ADVERTISEMENT

ಯುವ ಪೀಳಿಗೆಗಾಗಿ `ಆಟಿದಿನ'

ಪತ್ರೊಡೆ, ಪದೆಂಗಿ ಕಣಿಲೆ, ಉಪ್ಪಡ್ ಪಚ್ಚಿರ್......ಬಗೆಬಗೆಯ ಆಟಿ ತಿನಿಸು

​ಪ್ರಜಾವಾಣಿ ವಾರ್ತೆ
Published 28 ಜುಲೈ 2013, 10:22 IST
Last Updated 28 ಜುಲೈ 2013, 10:22 IST

ಮಂಗಳೂರು: ರಾವೋ ರಾವ್ ಕೊರಂಗ್ ರಾಯೆರೆನೆ ಕೇನುಜಲೆ..... ತುಳು ಹಾಡುಗಳನ್ನು ಹಾಡುತ್ತ ಅತಿಥಿಗಳಿಗಾಗಿ ಮಹಿಳೆಯರು ಕಾದು ಕುಳಿತಿದ್ದರು. ಬಿಸಿ ಬಿಸಿ ಘಮಘಮಿಸುವ ಅಡುಗೆ ಪರಿಮಳ ಬಂದವರನ್ನು ಅಡುಗೆ ಪದಾರ್ಥಗಳ ವೀಕ್ಷಣೆಯತ್ತ ಸೆಳೆ ಯುತ್ತಿತ್ತು. ಒಪ್ಪ ಓರಣವಾಗಿ ಎಲ್ಲಾ ಪದಾರ್ಥಗಳನ್ನು ಅವುಗಳ ನಾಮಫಲಕ ಹಾಗೂ ತಯಾರಕರ ಹೆಸರಿನೊಂದಿಗೆ ಮುಂದಿಡಲಾಗಿತ್ತು.

ಮಂಗಳೂರು ತಾಲ್ಲೂಕು ಮಹಿಳಾ ಮಂಡಲಗಳ ಒಕ್ಕೂಟದ ಆಶ್ರಯದಲ್ಲಿ ಶನಿವಾರ ನಡೆದ `ಆಟಿಯಲ್ಲಿ ಒಂದು ದಿನ' ಕಾರ್ಯಕ್ರಮದಲ್ಲಿ ಒಟ್ಟು 21 ಬಗೆಯ ಅಡುಗೆ ವಿಶೇಷಗಳು ಸವಿ ಯಲು ಸಿದ್ಧವಾಗಿತ್ತು. ಪದೆಂಗಿ ಕಣಿಲೆ, ತೆಕ್ಕರೆ ಅಡ್ಯೆ, ಮೆಂತೆದ ಗಂಜಿ, ಅರಶಿನ ಎಲೆಯ ಗಟ್ಟಿ, ಹಲಸಿನ ಹಣ್ಣಿನ ಗಾರಿಗೆ, ಪತ್ರೊಡೆ, ಪದೆಂಗಿ ತೇಟ್ಲ, ತೊಜಂಕ್ ಪಲ್ಯ, ಸಾರಣೆ ಅಡ್ಯೆ, ಪೆಲಕಾಯಿದ ಗಟ್ಟಿ, ಉಪ್ಪಡ್ ಪಚ್ಚಿರ್, ಪೆಜಕಾಯಿ ಚಟ್ನಿ, ರೆಚ್ಚೆ ಚಟ್ನಿ, ಕುಡು ಚಟ್ನಿ, ಉರ್ಪೆಲ್ ನುಪ್ಪು, ಉಪ್ಪಡ್, ಸಾರ್, ಅರಿತ ಉಂಡೆ, ಕಡಲೆ ತೊಂಡೆ ಕಾಯಿ, ತೇವು ದಂಟುಗಸಿ, ಒಳ್ಳೆ ಮೆಣಸು ಕಷಾಯ ಇವು ಮಹಿಳಾ ಒಕ್ಕೂಟದ ಮಹಿಳೆಯರು ತಮ್ಮ ಮನೆ ಯಿಂದ ಉರ್ವಸ್ಟೋರಿನ ಒಕ್ಕೂಟದ ಕಟ್ಟಡದಲ್ಲಿ ನಡೆದ ಆಟಿಯ ಕೂಟಕ್ಕೆ ತಯಾರಿಸಿ ತಂದ ಅಡುಗೆಗಳು.

ದಿನದ ಉದ್ದೇಶ: `ಆಟಿ ಅಂದರೆ ಆಷಾಢ ತಿಂಗಳು. ಇದು ಕಷ್ಟದ ತಿಂಗಳು ಎಂಬ ಪ್ರತೀತಿ. ಮೊದಲ ಕಾಲದಲ್ಲಿ ಬತ್ತ ಮುಗಿಯುವ ಹೊತ್ತು, ಮಾಡಲು ಕೆಲಸವಿಲ್ಲ. ಮನೆಯಿಂದ ಹೊರ ಹೋಗಲು ಅನುವು ಮಾಡಿ ಕೊಡದ ಬಿಡದೆ ಬರುವ ಜಡಿ ಮಳೆ. ಆಗ ಮನೆಯ ಹೆಂಗಸರು ಮಳೆಗಾಲ ದಲ್ಲಿ ಬೆಳೆಯುವ ಕೆಸು, ತೊಜಂಕ್, ಹಲಸು, ಅರಶಿನ ಎಲೆ, ಕಣಿಲೆ ಉಪಯೋಗಿಸಿ ವಿವಿಧ ಬಗೆಯ ಅಡುಗೆಗಳನ್ನು ತಯಾರಿಸುತ್ತಿದ್ದರು.

ಆದರೆ ಇಂದಿನ ಮಕ್ಕಳಿಗೆ ಈ ಪದಾರ್ಥ ಗಳ ಪರಿಚಯವೂ ಇಲ್ಲ ಮತ್ತು ಅವರಿಗೆ ಇವು ಇಷ್ಟವಾಗುವುದೂ ಇಲ್ಲ. ಆದರೆ ನಮ್ಮ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಕರ್ತವ್ಯ ಅದಕ್ಕಾಗಿ ಇದು ಒಂದು ಪ್ರಯತ್ನ' ಎಂದು ಮಹಿಳಾ ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ಕೆ.ಎ.ರೋಹಿಣಿ ತಿಳಿಸಿದರು. ಕಾರ್ಯಕ್ರಮವನ್ನು ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು. ಪಾಲಿಕೆ ಸದಸ್ಯ ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ಆಟಿಯ ಈ ಕೂಟ ತುಳುವಿನಲ್ಲೆ ನಡೆ ಯಿತು. ಆಟಿ ಆಡೊಂದು ಪೋ ಪುಂಡು, ಸೋಣ ಓಡೊಂದು ಪೋ ಪುನು (ಆಷಾಢ ತಿಂಗಳು ನಿಧಾನವಾಗಿ ಸಾಗುತ್ತದೆ, ಶ್ರಾವಣ ತಿಂಗಳು ಬೇಗ ಓಡುತ್ತದೆ.), ಆಟಿದ ದೊಂಬುಗು ಆನೆದ ಬೆರಿ ಪುಡವು (ಆಷಾಢದ ಬಿಸಿಲಿಗೆ ಆನೆಯ ಬೆನ್ನು ಸುಟ್ಟು ಹೋಗ ಬಹುದು) ಎಂಬ ಗಾದೆ ಮಾತುಗಳು ಅಲ್ಲಿ ಭಾಗವಹಿಸಿದ್ದ ಮಹಿಳೆಯರ ಮಾತುಗಳಲ್ಲಿ  ಹರಿದಾಡಿದವು.

`ಸಂಸ್ಕೃತಿಯ ಬಗ್ಗೆ ತಿಳಿಸಿ, ಉಳಿಸುವ ಪ್ರಯತ್ನ ಆಗಲಿ'
ಆಟಿಯಲ್ಲಿ ಅಡುಗೆಗೆ ಬಳಸುವ ಸೊಪ್ಪುಗಳಲ್ಲಿ ಔಷಧೀಯ ಗುಣವಿದೆ. ಮಳೆಗಾಲವಾದ್ದರಿಂದ ಹೆಚ್ಚು ಉಷ್ಣಾದಾಂಶವುಳ್ಳ ಪದಾರ್ಥಗಳನ್ನು ಅಡುಗೆಯಲ್ಲಿ ಬಳಸುತ್ತೇವೆ. ಪತ್ರೊಡೆಗೆ ಕೆಸುವಿನ ಎಲೆ ಬಳಸಿದರೆ ಅದರ ದಂಟಿನ ಪಲ್ಯ ಮಾಡುತ್ತೇವೆ. ಹಲಸಿನ ಹಣ್ಣಿನಿಂದ ಗಾರಿಗೆ ಮಾಡಿದರೆ ರೆಚ್ಚೆಯಿಂದ ಚಟ್ನಿ ಮಾಡುತ್ತೇವೆ. ಆದ್ದರಿಂದ ಇಲ್ಲಿ ಯಾವುದೇ ಪದಾರ್ಥ ವ್ಯರ್ಥವಾಗುವುದಿಲ್ಲ.
 -ವಿಜಯಲಕ್ಷ್ಮಿ ಬಿ. ಶೆಟ್ಟಿ

ತಾಲ್ಲೂಕು ಮಹಿಳಾ ಮಂಡಲಗಳ  ಒಕ್ಕೂಟದ ಗೌರವಾಧ್ಯಕ್ಷೆ
ಹಿಂದಿನ ಕಾಲದಲ್ಲಿ ಆಟಿಯಲ್ಲಿ ಕಷ್ಟ ಜಾಸ್ತಿ. ಅವರ ಅನುಕೂಲಕ್ಕೆ ತಕ್ಕನಾಗಿ ಮನೆಯಲ್ಲಿ ಗದ್ದೆಯಲ್ಲಿ ಬೆಳೆದ ಕೆಸು, ತೊಜಂಕ್, ಉಪ್ಪು ನೀರಿನಲ್ಲಿ ಹಾಕಿಟ್ಟ ಹಲಸು, ಮಾವುಗಳನ್ನು ಬಳಸಿ ಅಡುಗೆ ತಯಾರಿಸುತ್ತಿದ್ದರು. ಆದರೆ ಈಗ ಜನರ ಪರಿಸ್ಥಿತಿ ಹಾಗಿಲ್ಲ, ಎಲ್ಲಾ ಅನುಕೂಲಗಳಿವೆ. ಆದ್ದರಿಂದ ಈಗಿನ ಮಕ್ಕಳಿಗೆ ಫಾಸ್ಟ್ ಫುಡ್ ಮಾತ್ರ ಗೊತ್ತು. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ತಿಳಿಸಿ, ಉಳಿಸೋ ಪ್ರಯತ್ನ ಆಗಬೇಕು.
-ದೇವಕಿ ಅಚ್ಚುತ, ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.