ಮಂಗಳೂರು: ನಗರದ ಚಿಲಿಂಬಿಯ ನಾಲ್ಕನೇ ಅಡ್ಡರಸ್ತೆಯಲ್ಲಿರುವ ಭಾರತಿ ಹೈಟ್ಸ್ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಭದ್ರತಾ ಸಿಬ್ಬಂದಿಯ ಮಗನೊಬ್ಬ ಬುಧವಾರ ಮಧ್ಯಾಹ್ನ ಲಿಫ್ಟ್‌ನೊಳಗೆ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ.
ಅಪಾರ್ಟ್‌ಮೆಂಟ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹೂವಿನಹಳ್ಳಿಯ ನಿವಾಸಿಗಳಾದ ನೀಲಪ್ಪ ಮತ್ತು ಪಾರ್ವತಿ ದಂಪತಿಯ ಮಗ ಮಂಜುನಾಥ (8) ಮೃತ ಬಾಲಕ. ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ. ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀಲಪ್ಪ ಮತ್ತು ಪಾರ್ವತಿ ದಂಪತಿಗೆ ಇಬ್ಬರು ಮಕ್ಕಳು, ಮಗಳು ಭಾಗ್ಯಾ ಲೇಡಿಹಿಲ್ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮಂಜುನಾಥ ಉರ್ವದ ಕೆನರಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದ. ಇಬ್ಬರಿಗೂ ಗುರುವಾರ ಈ ವರ್ಷದ ಕೊನೆಯ ಪರೀಕ್ಷೆ ಇತ್ತು.
‘ಬುಧವಾರ ಮಧ್ಯಾಹ್ನ ಪಾರ್ವತಿ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯ ಮೊಗಸಾಲೆಯನ್ನು ಸ್ವಚ್ಛಗೊಳಿಸುತ್ತಿದ್ದರು. ಆಗ ತಾಯಿಯನ್ನು ನೋಡಲೆಂದು ಮಂಜುನಾಥ ತಳ ಅಂತಸ್ತಿನಿಂದ ಲಿಫ್ಟ್ ಹತ್ತಿದ್ದ. ಆತ ಒಳಕ್ಕೆ ಹೋದ ಬಳಿಕ ಲಿಫ್ಟ್ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿತ್ತು. ಅಷ್ಟರಲ್ಲಿ ಬಾಲಕ ಹೊರಬರಲು ಯತ್ನಿಸಿದ್ದಾನೆ. ಆಗ ಮತ್ತೆ ಲಿಫ್ಟ್ ಕೆಲ ಸ್ವಲ್ಪ ಚಲಿಸಿದೆ. ಬಾಲಕನ ತಲೆ ಗೋಡೆ ಮತ್ತು ಲಿಫ್ಟ್ ನಡುವೆ ಸಿಲುಕಿಕೊಂಡು ಆತ ಮೃತಪಟ್ಟಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ಅಕ್ಕ ಭಾಗ್ಯಾ ತಳ ಅಂತಸ್ತಿನಲ್ಲೇ ಇದ್ದಳು. ತಮ್ಮ ಲಿಫ್ಟ್‌ನಲ್ಲಿ ಸಿಲುಕೊಂಡಿರುವುದು ಗೊತ್ತಾಗಿ ನೆರವಿಗಾಗಿ ಕೂಗಿದ್ದಾಳೆ. ತಕ್ಷಣವೇ ಅಪಾರ್ಟ್‌ಮೆಂಟ್‌ನಲ್ಲಿದ್ದವರು ಲಿಫ್ಟ್ ಕಂಪೆನಿಯ ಸಿಬ್ಬಂದಿಯನ್ನು ಕರೆಸಿದ್ದಾರೆ. ಅವರು ಲಿಫ್ಟ್ ಬಾಗಿಲು ತೆರೆದು ಬಾಲಕನನ್ನು ಹೊರ ತೆಗೆದರು. ತಕ್ಷಣವೇ ಮಂಜುನಾಥನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಮಾಹಿತಿ ನೀಡಿದರು.
ನೀಲಪ್ಪ ಮತ್ತು ವಾರ್ತಪತಿ ದಂಪತಿ ಎಂಟು ವರ್ಷಗಳಿಂದ ಭಾರತಿ ಹೈಟ್ಸ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಪಾರ್ವತಿಯವರ ಸಮೀಪದ ಸಂಬಂಧಿಯೊಬ್ಬರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಬೆಳಿಗ್ಗೆ ನೀಲಪ್ಪ ಆಸ್ಪತ್ರೆಯಲ್ಲಿದ್ದವರಿಗೆ ಊಟ ತೆಗೆದುಕೊಂಡು ದೇರಳಕಟ್ಟೆಗೆ ಹೋಗಿದ್ದರು. ತಾಯಿ ಮತ್ತು ಮಕ್ಕಳು ಮಾತ್ರ ಮನೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.