ರತ್ನಾಕರವರ್ಣಿ ವೇದಿಕೆ(ವಿದ್ಯಾಗಿರಿ): ನುಡಿಸಿರಿಯಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಗೌರವಕ್ಕೆ ಏನು ಕಮ್ಮಿ ಇಲ್ಲ. ಅದರ ಜತೆಗೆ ಕಲೆ, ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ಗಮನ ನೀಡುವುದು ನುಡಿಸಿರಿಯ ವಿಶೇಷ. ಅದೇ ರೀತಿ ಈ ವರ್ಷವೂ ಕೂಡಾ ಆಳ್ವಾಸ್‌ನಲ್ಲಿ ಕಲೆ, ಚಿತ್ರಕಲೆ, ಕೃಷಿ ಮೇಳ, ಪುಸ್ತಕ ಮಳಿಗೆಯನ್ನು ಆಯೋಜಿಸಿದ್ದು ತುಂಬಾನೇ ಅರ್ಥ ಪೂರ್ಣವಾಯಿತು.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ 12ನೇ ನುಡಿಸಿರಿಯಲ್ಲಿ ಚಿತ್ರಕಲಾ ಮೇಳವನ್ನು ಆಯೋಜಿಸಿದ್ದು, ಕಲಾ ರಸಿಕರನ್ನು ಮುದಗೊಳಿಸಿದೆ. ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರ, ಉಡುಪಿಯ ಚಿತ್ರಕಲಾ ಮಂದಿರ, ಕರಾವಳಿ ಚಿತ್ರಕಲಾ ಚಾವಡಿ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಬೆಳಗಾವಿ, ಚಿಕ್ಕೋಡಿ ಹಾಗೂ ಇತರ ಕಲಾವಿದರಿ ಗಾಗಿ ಆಯೋಜಿಸಿದ್ದ ಚಿತ್ರ ಮೇಳವನ್ನು ನೋಡಿ ಸಂತೋಷ ಪಟ್ಟುಕೊಂಡ ಕಲಾರಸಿಕರ ಮಾತು ಹೀಗಿದೆ.
‘ಚಿತ್ರಕಲೆಯನ್ನು ಈ ನುಡಿಸಿರಿಯಲ್ಲಿ ಆಯೋಜಿಸಿದ್ದು ಸಂತೋಷವಾಗಿದೆ. ನುಡಿಸಿರಿಯ ಜತೆಗೆ ಕಲೆಯ ಬಗ್ಗೆ ತಿಳಿದುಕೊಳ್ಳಲು ಸುಲಭವಾಗಿದೆ. ಚಿತ್ರ ಕಲೆಗಳು ಚಿತ್ರವೋ ಇಲ್ಲ ನೈಜತೆಯಿಂದ ಕೂಡಿದೆಯೋ ಎಂಬ ಸಂಶಯ ಮೂಡು ತ್ತದೆ’ ಎಂದು ವಿದ್ಯಾರ್ಥಿಗಳಾದ ನಿರೀಕ್ಷಾ, ಪ್ರತೀಕ್ಷಾ, ವರ್ಷ ಅಭಿಪ್ರಾಯ ಪಟ್ಟರು.
‘ಇಲ್ಲಿ ಬಿಡಿಸಿದ ಒಂದೊಂದು ಚಿತ್ರಕ್ಕೂ ಅರ್ಥವಿದೆ. ಸಾಮಾಜಿಕ ಶೋಷಣೆ, ಸ್ವಚ್ಛ ಭಾರತ ಪರಿಕಲ್ಪನೆ, ಹಳ್ಳಿ ಬದುಕಿನ ಚಿತ್ರಣ ವಿಶೇಷವಾಗಿದೆ’ ಕೆ. ಪ್ರದೀಶ್ 3ಡಿ ಚಿತ್ರ ಕಲೆ ಸುಂದರ ವಾಗಿತ್ತು ಎಂದು ಮಹೇಶ್, ಉಮೇಶ್, ಶಶಿಧರ್, ಸಂತೋಷ ಖುಷಿಪಟ್ಟರು.
ಸ್ವರೂಪ ಅಧ್ಯಯನ ಕೇಂದ್ರದ ಚಂದನ ಅವರು ‘ತಮ್ಮ ಚಿತ್ರದಲ್ಲಿ ಕಿವಿ ಓಲೆಗಳಲ್ಲಿ ಬಳಸುವ ಕಾಗದವನ್ನು ಬಳಸಿ ಕೊಂಡು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪಠ್ಯ ಕ್ರಮದ ಬಗ್ಗೆ ಚಿತ್ರಿಸಿ ದ್ದೇನೆ. ಇಲ್ಲಿ ಮುದ್ರಿಸಿದ್ದ 30ಕ್ಕೂ ಹೆಚ್ಚಿನ ಚಿತ್ರಗಳು ಕೇವಲ ಪ್ರದರ್ಶನಕ್ಕೆ ಮಾತ್ರ ಇಟ್ಟಿದ್ದೇನೆ. ಇದರ ಜತೆಗೆ ಆದಿಯ ಚಿತ್ರ ಕಲೆಗಳನ್ನೂ ಪ್ರದರ್ಶಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಬೆಳಗಾವಿಯ ಪ್ರಶಾಂತ್ ಕುಲೋಳಿ, ಮಾರುತಿ ಪಟೇಲ್ ಅವರು ‘2 ದಿನಗಳಾದರೂ ಜನರು ಚಿತ್ರ ಪ್ರದರ್ಶನ ನೋಡುವುದನ್ನು ಬಿಟ್ಟು ಯಾವುದೇ ಖರೀದಿ ಮಾಡಿಲ್ಲ. ಬದಲಾಗಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡು ಹೋಗುತ್ತಿದ್ದಾರೆ. ಇದರಿಂದ ಕಲಾವಿ ದರಿಗೆ ತಮ್ಮ ಕಲೆಯನ್ನು ಉಳಿಸಿಕೊಂಡು ಹೋಗಲು ಆಗುತ್ತಿಲ್ಲ. ಇದು ಕಲೆಯ ಬಗ್ಗೆ ಜನರಿಗೆ ಆಸಕ್ತಿ ಕಡಿಮೆಯಾಗಿದೆ ಎಂದು ಅರ್ಥ’ ಎಂದರು.
ಸಂಪತ್ ಅವರು ಸ್ಥಳದಲ್ಲಿಯೇ ₹ 100 ಪಡೆದು ಭಾವಚಿತ್ರಗಳನ್ನು ಚಿತ್ರಿಸಿ ಕೊಡುತ್ತಿರುವುದು ವಿಶೇಷವಾಗಿತ್ತು.
‘ಪ್ರಸ್ತುತ ಸಮಾಜದ ಆಗು ಹೋಗುಗಳ ಬಗ್ಗೆ ಚಿತ್ರದ ಮೂಲಕ ತಿಳಿಸಿದ್ದೇನೆ. ಚಿತ್ರ ವೀಕ್ಷಿಸಿದರೆ ಚಿತ್ರದ ತಿರುಳು ಅರ್ಥವಾಗುವುದಿಲ್ಲ. ಚಿತ್ರದ ಭಾವನೆಯ ಆಳಕ್ಕೆ ಇಳಿದು ಅರ್ಥ ಮಾಡಿಕೊಳ್ಳಬೇಕು. ಕಲಾಕೃತಿಗಳನ್ನು ಖರೀದಿ ಮಾಡುವುದರ ಜತೆಗೆ ಕಲೆಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ’ ಎಂದು ವಿಜಯ ಬೊಳಶೆಟ್ಟಿ ಬಾಗಲ ಕೋಟೆ ಅವರು ಅಭಿಪ್ರಾಯಪಟ್ಟರು.
2ನೇ ದಿನದ ನುಡಿಸಿರಿಯಲ್ಲಿ ಕಂಡು ಬಂದ ದೃಶ್ಯ
1. ಜನಪದ ಕಲೆ ಪ್ರಕಾರವಾದ ಸುಡುಗಾಡು ಸಿದ್ಧರು ಮಾಡುತ್ತಿದ್ದ ಕೈಚಳಕವನ್ನು ಸೇರಿದ ಜನರು, ವಿದ್ಯಾರ್ಥಿಗಳು ನೋಡಿ ಅಚ್ಚರಿಪಟ್ಟರು.
2. ಸಾಗರದ ಡೊಳ್ಳು ಕುಣಿತದ ತಂಡ, ದಾವಣಗೆರೆಯ ಸಂಗೀತಾ ಹಾರ್ಮೋನಿಯಂ ತಂಡ, ವಿಜಯಪುರದ ಲಂಬಾಣಿ ನೃತ್ಯ ತಂಡದವರು ನುಡಿಸಿರಿಯ ಮೆರುಗನ್ನು ಹೆಚ್ಚಿಸಿದರು.
3. ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯುತ್ತಿದ್ದ ಗೋಷ್ಠಿ ಸಂದರ್ಭ ಬಿಸಿಲು ಜಾಸ್ತಿ ಇದ್ದ ಕಾರಣ ಉಚಿತವಾಗಿ ನೀಡಿದ್ದ ದಿನಪತ್ರಿಕೆಗಳನ್ನು ಬಳಸಿಕೊಂಡು ಗಾಳಿ ಬೀಸಿಕೊಳ್ಳುತ್ತಿದ್ದ ಸನ್ನಿವೇಶ ಸಾಮಾನ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.