ಮಂಗಳೂರು: ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿ ಶನಿವಾರ ನಡೆಯಬೇಕಿದ್ದ ‘ಅಣ್ಣ– ತಮ್ಮ’ ಕಂಬಳಕ್ಕೆ ಪ್ರಾಣಿ ದಯಾ ಸಂಘದ (ಪೇಟಾ) ದೂರು ಆಧರಿಸಿ ಸ್ಥಳೀಯ ಪೊಲೀಸರು ತಡೆ ವಿಧಿಸಿದ್ದಾರೆ.
ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಕಂಬಳ ಆರಂಭವಾಗಬೇಕಿತ್ತು. ಸಂಘಟಕರು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಆದರೆ, ಕಂಬಳ ತಡೆಯುವಂತೆ ಪೇಟಾ ಕಾರ್ಯಕರ್ತರು ಕಾಸರಗೋಡು ಎಸ್‌ಪಿ ಎ.ಶ್ರೀನಿವಾಸ್ ಅವರಿಗೆ ದೂರು ನೀಡಿದ್ದರು. ಸಂಘಟಕರಿಗೆ ನೋಟಿಸ್ ಜಾರಿ ಮಾಡಿರುವ ಎಸ್‌ಪಿ, ಕಂಬಳ ನಡೆಸದಂತೆ ಸೂಚನೆ ನೀಡಿದ್ದಾರೆ.
ಪೇಟಾ ಅರ್ಜಿ ಆಧರಿಸಿ ಕಂಬಳ ನಿಷೇಧಿಸಿ ಕೇರಳ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಆ ಬಳಿಕ ಕಂಬಳ ಪ್ರಿಯರ ಒತ್ತಡಕ್ಕೆ ಮಣಿದಿದ್ದ ಕರ್ನಾಟಕ ಸರ್ಕಾರ, ಹಿಂಸೆಗೆ ಅವಕಾಶವಿಲ್ಲದಂತೆ ಕಂಬಳ ನಡೆಸಲು ಅವಕಾಶ ಕಲ್ಪಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು. ಬಳಿಕ ಮಸೂದೆಗೆ ವಿಧಾನ ಮಂಡಲದ ಒಪ್ಪಿಗೆ ಪಡೆದು ರಾಷ್ಟ್ರಪತಿಯವರ ಅನುಮೋದನೆಗೆ ಕಳುಹಿಸಲಾಗಿತ್ತು. ಈ ಮಸೂದೆಗೆ ರಾಷ್ಟ್ರಪತಿಯವರು 2018ರ ಫೆಬ್ರುವರಿಯಲ್ಲಿ ಅಂಕಿತ ಹಾಕಿದ್ದರು.
ಆದರೆ, ಕೇರಳದಲ್ಲಿ ಕಂಬಳಕ್ಕೆ ಅವಕಾಶ ಕಲ್ಪಿಸುವುದಕ್ಕೆ ಪೂರಕವಾಗಿ ಕಾಯ್ದೆ ತಿದ್ದುಪಡಿ ಆಗಿಲ್ಲ. ಇದೇ ಅಂಶವನ್ನು ಮುಂದಿಟ್ಟುಕೊಂಡು ಪೇಟಾ ಪೊಲೀಸರಿಗೆ ದೂರು ನೀಡಿತ್ತು. ತಕ್ಷಣ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಕಂಬಳಕ್ಕೆ ತಡೆ ನೀಡಿದ್ದಾರೆ.
‘ಕರ್ನಾಟಕ ಸರ್ಕಾರ ಕಂಬಳಕ್ಕೆ ಅವಕಾಶ ಕಲ್ಪಿಸಲು ಪ್ರಾಣಿ ಹಿಂಸೆ ತಡೆ ಕಾಯ್ದೆಗೆ ತಂದಿರುವ ತಿದ್ದುಪಡಿ ಕರ್ನಾಟಕ ರಾಜ್ಯದೊಳಗೆ ಮಾತ್ರ ಅನ್ವಯವಾಗುತ್ತದೆ. ಕೇರಳ ರಾಜ್ಯದಲ್ಲಿ ಕಾಯ್ದೆಯ ತಿದ್ದುಪಡಿ ಆಗಿಲ್ಲ. ಕಂಬಳಕ್ಕೆ ಕಾನೂನಿನ ಬೆಂಬಲವಿಲ್ಲ. ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಕಂಬಳ ನಡೆಸಲು ಅವಕಾಶವಿಲ್ಲ. ಈ ವಿಷಯ ಆಧರಿಸಿ ನಾವು ದೂರು ನೀಡಿದ್ದೆವು’ ಎಂದು ಪೇಟಾ ಕ್ಷಿಪ್ರ ಪ್ರತಿಸ್ಪಂದನ ತಂಡದ ಸದಸ್ಯ ಮೀತ್ ಅಶರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.