ADVERTISEMENT

ನುಡಿಸಿರಿಯಲ್ಲಿ ಪುಸ್ತಕಗಳ ತೇರು!

200ಕ್ಕೂ ಅಧಿಕ ಪುಸ್ತಕ ಮಳಿಗೆ– ಕನ್ನಡ ಕೃತಿಗಳಿಗೆ ವಿಶೇಷ ರಿಯಾಯಿತಿ

ಪ್ರದೀಶ್ ಎಚ್.ಮರೋಡಿ
Published 29 ನವೆಂಬರ್ 2015, 8:42 IST
Last Updated 29 ನವೆಂಬರ್ 2015, 8:42 IST

ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ‘ಆಳ್ವಾಸ್‌ ನುಡಿಸಿರಿ’ ಯಲ್ಲಿ ಪುಸ್ತಕ ಮಳಿಗೆಗಳು ಜನರಿಂದ ಕಳೆಗಟ್ಟಿವೆ. ನುಡಿಸಿರಿಗೆ ಬಂದ ಕೆಲವರು ಗೋಷ್ಠಿಗಳನ್ನು ಆಲಿಸುತ್ತಿದ್ದರೆ, ಮಿಕ್ಕವರು ಪುಸ್ತಕ ಮಳಿಗೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಮಳಿಗೆಗಳಲ್ಲಿ ಕನ್ನಡ ಕಾದಂಬರಿ, ವಿಮರ್ಶೆ ಮತ್ತು ಪ್ರವಾಸ ಕಥನ ಮುಂತಾದ ಕೃತಿಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ.

ನುಡಿಸಿರಿಯ ಮುಖ್ಯವೇದಿಕೆಯಾದ ರತ್ನಾಕರವರ್ಣಿ ವೇದಿಕೆಯ ಪಕ್ಕದಲ್ಲೇ ಇರುವ ಪದವಿಪೂರ್ವ ಕಾಲೇಜಿನ ಕಟ್ಟಡದಲ್ಲಿ 600ಕ್ಕೂ ಅಧಿಕ ವಿವಿಧ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ನುಡಿಸಿರಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಟ್ಟಡದ ಒಂದನೇ ಮತ್ತು ಎರಡನೇ ಮಹಡಿಯನ್ನು ಕೇವಲ ಪುಸ್ತಕ ಮಳಿಗೆಗೆ ಕಾಯ್ದಿರಿಸಲಾಗಿದೆ. ನವಕರ್ನಾಟಕ ಪಬ್ಲಿಕೇಷನ್‌, ಸ್ವಪ್ನಾ ಬುಕ್‌ ಹೌಸ್‌ ಸೇರಿದಂತೆ 200ಕ್ಕೂ ಅಧಿಕ ಪುಸ್ತಕ ಮಳಿಗೆಗಳು ಅಲ್ಲಿವೆ. ಮೂರು, ನಾಲ್ಕು ಮತ್ತು ಐದನೇ ಮಹಡಿಯಲ್ಲಿ ಬಟ್ಟೆ, ಪಾದರಕ್ಷೆ, ಫ್ಯಾನ್ಸಿ, ತಿಂಡಿ ತಿನಿಸು, ಆಲಂಕಾರಿಕ ವಸ್ತುಗಳು ಇನ್ನಿತರ ಮಳಿಗೆಗಳು ತೆರೆದುಕೊಂಡಿವೆ.

ವೇದಿಕೆಯ ಪಕ್ಕದಲ್ಲೇ ಈ ಪುಸ್ತಕ ಮಳಿಗೆಗಳು ಇರುವುದರಿಂದ ಜನರು ಪುಸ್ತಕಗಳನ್ನು ಇಣುಕಿ ನೋಡುತ್ತಿದ್ದಾರೆ. ಪುಸ್ತಕಾಭಿಮಾನಿಗಳು ಕೃತಿಗಳ ದರ ಕೇಳಿ ಖರೀದಿಸುತ್ತಿರುವುದು ಕಂಡು ಬಂತು. ಪಾಲಕರು ತಮ್ಮ ಮಕ್ಕಳಿಗೆ ಬೇಕಾಗುವ ಸಣ್ಣ ಕಥೆ ಪುಸ್ತಕ, ಅಭ್ಯಾಸ ಪುಸ್ತಕಗಳನ್ನು ಖರೀದಿಸುತ್ತಿದ್ದರು.

ಹಿರಿಯ, ಕಿರಿಯ ಸಾಹಿತಿಗಳ ಕೃತಿ, ಕಾದಂಬರಿ, ವಿಮರ್ಶಾ ಗ್ರಂಥ, ನಿಘಂಟು, ಮಾಹಿತಿ ಪುಸ್ತಕಗಳು ಮಳಿಗೆಯಲ್ಲಿವೆ. ಕೆಲ ಮಳಿಗೆಗಳಲ್ಲಿ ತಮಗೆ ಬೇಕಾದ ಪುಸ್ತಕ ಗಳನ್ನು ಖರೀದಿಸಲು ಜನ ಮುಗಿಬೀಳು ತ್ತಿದ್ದರು. ವಿದ್ಯಾರ್ಥಿ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ಮಳಿಗೆಗಳಲ್ಲಿ ಕಾಣ ಸಿಗುತ್ತಿತ್ತು. ಸಮ್ಮೇಳನಾಧ್ಯಕ್ಷ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರ ಕೃತಿಗಳನ್ನು ಜನರು ಕೇಳಿ ಪಡೆಯುತ್ತಿದ್ದರು.

ವಿಶೇಷ ರಿಯಾಯಿತಿ: ಬಹುತೇಕ ಮಳಿಗೆ ಗಳಲ್ಲಿ ಕನ್ನಡ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲ ಮಳಿಗೆಗಳಲ್ಲಿ ಶೇ 5ರಿಂದ 50ರ ವರೆಗೂ ರಿಯಾಯಿತಿ ನೀಡಲಾಗುತ್ತಿದೆ. ಇನ್ನು ಕೆಲವು ಮಳಿಗೆಗಳಲ್ಲಿ ಕನಿಷ್ಠ ₹ 100 ದರದ ಪುಸ್ತಕ ಖರೀದಿಸಿದರೆ ಶೇ 10 ರಿಯಾಯಿತಿ ದರ ನಿಗದಿ ಮಾಡಲಾ ಗಿದೆ. ಆದರೆ, ಕನ್ನಡ ಹೊರತು ಪಡಿಸಿ ಇತರ ಪುಸ್ತಕಕ್ಕೆ ರಿಯಾಯಿತಿ ನೀಡಲಿಲ್ಲ.

‘ಶುಕ್ರವಾರ ನಮ್ಮ ಮಳಿಗೆಯಲ್ಲಿ ಸಾಧಾರಣ ವ್ಯಾಪಾರವಾಗಿದೆ. ಶನಿವಾರ ಉತ್ತಮ ವ್ಯಾಪಾರವಾಗಿದ್ದು, ಭಾನು ವಾರ ಇನ್ನಷ್ಟು ವ್ಯಾಪಾರದ ನಿರೀಕ್ಷೆಯ ಲ್ಲಿದ್ದೇವೆ. ಈ ಹಿಂದಿನ ನುಡಿಸಿರಿಗಿಂತ ಈ ಬಾರಿ ಪುಸ್ತಕ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ವಿಮರ್ಶಾ ಗ್ರಂಥ, ಕಾದಂಬರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ನಾವು ಶೇ 10ರಷ್ಟು ರಿಯಾಯಿತಿ ದರದಲ್ಲಿ ಪಸ್ತಕ ಮಾರಾಟ ಮಾಡು ತ್ತಿದ್ದೇವೆ’ ಎನ್ನುತ್ತಾರೆ ನವಕರ್ನಾಟಕ ಪ್ರಕಾಶನದ ಸುರೇಶ್‌.

‘ಕೊಟ್ಟೂರು ಸಂಸ್ಕೃತಿ ಪ್ರಕಾಶನ ದಿಂದ ಹೊರತಂದ ₹ 10 ಬೆಲೆಯ ‘ನಮ್ಮ ಕರ್ನಾಟಕ’ ಎಂಬ ಕೃತಿಯ 10 ಸಾವಿರ ಪ್ರತಿಗಳನ್ನು ತಂದಿದ್ದೇವೆ. ಈಗಾಗಲೇ 4 ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ. ಕನ್ನಡ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿಲ್ಲ. ಎಷ್ಟೇ ತಂತ್ರಜ್ಞಾನ ಬಂದರೂ ಪುಸ್ತಕದ ಮೇಲಿನ ಪ್ರೀತಿ ಕಡಿಮೆ ಯಾಗುವುದಿಲ್ಲ’ ಎನ್ನುತ್ತಾರೆ ಸಂಸ್ಕೃತಿ ಪ್ರಕಾಶನದ ಎಸ್‌. ಪ್ರಸನ್ನ ಕುಮಾರ್‌.

‘ಕಳೆದ ವರ್ಷ 150 ಪುಸ್ತಕ ಮಳಿಗೆ ಸೇರಿದಂತೆ ಒಟ್ಟು 450 ಮಳಿಗೆಗಳನ್ನು ತೆರೆಯಲಾಗಿತ್ತು. ಆದರೆ, ಈ ಬಾರಿ ಬೇಡಿಕೆ ಹೆಚ್ಚಿದೆ. ಒಂದು ಮಳಿಗೆಯಿಂದ ಕೇವಲ ₹ 500 ಮಾತ್ರ ಪಡೆಯುತ್ತೇವೆ. ಅವರಿಗೆ ಊಟ, ವಸತಿ, ಮಳಿಗೆಗೆ ಬೇಕಾಗುವ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಿದ್ದೇವೆ. ಒಟ್ಟು 18 ಮಂದಿಯ ತಂಡ ಈ ಮಳಿಗೆಗಳ ನಿರ್ವಹಣೆಯನ್ನು ಮಾಡುತ್ತಿದೆ’ ಎಂದು ಮಳಿಗೆಗಳ ನಿರ್ವಹಣಾ ತಂಡದ ಮುಖ್ಯಸ್ಥ ಗಣಪತಿ ಭಟ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.