ADVERTISEMENT

ವಿದ್ಯಾರ್ಥಿಗಳಿಗೆ ಸಮಕಾಲೀನ ಪಾಠಗಳು

ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಹೊಸ ಹೆಜ್ಜೆ: ಪದವಿ ಕನ್ನಡ ಪಠ್ಯದಲ್ಲಿ ವಿದ್ಯುನ್ಮಾನ ವಿಚಾರ

ಕೋಡಿಬೆಟ್ಟು ರಾಜಲಕ್ಷ್ಮಿ
Published 21 ಜುಲೈ 2017, 7:00 IST
Last Updated 21 ಜುಲೈ 2017, 7:00 IST

ಮಂಗಳೂರು: ಮಂಗಳೂರು ವಿಶ್ವವಿದ್ಯಾ ಲಯ ವ್ಯಾಪ್ತಿಯ ಪದವಿ ತರಗತಿಗಳ ಮೊದಲ ನಾಲ್ಕು ಸೆಮಿಸ್ಟರ್‌ಗಳ ಕನ್ನಡ ಪಠ್ಯಕ್ರಮವನ್ನು ಬದಲಾಯಿಸಲಾಗಿದೆ. ಭಾಷಾ ಬೋಧನೆಯಲ್ಲಿ ಸಾಹಿತ್ಯವನ್ನೇ ಪ್ರಧಾನವಾಗಿ ಪರಿಗಣಿಸುವ ಬದಲಾಗಿ ಸಮಕಾಲೀನವಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ಹತ್ತಿರವೆನಿಸುವ ಪಠ್ಯಗಳನ್ನು ಸೇರಿಸಲಾಗಿದೆ.

ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ ಮತ್ತು ಬಿಸಿಎ ತರಗತಿಗಳ ಮೊದಲ ನಾಲ್ಕು ಸೆಮಿಸ್ಟರ್‌ಗಳಿಗೆ ಭಾಷಾ ಕಲಿಕೆಗೆ ಅವಕಾಶ ಇದೆ. ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಸಾಹಿತ್ಯವೇ ಪ್ರಧಾನವಾಗಿ ಇರುವ ಪಠ್ಯವನ್ನು ಈವರೆಗೆ ಕಲಿಯಬೇಕಾಗಿತ್ತು. ಅಂದರೆ ಕಥೆ, ಕಾದಂಬರಿ, ಕಾವ್ಯ ಭಾಗಗಳು, ನಾಟಕ ಮುಂತಾದ ಪಾಠಗ ಳನ್ನೇ ಕಲಿಸಲಾಗುತ್ತಿತ್ತು.

ಆದರೆ ಇತ್ತೀಚೆಗಿನ ವರ್ಷಗಳಲ್ಲಿ ತಂತ್ರಜ್ಞಾನವು ಜೀವನ ಶೈಲಿಯನ್ನು ತೀವ್ರಗತಿಯಲ್ಲಿ ಬದಲಾಯಿಸಿರುವುದರಿಂದ ಕನ್ನಡ ಕಲಿಕೆಯ ವಿಧಾನವನ್ನು ಕೊಂಚ ಬದಲಾ ಯಿಸಲಾಗಿದೆ. ಆಧುನಿಕ ವಿಷಯಗಳನ್ನು ಸೇರಿಸಿಕೊಂಡು ಹೊಸ ಪಠ್ಯಕ್ರಮ ರೂಪಿಸಲಾಗಿದೆ.

ADVERTISEMENT

ಭಾಷೆಯನ್ನು ಬೋಧಿಸುವಾಗ ಸಾಹಿತ್ಯ ಕೃತಿಗಳನ್ನೇ ಮಾಧ್ಯಮವನ್ನಾಗಿ ಇರಿಸುವುದು ಇತ್ತೀಚಿನವರೆಗೆ ನಡೆದು ಬಂದ ಸಂಪ್ರದಾಯವಾಗಿತ್ತು. 19ನೇ ಶತಮಾನದಲ್ಲಿ ಪಾಶ್ಚಿಮಾತ್ಯ ಉನ್ನತ ಶಿಕ್ಷಣ ಪರಿಕಲ್ಪನೆಗೆ ಇಂಗ್ಲಿಷ್‌ ಸಾಹಿತ್ಯದ ಪ್ರವೇಶವಾಯಿತು. ಗ್ರೀಕ್, ಲ್ಯಾಟಿನ್‌ ಬದಿಗೆ ಸರಿದು, ಇಂಗ್ಲಿಷ್‌ ಹೆಚ್ಚಿನ ಪ್ರಾಧಾನ್ಯ ಗಳಿಸಿತು.

ಅದೇ ಮಾದರಿ ಯಲ್ಲಿಯೇ ಭಾರತದಲ್ಲಿಯೂ ಭಾಷಾ ಕಲಿಕೆಯ ಮಾದರಿಯನ್ನು ರೂಪಿಸಲಾ ಯಿತು. ಆದರೆ ಇಂದು ಭಾಷೆಯನ್ನು ಜ್ಞಾನಶಾಖೆಯನ್ನಾಗಿಯೇ ಕಲಿಯಬೇಕಾ ಗಿದೆ ಎಂಬ ಅರಿವು ಮೂಡುತ್ತಿದೆ. ವಿಷಯ ಮತ್ತು ಭಾಷಾ ಪಠ್ಯ ಎಂಬ ಭೇದ ಮಾಡುವುದು ಸರಿಯಲ್ಲ. ಯಾವು ದೇ ಪದವಿ ಮುಗಿಸುವ ವೇಳೆಗೆ ಸಂವಹನ ಕೌಶಲ  ಉತ್ತಮವಾಗಿರ ಬೇಕಾದರೆ ಭಾಷೆಯ ಮೇಲಿನ ಹಿಡಿ ತವೂ ಮುಖ್ಯ ಎಂದು ಅಭಿಪ್ರಾಯ ಪಡುತ್ತಾರೆ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ. ಶಿವರಾಮ ಶೆಟ್ಟಿ.

ಬಾರಿ ಪದವಿ ತರಗತಿಗಳಿಗೆ ಮೊಬೈಲ್‌ ಬ್ಯಾಂಕಿಂಗ್‌, ವಿಕಿಪೀಡಿಯಾ, ಜಿಎಸ್‌ಟಿ ಮುಂತಾದ ವಿಚಾರಗಳನ್ನು ಪಾಠವಾಗಿ ಸೇರಿಸಲಾಗಿದೆ. ವಿದ್ಯುನ್ಮಾನ ಯುಗದಲ್ಲಿ ಕನ್ನಡದ ತಿಳಿವಳಿಕೆಯತ್ತ ವಿದ್ಯಾರ್ಥಿಗಳು ಅರಿಯುವಂತೆ ಪಠ್ಯ ರೂಪಿಸಲಾಗಿದೆ. ಹಾವಿನ ಕುರಿತು ಇರುವ ತಪ್ಪುತಿಳಿವಳಿಕೆಯನ್ನು ಹೋಗ ಲಾಡಿಸುವಂತೆ, ಹಾವು ರಕ್ಷಿಸುವ ಗುರು ರಾಜ ಸನಿಲ್‌ ಅವರೇ ಪಾಠವೊಂದನ್ನು ಬರೆದಿದ್ದಾರೆ.

ಭಾಷಾ ಪಠ್ಯ ಎಂದು ವಿದ್ಯಾರ್ಥಿಗಳು ಲಘುವಾಗಿ ಪರಿಗಣಿಸದೇ, ಅದನ್ನೂ ಪ್ರಾಯೋಗಿಕ ಕಲಿಕೆಯಾಗಿ ಮಾಡುವ, ಶಿಸ್ತಿನ ವಿಷಯಗಳ ಜೊತೆಗೆ ಭಾಷಾ ಕಲಿಕೆಯನ್ನೂ ಸೇರಿಸುವ ಪ್ರಯತ್ನ ಮಾಡ ಲಾಗಿದೆ ಎಂದು ಪ್ರೊ. ಶಿವರಾಮ್‌ ವಿವರಿಸುತ್ತಾರೆ.

ದೀರ್ಘವಾದ ಬರಹವನ್ನು ಸಂಕ್ಷಿಪ್ತ ರೂಪಕ್ಕೆ ಇಳಿಸುವುದು, ವಿಸ್ತೃತವಾದ ಮಾಹಿತಿಯನ್ನು ಗ್ರಹಿಸುವ ಮನಸ್ಥಿತಿ ಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸು ವುದು, ಭಾಷೆಯ ನಿರ್ವಹಣೆಯನ್ನು ವಿದ್ಯಾರ್ಥಿಗಳು ದಕ್ಕಿಸಿಕೊಳ್ಳಲು ಅನು ಕೂಲವಾಗುವಂತೆ ಪ್ರಾಯೋಗಿಕ ಮಾದ ರಿಯಲ್ಲಿ ಪಠ್ಯಗಳಿವೆ. ಕಲಿಕೆ ಮತ್ತು ಬಳಕೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ನಾಗ ರಿಕ ಸೇವಾ ಪರೀಕ್ಷೆಗಳಿಗೆ ಕೂಡ ವಿದ್ಯಾ ರ್ಥಿಗಳನ್ನು ಸಜ್ಜು ಮಾಡಲು ಕನ್ನಡ ಪಾಠ ಗಮನ ಹರಿಸುತ್ತದೆ.

ವಿಶ್ವವಿದ್ಯಾಲಯದ ಪದವಿ ಮಟ್ಟದ ಪಠ್ಯ ಪರಿಷ್ಕರಣೆಗೆ ಪ್ರೊ. ಬಿ. ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಮಿತಿ ಈ ಬದಲಾವಣೆಗಳನ್ನು ಮಾಡಿದೆ. ಕಾರ್ಯನಿರ್ವಾಹಕ ಸಂಪಾದ ಕರಾಗಿ ಡಾ. ನಾಗಪ್ಪ ಗೌಡ ಅವರು ಮುತುವರ್ಜಿ ವಹಿಸಿದ್ದಾರೆ.

**

ಸ್ಥಳೀಯ ಭಾಷೆಗೆ ಆದ್ಯತೆ 
ಭಾಷಾ ಪಠ್ಯಕ್ರಮವನ್ನು ಬದಲಾಯಿಸುವ ಸಂದರ್ಭದಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಲಾಗಿದೆ. ಪದವಿ ವಿದ್ಯಾರ್ಥಿಗಳು ಮೊದಲನೆ ಸೆಮಿಸ್ಟರ್‌ನಲ್ಲಿ ತುಳು, ಎರಡನೇ ಸೆಮಿಸ್ಟರ್‌ನಲ್ಲಿ ಕೊಡವ, ಮೂರನೇ ಸೆಮಿಸ್ಟರ್‌ನಲ್ಲಿ ಕೊಂಕಣಿ, ನಾಲ್ಕನೇ ಸೆಮಿಸ್ಟರ್‌ನಲ್ಲಿ ಬ್ಯಾರಿ ಭಾಷೆಯಲ್ಲಿ ಒಂದೊಂದು ಪಾಠವನ್ನು ಕಲಿಯಬೇಕು.  

ಈ ಭಾಷೆಯ ಪಾಠಗಳ ಅನುವಾದವನ್ನೂ ಪಕ್ಕದಲ್ಲಿಯೇ ನೀಡಲಾಗಿದೆ.  ಇನ್ನು ಭಾಷೆಯ ಔಪಚಾರಿಕ ಶೈಲಿಯನ್ನು ಮಾತ್ರವಲ್ಲದೆ ಜನಪದ ಸೊಗಡಿನ ಪಾಠವನ್ನೂ ಮಕ್ಕಳು ಓದಬೇಕಾಗಿದೆ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಭಾಷೆಯ ಪಾಠವನ್ನೂ ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.