ADVERTISEMENT

ತುಳುವೆರೆ ಪರ್ಬಟೊಂಜಿ ತುತ್ತೈತ

ತುಳುನಾಡಿನ ಮದುವೆ, ವಸ್ತ್ರವಿನ್ಯಾಸ ಅನಾವರಣ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2014, 9:12 IST
Last Updated 15 ಡಿಸೆಂಬರ್ 2014, 9:12 IST

ಮಂಗಳೂರು:  ಹೆಣ್ಣು ಮಗಳೊಬ್ಬಳು ಮದುಮಗಳಂತೆ ಸಿಂಗರಿಸಿಕೊಂಡು ಪಲ್ಲಕ್ಕಿ ಮೇಲೆ ಕುಳಿತು ವಾದ್ಯ ದೊಂದಿಗೆ ವೈಭವದಿಂದ ಮದುವೆ ಮಂಟಪಕ್ಕೆ ಬರು ತ್ತಾಳೆ. ಅಲ್ಲಿ ನಿಜವಾಗಿಯೂ ಮದುವೆಯ  ವಾತಾ ವರಣ ಕಣ್ಣ ಮುಂದೆ ತರುವಂತೆ ಸಂಭ್ರಮ ಮನೆ ಮಾಡಿತ್ತು. ಈ ವಿಶೇಷ ಮದುವೆಯ ಸನ್ನಿವೇಶಗಳು ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದ ವಿಶ್ವ ತುಳುವೆರೆ ಪರ್ಬದಲ್ಲಿ ‘ತುಳುವೆರೆ ತುತ್ತೈತ’ ಕಾರ್ಯಕ್ರಮದಲ್ಲಿ ಅತ್ಯಂತ ವರ್ಣಮಯವಾಗಿ ಕಂಡುಬಂದವು.

‘ಪೊಣ್ಣೆ ಇರೆಗ್‌ ಇನಿ ತಾಳಿ ಬಂಧಿ ಎಲ್ಲೆ ಈರ್‌ ಎನ್ನ ತೋಳ ಬಂಧಿ’ ರತ್ನಾಕರ ವರ್ಣಿಯ ಮಾತಿನಂತೆ ಜೈನರ ಮದುವೆಯ ವಿಶೇಷ ಆಕರ್ಷಣೆ ತಾಳಿಬಂಧಿಯಂತಹ ಸಂಭ್ರಮದ ವಾತಾವರಣವನ್ನು ಕುಡ್ಲದ ಜೈನ ಸಮುದಾಯದವರು ಜನತೆಗೆ ಮುಂದಿಟ್ಟರು.
ಜಾತಿ, ಧರ್ಮ ಎಂಬ ಭೇದ ಭಾವವಿಲ್ಲದೇ ತುಳು ವೆರೆ ತುತ್ತೈತದಲ್ಲಿ ಅತ್ಯಂತ ಖುಷಿಯಿಂದ ಭಾಗವಹಿಸಿ ನೆರೆದವರಿಗೆ ಈ ಹಿಂದಿನ ತುಳುನಾಡ ಜನರ ಜೀವನ ಶೈಲಿಯ ಪೂರ್ಣ ಚಿತ್ರಣವನ್ನು ಕಣ್ಣ ಮುಂದೆ ಬರುವಂತೆ ಮಾಡಿದರು.

ಉದ್ಯಮಿ ಪುರುಷೋತ್ತಮ ರೈ ಅವರ ಪ್ರಾಯೋ ಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಹಳೆಯ ಸಂಪ್ರದಾಯಗಳ ಬಗ್ಗೆ ತಿಳಿಯುವಂತೆ ಕಾರ್ಯಕ್ರಮ ರೂಪಿಸಿದ್ದು ವಿಶೇಷವಾಗಿತ್ತು. ತುಳುವರ ವಸ್ತ್ರಾಭರಣಗಳ ಬಗ್ಗೆ ವಿವರಿಸುವ ತುತ್ತೈತದಲ್ಲಿ ತುಳುನಾಡಿನ ಎಲ್ಲ ಧರ್ಮದವರ ವಸ್ತ್ರ ಶೃಂಗಾರ, ಜೀವನ ಪದ್ಧತಿ, ಸಂಭ್ರಮ, ಆಚರಣೆಗಳನ್ನು ವರ್ಣಮಯವಾಗಿ ಅನಾವರಣಗೊಳಿಸಲಾಯಿತು.

ಜೈನ ಧರ್ಮದಲ್ಲಿ ಮದುವೆಯಲ್ಲಿ ಹೆಣ್ಣಿಗೆ ಬಳಸುವ ಆಭರಣಗಳ ಕುರಿತು ವಿವರಣೆ ನೀಡಲಾಯಿತು. ಪಲ್ಲಕ್ಕಿ ಮೇಲೆ ಕುಳಿತು ವಾದ್ಯದೊಂದಿಗೆ ಮದುಮಗಳನ್ನು ಕರೆ ತಂದ ನಂತರ ಮದುಮಗ ಬರುವ ಬದಲು ಮದುಮಗನ ತಂಗಿಯನ್ನು ಕರೆತಂದು ಅವಳ ಮೂಲಕ ಮದುವೆ ಶಾಸ್ತ್ರಗಳನ್ನು ಮುಗಿಸಿ ಪುನಃ ಮನೆಗೆ ತೆರಳಲಾಗುತ್ತದೆ.

ಜೈನರಲ್ಲಿ ಈ ಮೊದಲು 2, 3 ದಿನಗಳ ಕಾಲ ಶಾಸ್ತ್ರ ಬದ್ಧವಾಗಿ ನಡೆಯುತ್ತಿದ್ದ ಮದುವೆ ಇಂದು ಒಂದೇ ದಿನಕ್ಕೆ ಸೀಮಿತವಾಗಿದ್ದು, ಇಂತಹ ಸಂಪ್ರದಾಯಗಳ ಮಹತ್ವ ಕಡಿಮೆ ಆಗುತ್ತಿರುವುದನ್ನು ತಿಳಿಸಲಾಯಿತು. ಮದುಮಗಳಿಗೆ ಬಳಸುವ ಹಳೆ ಸಂಪ್ರದಾಯದ ಜರತಾರಿ ಸೀರೆ, ಮೂಗು ನತ್ತು, ಅಡ್ಡಬೊಟ್ಟು, ಗಿಳಿ ಓಲೆ, ಕೈವಂಕಿ, ಗೆಜ್ಜೆಟಿಕ್ಕಿ, ಪವನ್‌, ಮುತ್ತಿನ ಹಾರ, ಕೀರ್ತಿ ಮುಖ ಕಡಗ, ಪೈಜಾನ (ಕಾಲಿನ ಗೆಜ್ಜೆ)ಗಳನ್ನು ಧರಿಸಿದ ನಗರದ ಕೃತಜ್ಞ ಎಂಬ ಮಹಿಳೆ ತುಳುನಾಡಿನ ಸಂಪ್ರದಾಯಗಳ ಚಿತ್ರಣ ಕಣ್ಣಮುಂದೆ ಬರುವಂತೆ ಮಾಡಿದ್ದರು.

ವಿವಿಧ ಧರ್ಮಗಳ ಸಂಪ್ರದಾಯಗಳಿಗೆ ತುಳುವೆರೆ ಪರ್ಬದಲ್ಲಿ ಪ್ರಾಮುಖ್ಯತೆ ನೀಡಲಾಗಿದ್ದು, ನಗರದ ಬ್ಯಾರಿ ಕಲಾರಂಗದ ಕಲಾವಿದರು ಬ್ಯಾರಿಯಲ್ಲಿ ಆಚರಿಸುವ ಮೆಹಂದಿ ಹಾಗೂ ಮದುವೆ ಸಂಭ್ರಮ ವನ್ನು ನೃತ್ಯ, ಸಂಗೀತದ ಮೂಲಕ ಕಟ್ಟಿಕೊಡಲಾಯಿತು.
ಒಂದೊಂದು ಜಾತಿ, ಧರ್ಮದವರು ಅವರವರ ಸಂಪ್ರದಾಯಗಳನ್ನು ತಿಳಿಸುವಂತೆ ಬಂಟ ಸಮು ದಾಯದಲ್ಲಿ ಸೀಮಂತ ಕಾರ್ಯಕ್ರಮ ಆಚರಿಸುವ ಕುರಿತು ಕಾರ್ಯಕ್ರಮ ಆಯೋಜಿಸಿದ್ದರು. ನಗರದ ಲಯನ್ಸ್‌ ಕ್ಲಬ್‌ನ ಸದಸ್ಯರು ಬಂಟ ಸಮುದಾಯದ ಸೀಮಂತವನ್ನು ಅತ್ಯಂತ ಅದ್ದೂರಿಯಾಗಿ ನಡೆಸಿಕೊಟ್ಟಿದ್ದರು.

ಕೈ ವಂಕಿ, ಪಕಳದ ಕಾಜಿ, ನವರತ್ನದ ಕಾಜಿ, ಡಾಲರ್‌ ಸರ, ವಜ್ರದ ಸರ, ಗಾಜಿನ ಬಳೆ ಮುಂತಾದ ಆಭರಣಗಳನ್ನು ತೊಡಿಸಿ ಶಾಸ್ತ್ರಬದ್ಧವಾಗಿ ಸೀಮಂತ ಕಾರ್ಯಕ್ರಮ ನಡೆಸಿರುವುದು ವಿಶೇಷವಾಗಿತ್ತು. ಒಟ್ಟಾರೆಯಾಗಿ ತುಳುನಾಡಿನ ಶಾಸ್ತ್ರ, ಸಂಪ್ರದಾಯಗಳಿಗೆ ಹಿಂದಿನಿಂದಲೂ ಶ್ರೀಮಂತ ಪರಂಪರೆ ಇದ್ದು, ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ವಿಶ್ವ ತುಳುವೆರೆ ಪರ್ಬ ಅದಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.