ADVERTISEMENT

ನಾಳೆ ಪದವಿ ಫಲಿತಾಂಶ ಪ್ರಕಟ

‘ಓಪನ್‌ ಹೌಸ್‌’ಗೆ ಸಜ್ಜಾಗಿದೆ ಮಂಗಳೂರು ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2015, 6:52 IST
Last Updated 11 ಜೂನ್ 2015, 6:52 IST

ಮಂಗಳೂರು: ಮಂಗಳೂರು ವಿಶ್ವ­ವಿದ್ಯಾಲಯದಲ್ಲಿ ಜೂನ್‌ 12ರಂದು ಪದವಿ ತರಗತಿಗಳ ಫಲಿತಾಂಶವನ್ನು ಇಂಟ್ರಾನೆಟ್‌ನಲ್ಲಿ ಪ್ರಕಟಿಸಲಾಗುವುದು. ಅಂದು ಕಾಲೇಜಿನಲ್ಲಿ ವೈಫೈ ವ್ಯವಸ್ಥೆ  ಎಲ್ಲರಿಗೂ ಲಭ್ಯವಾಗಲಿರುವುದರಿಂದ ಕ್ಯಾಂಪ­ಸ್‌­ನಲ್ಲಿಯೇ ವಿದ್ಯಾರ್ಥಿಗಳು ಫಲಿ­ತಾಂಶವನ್ನು ನೋಡಬಹುದು. ಅಲ್ಲದೆ ‘ಮಂಗಳೂರು ವಿವಿ ಕ್ಯಾಂಪಸ್‌ ನೋಡಬನ್ನಿ’ (‘ಓಪನ್‌ ಹೌಸ್‌’) ಕಾರ್ಯ­ಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳು ತಾವು ಬಯಸಿದ ಕೋರ್ಸ್‌ಗಳ ವಿವರವನ್ನೂ ಪಡೆಯಬಹುದು.

ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಶಿವರಾಮ ಕಾರಂತ ಸಭಾ­ಭವನದಲ್ಲಿ ಬುಧವಾರ  ಸುದ್ದಿ­ಗೋಷ್ಠಿ­ಯಲ್ಲಿ ಮಾತನಾಡಿದ ಕುಲಪತಿ ಪ್ರೊ. ಭೈರಪ್ಪ ಅವರು ಈ ವಿಷಯ ತಿಳಿಸಿದರು.  ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶ ಪಡೆಯುವ ಮುನ್ನ ವಿಶ್ವ­ವಿದ್ಯಾಲಯದಲ್ಲಿ ಲಭ್ಯವಿರುವ ಅವಕಾಶ­ಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳುವ ‘ಮಂಗಳೂರು ವಿವಿ ಕ್ಯಾಂಪಸ್‌ ನೋಡ­ಬನ್ನಿ’ ಕಾರ್ಯಕ್ರಮ ಜೂನ್‌ 12ರಿಂದ  ಎರಡು ದಿನ ಕೊಣಾಜೆಯಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. 12ರಂದೇ ಫಲಿತಾಂಶ­ವನ್ನು ಪ್ರಕಟಿಸುವುದರಿಂದ ವಿದ್ಯಾರ್ಥಿ­ಗಳಿಗೆ ಅನುಕೂಲವಾಗಲಿದೆ ಎಂದರು. ಎರಡು ದಿನಗಳ ಈ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಉದ್ಘಾಟಿ­ಸುವರು.

ಮಂಗಳ ಗಂಗೋತ್ರಿ, ಮಂಗಳೂರು ಮತ್ತು ಮಡಿಕೇರಿ ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ­ವಾದ ಚಿಕ್ಕಅಳುವಾರು ಸಂಸ್ಥೆಯ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿಭಿನ್ನ ಕೋರ್ಸ್‌­ಗಳ ಸಮಗ್ರ ಮಾಹಿತಿಯನ್ನು ಈ ಸಂದರ್ಭದಲ್ಲಿ ಪಡೆಯಬಹುದು. ಪ್ರಾಧ್ಯಾ­ಪಕರು ಇದಕ್ಕಾಗಿ ಸಿದ್ಧರಿರುತ್ತಾರೆ. ಮಂಗಳ ಗಂಗೋತ್ರಿ ಕ್ಯಾಂಪಸ್ಸಿನಲ್ಲಿ 24 ವಿಭಾಗಗಳು ನಡೆಸುವ 37 ಕಲಾ, ವಿಜ್ಞಾನ, ವಾಣಿಜ್ಯ ಮುಂತಾದ ಕೋರ್ಸ್‌­ಗಳ ಬಗ್ಗೆ ಪರಿಚಯ ಮಾಡಿಕೊಡಲಾ­ಗುವುದು.

ಎಲ್ಲ ಪ್ರಾಧ್ಯಾಪಕರ ಜೊತೆಗೆ ಆಯಾ ಕೋರ್ಸುಗಳ ಆಯ್ಕೆ, ಉದ್ಯೋಗಾವಕಾಶ, ಪ್ರಯೋಗಾಲಯ, ಸಂಶೋಧನಾ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳು ಚರ್ಚಿಸಬಹುದು. ಮಂಗಳೂರು ವಿವಿಗೆ ರಾಷ್ಟ್ರಮಟ್ಟದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊರೆತ ಮನ್ನಣೆಯ ಬಗ್ಗೆಯೂ ವಿವರಿಸಲಾಗುವುದು ಎಂದರು.

ಆಯಾ ವಿಭಾಗಗಳಿಂದಲೇ ಅರ್ಜಿ­ಗಳನ್ನು ಪಡೆಯಬಹುದು. ಬ್ಯಾಂಕ್‌ ಸಾಲಗಳ ಬಗ್ಗೆ ಮಾಹಿತಿಯನ್ನೂ ನೀಡ­ಲಾ­ಗುವುದು. ಜಿಲ್ಲೆಯ ವಿವಿಧೆಡೆಗಳಿಂದ ಬರುವ ವಿದ್ಯಾರ್ಥಿಗಳು ಮತ್ತು ಹೆತ್ತವರಿಗೆ ಮಂಗಳೂರು, ಪಂಪ್‌ವೆಲ್‌, ತೊಕ್ಕೊಟ್ಟು ಪ್ರದೇಶಗಳಿಂದ ಮಂಗಳ ಗಂಗೋತ್ರಿಗೆ ಪ್ರತಿ ಗಂಟೆಗೊಮ್ಮೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆಯನ್ನು ವಿವಿ ವತಿಯಿಂದ ಏರ್ಪಡಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.