ ಅನ್ಯೋನ್ಯವಾಗಿದ್ದುಕೊಂಡೇ ತುಳು ಭಾಷೆ ಬೆಳೆಯಬೇಕು. ಕನ್ನಡದ ಅಭಿಮಾನವನ್ನು ತುಳುವರು ಕಳೆದುಕೊಳ್ಳಬಾರದು’ ಎಂದು ಅವರು ಕಿವಿಮಾತು ಹೇಳಿದರು.
ತುಳು ಸಿನಿಮಾ– ಪೈಪೋಟಿ ಬೇಡ: ಹೆಗ್ಗಡೆ
‘ತುಳುವಿನಲ್ಲಿ ಹೆಚ್ಚು ಸಾಹಿತ್ಯ ರಚನೆ ಆಗುತ್ತಿರುವುದು, ಅನೇಕ ತುಳು ಪತ್ರಿಕೆಗಳು ಹುಟ್ಟಿಕೊಂಡಿರುವುದು, ಪತ್ರಿಕೆಗಳು ತುಳುವಿಗೆ ಜಾಗವನ್ನು ಮೀಸಲಿಟ್ಟಿರುವುದು ಎಲ್ಲವೂ ತುಳು ಭಾಷೆ ಉಳಿಸುವ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆಯೇ ಸರಿ’ ಎಂದು ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
‘ಇತ್ತೀಚೆಗೆ ಒಂದರ ಮೇಲೊಂದು ತುಳು ಸಿನಿಮಗಳೂ ಬರುತ್ತಿವೆ. ತುಳು ಸಿನಿಮಾ ನಿರ್ದೇಶಕರು ಹಠಕ್ಕೆ ಬಿದ್ದು ಸಿನಿಮಾ ತೆಗೆ ಯುವುದು ಒಳ್ಳೆಯದಲ್ಲ. ಒಂದು ಸಿನಿಮಾ ಪ್ರದರ್ಶಗೊಂಡ ಬಳಿಕ ಇನ್ನೊಂದು ಸಿನಿಮಾ ಬರಲಿ. ಪೈಪೋಟಿಗೆ ಬಿದ್ದರೆ ಮತ್ತೆ ತುಳು ಸಿನಿಮಾ ನಿಂತುಹೋಗಬಹುದು’ ಎಂದು ಅವರು ತುಳು ಸಿನಿಮಾ ನಿರ್ದೇಶಕರ ಕಿವಿ ಹಿಂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.