ADVERTISEMENT

ಸಂಚಾರದಲ್ಲಿ ಎಚ್ಚರ: ಗಮನಿಸುತ್ತಿದೆ ಸಿಸಿಟಿವಿ

ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಪ್ರಕರಣ ದಾಖಲು, ದಂಡ ಸಂಗ್ರಹ

ಹೈಮದ್ ಹುಸೇನ್
Published 25 ಮಾರ್ಚ್ 2016, 5:32 IST
Last Updated 25 ಮಾರ್ಚ್ 2016, 5:32 IST
ಸಂಚಾರದಲ್ಲಿ ಎಚ್ಚರ: ಗಮನಿಸುತ್ತಿದೆ ಸಿಸಿಟಿವಿ
ಸಂಚಾರದಲ್ಲಿ ಎಚ್ಚರ: ಗಮನಿಸುತ್ತಿದೆ ಸಿಸಿಟಿವಿ   

ಮಂಗಳೂರು: ರಸ್ತೆ ಅಪಘಾತ ತಡೆಗಟ್ಟಲು ನಗರದೆಲ್ಲೆಡೆ ರಸ್ತೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ಸಂಚಾರ ನಿಯಮಗಳನ್ನು ಪಾಲಿಸದೆ, ಸಂಚಾರ ಪೊಲೀಸರ ಕಣ್ತಪ್ಪಿಸಿ ಮನೆಗೆ ತಲುಪಿ ಸಂತೋಷ ಪಡುವಂತೆಯೂ ಇಲ್ಲ. ಏಕೆಂದರೆ ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅದರ ದೃಶ್ಯಾವಳಿಗಳನ್ನು ಆಧರಿಸಿಯೇ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ.

ನಗರದಲ್ಲಿ 2015 ಜೂನ್‌ 23ರಂದು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅಂದಿನಿಂದ ಫೆಬ್ರುವರಿ ಅಂತ್ಯದವರೆಗೆ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ 3,150 ಪ್ರಕರಣಗಳನ್ನು ದಾಖಲಿಸಿ ಒಟ್ಟು ₹2.83 ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ.

ಹೆಲ್ಮೆಟ್‌ ರಹಿತ ಪ್ರಯಾಣ, ದೋಷಪೂರಿತ ನಂಬರ್‌ ಪ್ಲೇಟ್‌, ಟಿಂಟ್‌ ಗ್ಲಾಸ್‌ಗಳನ್ನು ತೆಗೆಯದೇ ಇರುವುದು, ಸೀಟ್‌ ಬೆಲ್ಟ್‌ ಹಾಕದೇ ಪ್ರಯಾಣ, ವಾಹನ ಚಲಾಯಿಸುವಾಗ ಮೊಬೈಲ್‌ ಬಳಕೆ, ಬೈಕ್‌ನಲ್ಲಿ ಮೂವರ ಪ್ರಯಾಣ, ಸಮವಸ್ತ್ರ ಧರಿಸದೇ ವಾಹನ ಸಂಚಾರ ಮಾಡುವುದು. ನಿಗದಿಗಿಂತ ಹೆಚ್ಚಿನ ಸರಕು ಸಾಗಣೆ ಮಾಡುವುದು. ಫುಟ್‌ಪಾತ್‌ ಮೇಲೆ ವಾಹನ ಓಡಿಸುವುದು, ವಾಹನಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು ಸೇರಿದಂತೆ ವಿವಿಧ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವವರ ಮೇಲೆ ದಂಡ ವಿಧಿಸಲಾಗುತ್ತಿದೆ.

ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 2015ರ ಅಂತ್ಯಕ್ಕೆ ಒಟ್ಟು 2,010 ಪ್ರಕರಣಗಳನ್ನು ದಾಖಲಿಸಿ ₹ 2.01 ಲಕ್ಷ ದಂಡ ಸಂಗ್ರಹಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ದಂಡ ವಿಧಿಸುವ ಪ್ರಕ್ರಿಯೆ ಹೊಸ ವರ್ಷದಿಂದ ಚುರುಕುಗೊಂಡಿದ್ದು, ಜನವರಿ ಮತ್ತು ಫೆಬ್ರುವರಿಯಲ್ಲಿಯೇ 1,140 ಪ್ರಕರಣಗಳನ್ನು ದಾಖಲಿಸಿ ₹ 82 ಸಾವಿರ ದಂಡ ವಿಧಿಸಲಾಗಿದೆ.

‘ಸಂಚಾರ ನಿಯಮ ಉಲ್ಲಂಘಿಸಿದ ತಕ್ಷಣ ವಾಹನದ ಮಾಲೀಕರ ವಿಳಾಸಕ್ಕೆ ನೊಟೀಸ್‌ ಅನ್ನು ಕಳುಹಿಸಲಾಗುತ್ತದೆ. 15 ದಿನದೊಳಗೆ ದಂಡವನ್ನು ಪಾವತಿಸಲು ಸೂಚಿಸಲಾಗುತ್ತದೆ. ನೋಟಿಸ್ ಬಂದ ತಕ್ಷಣ ವಾಹನ ಮಾಲೀಕರು ಠಾಣೆಗೆ ಬಂದು ದಂಡ ಕಟ್ಟಿ ಹೋಗುತ್ತಿದ್ದಾರೆ’ ಎಂದು ನಗರ ಪೊಲೀಸ್‌ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಆಯುಕ್ತ ಡಾ. ಸಂಜೀವ್‌ ಎಂ ಪಾಟೀಲ್‌ ಹೇಳಿದರು.

‘ರಸ್ತೆಯಲ್ಲಿ ಸಂಚಾರ ನಿಯಮ ಪಾಲಿಸಿಲ್ಲ ಎಂದು ಪೊಲೀಸರು ಹೇಳಿದಾಗ ವಾಹನ ಚಾಲಕರು ಏನೋ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಈಗ ದೃಶ್ಯಾವಳಿಗಳನ್ನು ನೋಡಿ ಅವರೆಲ್ಲ ಸುಮ್ಮನೆ ದಂಡ ಕಟ್ಟಿ ಹೋಗುತ್ತಿದ್ದಾರೆ. ನೋಟಿಸ್‌ ಬಂದ ನಂತರ ಕೆಲ ಜನ ಠಾಣೆಗೆ ಬಂದು ದಂಡ ಪಾವತಿಸುತ್ತಿಲ್ಲ. ಅಂತಹವರಿಗೆ ಕೋರ್ಟ್‌ನಿಂದ ಸಮನ್ಸ್‌ ಬರಲಿದೆ. ಅದಕ್ಕೂ ಉತ್ತರ ನೀಡದಿದ್ದರೆ ಬಂಧನದ ವಾರಂಟ್‌ ಬರಲಿದೆ. ಆಗ ಜೈಲೇ ಗತಿಯಾಗಲಿದೆ. ಆದ್ದರಿಂದ ಸಂಚಾರ ನಿಯಮ ಪಾಲಿಸದ ಪ್ರಕರಣ ದಾಖಲಾದ ತಕ್ಷಣ ಠಾಣೆಗೆ ಬಂದು ದಂಡ ಪಾವತಿ ಮಾಡುವುದು ಒಳಿತು’ ಎನ್ನುತ್ತಾರೆ ಸಂಚಾರ ವಿಭಾಗದ ಎಸಿಪಿ ಉದಯ ಎಂ ನಾಯಕ್‌.

‘ದಂಡವನ್ನು ಆನ್‌ಲೈನ್‌ ಮೂಲಕ ಸ್ವೀಕರಿಸುವ ಯೋಚನೆ ಇದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗುತ್ತದೆ. ಆನ್‌ಲೈನ್‌ನಲ್ಲೇ ದಂಡ ಸ್ವೀಕರಿಸುವ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.