ಪುತ್ತೂರು: ಹಳೆ ತಾಲ್ಲೂಕು ಕಚೇರಿ ಹಿಂಭಾಗದಲ್ಲಿರುವ ಬ್ರಿಟಿಷರ ಕಾಲದ ಸಬ್‌ಜೈಲ್ ಇದೀಗ ಅಳಿವಿನಂಚಿನಲ್ಲಿದ್ದು, ಶತಮಾನ ಹಿಂದಿನ ಈ ಜೈಲು ಗೋಡೆಗಳು ಈಗ ಮಳೆಯ ಅಬ್ಬರಕ್ಕೆ ಕುಸಿದು ಬೀಳುವ ಸ್ಥಿತಿಗೆ ತಲುಪಿವೆ. ಮುಂಜಾಗ್ರತೆ ವಹಿಸದಿದ್ದರೆ ಶಿಥಿಲ ಗೋಡೆ ಕುಸಿದು ಬಿದ್ದು ಅಪಾಯ ಖಚಿತ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷರ ಅವಧಿಯಲ್ಲಿ ಆಡಳಿತಾತ್ಮಕ ಕಾರಣಕ್ಕಾಗಿ ಈ ಸಬ್‌ಜೈಲ್ ಅನ್ನು ಹಳೆ ತಾಲ್ಲೂಕು ಕಚೇರಿ ಹಿಂಭಾಗದಲ್ಲಿ ನಿರ್ಮಿಸಲಾಗಿತ್ತು. ಜೋಡು ದಪ್ಪ ಕಲ್ಲು ಬಳಸಿ, ಸುಮಾರು 5 ಅಡಿ ಕಗ್ಗಲ್ಲಿನ ಅಡಿಪಾಯ ಹಾಕಿ ಗೋಡೆ ಭದ್ರವಾಗಿ ನಿರ್ಮಿಸಲಾಗಿತ್ತು. 20 ಅಡಿ ಎತ್ತರ ಮತ್ತು 100 ಮೀಟರ್ ಉದ್ದವಿರುವ ಈ ಗೋಡೆಯಲ್ಲಿ ಇದೀಗ ಬಿರುಕು ಉಂಟಾಗಿ ಶಿಥಿಲಗೊಂಡಿದೆ. ಕಳೆದ ಮಳೆಗಾಲದಲ್ಲಿ ಉತ್ತರ ಭಾಗದ ಗೋಡೆ ಕುಸಿದು ಬಿದ್ದಿತ್ತು. ಇದೀಗ ಪಶ್ಚಿಮ ಭಾಗದ ಗೋಡೆಯೂ ವಾಲಿ ನಿಂತಿದ್ದು, ಕುಸಿಯುವ ಸೂಚನೆ ನೀಡಿದೆ.
60ರ ದಶಕದಲ್ಲಿ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಜೈಲ್ ನಿರ್ಮಾಣಗೊಂಡ ಕಾರಣ ಪುತ್ತೂರಿನ ಈ ಸಬ್‌ಜೈಲ್ ಕಟ್ಟಡ ಅನಾಥವಾಯಿತು. ಮುಂಭಾಗದ ಕಟ್ಟಡ ದುರಸ್ತಿಗೊಂಡು ತಾಲ್ಲೂಕು ಕಚೇರಿ ಆಯಿತು. 3 ವರ್ಷಗಳ ಹಿಂದೆ ಮಿನಿವಿಧಾನ ಸೌಧಕ್ಕೆ ಸ್ಥಳಾಂತರಗೊಂಡು, ಇಲ್ಲಿ ಮಹಿಳಾ ಕಾಲೇಜು ಕಾರ್ಯಾರಂಭಿಸಿತು. ಜೈಲು ದುರ್ವಾಸನೆಯಿಂದ ಪರಿಸರವನ್ನು ಕಲುಷಿತಗೊಳಿಸಿದೆ. ಗೋಡೆಗಳು ಬಿರುಕುಬಿಟ್ಟಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ಗೋಡೆಯ ಪಕ್ಕದಲ್ಲಿಯೇ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಕಟ್ಟಡ, ಆಸ್ಪತ್ರೆಯ ಶವಾಗಾರವಿದೆ. ಆಸ್ಪತ್ರೆಯ ರೋಗಿಗಳು, ಮಕ್ಕಳು ಈ ಭಾಗದಲ್ಲಿ ಓಡಾಡುತ್ತಿರುವುದು, ಶವಾಗಾರಕ್ಕೆ ಬರುವವರು ಈ ಭಾಗದಲ್ಲಿ ಗುಂಪಾಗಿ ನಿಲ್ಲುವುದು ಸಾಮಾನ್ಯವಾಗಿ ಕಂಡು ಬರುತ್ತಿದ್ದು, ಜೈಲಿನ ಗೋಡೆ ಕುಸಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂಬುದು ಸ್ಥಳೀಯರ ಕಳವಳಕ್ಕೆ ಕಾರಣವಾಗಿದೆ.
ಹಳೆ ಬಂದೀಖಾನೆಯ ಆವರಣ ಗೋಡೆ ಕುಸಿಯುವ ಭೀತಿಯಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
– ಎಚ್.ಕೆ. ಕೃಷ್ಣಮೂರ್ತಿ, ಪುತ್ತೂರು ಉಪ ವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.