ಮಂಗಳೂರು: ವಾಹನ ದಟ್ಟಣೆಯನ್ನು ನಿಯಂತ್ರಿಸಲು ಅಳವಡಿಸಲಾಗಿದ್ದ ಟ್ರಾಫಿಕ್ ಸಿಗ್ನಲ್‌ಗಳೇ ಈಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿವೆ. ಟ್ರಾಫಿಕ್ ಸಿಗ್ನಲ್‌ಗಳ ಸಮಯಗಳು ಒಂದಕ್ಕೊಂದು ತಾಳೆಯಾಗದ ಕಾರಣ ಸಂಚಾರ ಪೊಲೀಸರೇ ಎರಡು ಪ್ರಮುಖ ವೃತ್ತಗಳಲ್ಲಿ ಅಳವಡಿಸಿದ್ದ ಟ್ರಾಫಿಕ್ ಸಿಗ್ನಲ್‌ಗಳನ್ನು ಬಂದ್ ಮಾಡಿದ್ದಾರೆ.
ನಗರದ ಬಲ್ಮಠ ವೃತ್ತ ಮತ್ತು ಲೋವರ್ ಬೆಂದೂರ್‌ವೆಲ್(ಕಂಕನಾಡಿ ನಂತರದ ವೃತ್ತ) ವೃತ್ತದಲ್ಲಿ ಅಳವಡಿಸಲಾಗಿದ್ದ ಸಿಗ್ನಲ್‌ಗಳನ್ನು ಕೆಲ ವಾರಗಳಿಂದ ಬಂದ್ ಮಾಡಲಾಗಿದೆ. ಇದಲ್ಲದೆ, ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹೆಚ್ಚಿನ ಸಮಯ ನಿಗದಿ ಮಾಡಿರುವುದರಿಂದಲೂ ಸಾರ್ವಜನಿಕರು ಕಿರಿಕಿರಿ ಎದುರಿಸುವಂತಾಗಿದೆ. ಒಟ್ಟಾರೆಯಾಗಿ ನಗರದಲ್ಲಿ ಬೆಳೆಯುತ್ತಿರುವ ವಾಹನ ದಟ್ಟಣೆ ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
ನಗರದಲ್ಲಿ ವಾಹನ ಸಂಚಾರ ದಟ್ಟಣೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಎಂ–ಟ್ರ್ಯಾಕ್ ಹೆಸರಿನಲ್ಲಿ ಹಂತಹಂತವಾಗಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗುತ್ತಿದೆ. ಮುಖ್ಯರಸ್ತೆಗೆ ಅಂಟಿಕೊಂಡಿರುವ ಚಿಕ್ಕ ರಸ್ತೆಗಳಿಂದ ಬರುವ ವಾಹನಗಳನ್ನು ನಿಯಂತ್ರಿಸಲೂ ಟ್ರಾಫಿಕ್ ಸಿಗ್ನಲ್‌ಗಳನ್ನು ಹಾಕಲಾಗಿತ್ತು. ಆದರೆ, ಸಿಗ್ನಲ್‌ಗಳ ಸಮಯ ತಾಳೆಯಾಗದ ಕಾರಣ ಅವುಗಳನ್ನು ಬಂದ್ ಮಾಡಿದ್ದಾರೆ. ಇದರ ನಡುವೆ ಅತಿಹೆಚ್ಚು ವಾಹನ ದಟ್ಟಣೆಯಿರುವ ಬಂಟ್ಸ್ ಹಾಸ್ಟೆಲ್ ವೃತ್ತದಲ್ಲಿ ಹೊಸದಾಗಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ.
‘ಮೊದಲ ಹಂತದಲ್ಲಿ ಅಳವಡಿಸಿದ ಸಿಗ್ನಲ್‌ಗಳ ಸಮಯ ಮತ್ತು ಎರಡನೇ ಹಂತದ ಸಿಗ್ನಲ್‌ಗಳ ಸಮಯ ತಾಳೆಯಾಗುತ್ತಿರಲಿಲ್ಲ. ಆದ್ದರಿಂದಲೇ ಎರಡು ಸಿಗ್ನಲ್‌ಗಳನ್ನು ಬಂದ್ ಮಾಡಿದ್ದೇವೆ. ನಗರದಲ್ಲಿ ಚಿಕ್ಕ ರಸ್ತೆಗಳಿವೆ. ಇವು ಈಗಿರುವ ವಾಹನ ದಟ್ಟಣೆಗೆ ಸಾಕಾಗುತ್ತಿಲ್ಲ. ರಸ್ತೆ ಚಿಕ್ಕದಾಗಿ ಇರುವವರೆಗೆ ಟ್ರಾಫಿಕ್ ಸಮಸ್ಯೆ ತಪ್ಪಿದ್ದಲ್ಲ. ಆದರೂ ನಾವು ವಾಹನ ದಟ್ಟಣೆ ನಿಭಾಯಿಸಲು ಶ್ರಮವಹಿಸುತ್ತಿದ್ದೇವೆ’ ಎಂದು ಸಂಚಾರ ವಿಭಾಗದ ಎಸಿಪಿ ಉದಯ ಎಂ. ನಾಯಕ್ ಪ್ರತಿಕ್ರಿಯಿಸಿದರು.
ಹೆಚ್ಚು ಸಮಯದ ಕಿರಿಕಿರಿ, ಪಾದಚಾರಿಗಳಿಗಿಲ್ಲ ಮಾನ್ಯತೆ: ‘ನಗರದಲ್ಲಿ ಅಳವಡಿಸಲಾಗಿರುವ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹೆಚ್ಚುವರಿ ಸಮಯ ನಿಗದಿ ಮಾಡಿರುವುದರಿಂದ ಸಮಸ್ಯೆಯಾಗುತ್ತಿದೆ’ ಎಂದು ವಾಹನ ಸವಾರರು ದೂರುತ್ತಿದ್ದಾರೆ. ಅಲ್ಲದೆ, ಸಿಗ್ನಲ್‌ಗಳಲ್ಲಿ ರಸ್ತೆ ದಾಟಲು ಪಾದಚಾರಿಗಳಿಗೆ ಕೇವಲ 10 ಸೆಕೆಂಡ್ ನೀಡಲಾಗಿದೆ. ಈ ಸಮಯದಲ್ಲಿ ರಸ್ತೆ ದಾಟಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ.
ನಗರದ ಕಂಕನಾಡಿ ವೃತ್ತದಲ್ಲಿ 120 ಸೆಕೆಂಡ್, ಅಂಬೇಡ್ಕರ್ ವೃತ್ತದಲ್ಲಿ (ಜ್ಯೋತಿ) 120 ಸೆಕೆಂಡ್, ಪಿವಿಎಸ್ ವೃತ್ತದಲ್ಲಿ 120 ಸೆಕೆಂಡ್, ಲಾಲ್‌ಬಾಗ್ ವೃತ್ತದಲ್ಲಿ ವಾಹನವೊಂದು ಹೊರಡಲು 90 ಸೆಕೆಂಡ್ ಕಾಯಬೇಕು. ಅಲ್ಲಿಂದ ಅವರು ಬಿಜೈಗೆ ಹೋಗಬೇಕಾದರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಸಿಗ್ನಲ್‌ನಲ್ಲಿ 140 ಸೆಕೆಂಡ್ ನಿಲ್ಲುವಂತಹ ಪರಿಸ್ಥಿತಿ ಇದೆ. ಈ ವೃತ್ತದಲ್ಲಿ ಎಡಭಾಗಕ್ಕೆ ಚಲಿಸಲು ಮುಕ್ತ ಅವಕಾಶ ಇದೆ. ಆದರೆ, ಸವಾರರು ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದರಿಂದ ಎಡಭಾಗಕ್ಕೆ ಹೋಗುವವರೂ ಕಾಯುವಂತಹ ಪರಿಸ್ಥಿತಿ ಇದೆ.
‘ನಾನು ಸಾಮಾನ್ಯವಾಗಿ ಕಂಕನಾಡಿ ವೃತ್ತ ಮಾರ್ಗವಾಗಿ ಪ್ರಯಾಣ ಬೆಳೆಸುತ್ತೇನೆ. ಕಂಕನಾಡಿ, ಜ್ಯೋತಿ, ಪಿವಿಎಸ್, ಲಾಲ್‌ಬಾಗ್ ಮತ್ತು ಕೆಎಸ್ಆರ್‌ಟಿಸಿ ವೃತ್ತದ ಬಳಿ 140 ಸೆಕೆಂಡ್ ನಿಲ್ಲುವಂತಾಗಿದೆ. ಈ ದಾರಿಯನ್ನು ಗರಿಷ್ಠ 15 ನಿಮಿಷದಲ್ಲಿ ಕ್ರಮಿಸಬಹುದು. ಆದರೆ, ದಟ್ಟಣೆ ಅವಧಿಯಲ್ಲಿ ಈ ರಸ್ತೆ ಕ್ರಮಿಸಲು 30–45 ನಿಮಿಷ ಬೇಕಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಳಿಯಲ್ಲಿ ಎಡಭಾಗಕ್ಕೆ ಮುಕ್ತವಾಗಿ ಸಂಚರಿಸಲು ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ ಪ್ರತ್ಯೇಕ ಸಾಲನ್ನಾದರೂ (ಲೇನ್) ಮಾಡಬೇಕು’ ಎನ್ನುತ್ತಾರೆ ಟ್ಯಾಕ್ಸಿ ಚಾಲಕ ಮಂಜುನಾಥ.
‘ಮಂಗಳೂರಿನಲ್ಲಿ ಪಾದಚಾರಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಟ್ರಾಫಿಕ್ ಸಿಗ್ನಲ್‌ಗಳು ಇರುವ ವೃತ್ತಗಳಲ್ಲಿ ಪಾದಚಾರಿಗಳು ರಸ್ತೆ ದಾಟಲು ಕೇವಲ 10 ಸೆಕೆಂಡ್ ಸಮಯ ನಿಗದಿಪಡಿಸಲಾಗಿದೆ. ದೊಡ್ಡ ವೃತ್ತಗಳನ್ನು ಕ್ರಮಿಸಲು 10 ಸೆಕೆಂಡ್ ಸಾಕಾಗುತ್ತದಯೇ? ವಾಹನ ದಟ್ಟಣೆ ಜಾಸ್ತಿ ಇರಬಹುದು. ಆದರೆ, ಪಾದಚಾರಿಗಳಿಗೆ ಅನುಕೂಲವಾಗುವಂತೆ ಈ ಸಮಯವನ್ನು ಹೆಚ್ಚಿಸಬೇಕು’ ಎಂದು ಬಿಜೈನ ನಿವಾಸಿ ಯೋಗೀಶ್ ಕಾಪಿಕಾಡ್ ಅವರು ಆಗ್ರಹಿಸುತ್ತಾರೆ.
‘ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೃತ್ತದಿಂದ ಬಿಜೈ–ಕಾಪಿಕಾಡ್ ರಸ್ತೆಗೆ ಹೋಗಲು ಮುಕ್ತ ಎಡ ತಿರುವು ಇದೆ. ಆದರೆ, ಭಾರತ್ ಮಾಲ್‌ನ ಪಾರ್ಕಿಂಗ್‌ನಿಂದ ಮುಖ್ಯರಸ್ತೆ ಬರುವ ವಾಹನಗಳಿಂದ, ಸಾರ್ವಜನಿಕರು ಸಿಗ್ನಲ್‌ಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಈ ಸಮಸ್ಯೆಯಾಗುತ್ತಿದೆ. ಮುಕ್ತ ಎಡ ತಿರುವಿಗಾಗಿ ಪ್ರತ್ಯೇಕ ಲೇನ್ ಮಾಡಲು ಮಂಗಳೂರು ಮಹಾನಗರ ಪಾಲಿಕೆಯವರಲ್ಲಿ ಮನವಿ ಮಾಡಲಾಗಿದೆ’ ಎಂದು ಎಸಿಪಿ ಉದಯ ಎಂ ನಾಯಕ್ ಹೇಳಿದರು.
‘ಕಾಪಿಕಾಡ್‌ನಿಂದ ಬಿಜೈ ರಸ್ತೆಗೆ ಹೋಗಲು ಸಿಗ್ನಲ್‌ನಲ್ಲಿ ದೊಡ್ಡ ದಿಣ್ಣೆಯಿದೆ. ಅಲ್ಲಿ ಮಣ್ಣು ಹಾಕಿ ಮುಕ್ತ ಎಡ ತಿರುವಿಗಾಗಿ ಅವಕಾಶ ಮಾಡಿಕೊಡಲು ಪಾಲಿಕೆಯವರಲ್ಲಿ ಮನವಿ ಮಾಡಲಾಗಿದೆ. ಆದರೆ, ಈ ಸಮಸ್ಯೆ ಬಗೆಹರಿಸಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು.
ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಸಮಯ ತಾಳೆಯಾಗುತ್ತಿಲ್ಲ ನಿಜ. ಆದರೆ, ಈ ಸಮಸ್ಯೆಯನ್ನು ಬದಿಗೊತ್ತಿ ವಾಹನ ದಟ್ಟಣೆಯನ್ನು ನಿರ್ವಹಿಸಲಾಗುತ್ತಿದೆ.
- ಎಸ್. ಮುರುಗನ್,
ಕಮಿಷನರ್, ಮಂಗಳೂರು ಪೊಲೀಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.