ಮಂಗಳೂರು: ನಗರದ ಮಂಗಳಾದೇವಿ ಬಳಿಯ ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶ್ರೀಮತಿ ಶೆಟ್ಟಿ ಅವರನ್ನು ಶನಿವಾರ ಕೊಲೆ ಮಾಡಿದ ದುಷ್ಕರ್ಮಿಗಳು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದರು. ರುಂಡದ ಭಾಗವನ್ನು ಕೆಪಿಟಿ ಜಂಕ್ಷನ್ ಬಳಿಯ ಗೂಡಂಗಡಿ ಎದುರು ಹಾಗೂ ಮುಂಡ ಮತ್ತು ಇತರೆ ಭಾಗಗಳನ್ನು ನಂದಿಗುಡ್ಡೆಯ ಕೋಟಿ ಚೆನ್ನಯ ವೃತ್ತದ ಬಳಿ ಚೀಲದಲ್ಲಿ ತುಂಬಿ ಎಸೆದಿದ್ದರು.
ಕೊಲೆಗೆ ಸಂಬಂಧಿಸಿದಂತೆ ತನಿಖಾ ತಂಡಕ್ಕೆ ಬಲವಾದ ಸುಳಿವು ಲಭ್ಯವಾಗಿದೆ ಎಂಬ ಮಾಹಿತಿ ದೊರಕಿದೆ. ಮೃತ ಮಹಿಳೆಯ ಜೊತೆ ಸಂಪರ್ಕದಲ್ಲಿದ್ದ ಕೆಲವರು ಸೇರಿದಂತೆ ಹಲವರನ್ನು ತನಿಖಾ ತಂಡ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದೆ.
ಭಾನುವಾರ ಸಂಜೆಯೇ ಕೆಲವರನ್ನು ವಶಕ್ಕೆ ಪಡೆಯಲಾಗಿತ್ತು. ಸೋಮವಾರ ಇನ್ನೂ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಸುಧೀರ್ ಹೆಗ್ಡೆ ಮತ್ತು ಮಂಗಳೂರು ಪೂರ್ವ (ಕದ್ರಿ) ಠಾಣೆ ಇನ್‌ಸ್ಪೆಕ್ಟರ್ ಮಹೇಶ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.
ಸ್ಕೂಟರ್, ಮೊಬೈಲ್ ಪತ್ತೆ: ಕೊಲೆಯಾದ ಮಹಿಳೆಯ ಸ್ಕೂಟರ್ ಮತ್ತು ಮೊಬೈಲ್ ನಾಗುರಿ ಬಳಿ ಪತ್ತೆಯಾಗಿವೆ. ಶನಿವಾರ ಬೆಳಿಗ್ಗೆ ಶ್ರೀಮತಿ ಶೆಟ್ಟಿ ಸ್ಕೂಟರ್‌ನಲ್ಲಿ ಮನೆಯಿಂದ ತೆರಳಿದ್ದರು. ಸ್ಕೂಟರ್‌ನಲ್ಲಿ ರಕ್ತದ ಕಲೆಗಳು ಇದ್ದು, ಕೊಲೆ ಮಾಡಿದ ದುಷ್ಕರ್ಮಿಗಳು ಶವವನ್ನು ಕತ್ತರಿಸಿ ಅದೇ ಸ್ಕೂಟರ್‌ನಲ್ಲಿ ಸಾಗಿಸಿರುವ ಶಂಕೆ ವ್ಯಕ್ತವಾಗಿದೆ.
ಮೃತ ಮಹಿಳೆಯು ಶನಿವಾರ ಬೆಳಿಗ್ಗೆ ಅತ್ತಾವರದ ಕೆಎಂಸಿಯಿಂದ ಬಳಿಯಿಂದ ಬಿಳಿ ಬಣ್ಣದ ಸ್ಕೂಟರ್ ಚಲಾಯಿಸಿಕೊಂಡು ಹೊರಟಿದ್ದಾರೆ. ಅಲ್ಲಿಂದ ಮಂಗಳಾ ಬಾರ್ ಮಾರ್ಗವಾಗಿ ರೋಶನಿ ನಿಲಯದ ಎದುರು ಹೋಗಿದ್ದಾರೆ. ಮುಂದೆ ವೆಲೆನ್ಸಿಯಾ ಸರ್ಕಲ್‍ಗೆ ಬಂದು ಬಲಕ್ಕೆ ತಿರುಗಿ ಗೋರಿಗುಡ್ಡ ಕಡೆಗೆ ಹೋಗಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.