ಮಂಗಳೂರು: ‘ಭಾರತದಲ್ಲಿನ ಮುಸ್ಲಿಮರಿಗೆ ದೇಶದಲ್ಲಿ ಧಾರ್ಮಿಕ ಗುರುತು ಮಾತ್ರ ಮುಖ್ಯವೇ? ಸಾಮಾಜಿಕ ಗುರುತು ಮುಖ್ಯವಾಗುವುದಿಲ್ಲವೇ ಎಂದು ಲೇಖಕಿ ಬಾನು ಮುಷ್ತಾಕ್ ಪ್ರಶ್ನಿಸಿದರು.
ಅಭಿಮತ ಮಂಗಳೂರು ವತಿಯಿಂದ ಇಲ್ಲಿನ ಶಾಂತಿ ಕಿರಣದಲ್ಲಿ ಶನಿವಾರ ನಡೆದ ಎರಡು ದಿನಗಳ ‘ಜನನುಡಿ– 2015’ ಸಾಹಿತ್ಯ ಸಮಾವೇಶದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಮುಸ್ಲಿಂ ಸಮುದಾಯ ತನ್ನ ಹೊಣೆಗಾರಿಕೆ ಏನು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಮುಸ್ಲಿಮರಲ್ಲಿನ ವಿವೇಕ ಹೆಚ್ಚು ಜಾಗೃತವಾಗಬೇಕು ಎಂದರು.
ಐಎಸ್ ಭಯೋತ್ಪಾದನೆಯ ವಿರುದ್ಧ ಫತ್ವಾ ಹೊರಡಿಸುವ ಪ್ರಸ್ತಾವಕ್ಕೆ ಭಾರತದ 1,700 ಇಮಾಮ್‌ಗಳು ಸಹಿ ಮಾಡಿದ್ದಾರೆ. ಆದರೆ, ಮಾಧ್ಯಮಗಳಲ್ಲಿ ಈ ಬಗ್ಗೆ ಹೆಚ್ಚು ವರದಿಯಾಗಲಿಲ್ಲ. ಮುಸ್ಲಿಂ ಧಾರ್ಮಿಕ ಮುಖಂಡರು ಮತ್ತು ರಾಜಕೀಯ ಮುಖಂಡರು ಇಂತಹ ವಿಚಾರಗಳಲ್ಲಿ ಹೆಚ್ಚು ಬದ್ಧತೆಯನ್ನು ತೋರಿಸಬೇಕು. ಸಮುದಾಯದ ಅಂಚಿನಲ್ಲಿ ದ್ವೀಪದಂತೆ ಬದುಕುತ್ತಿರುವ ಜನರ ಏಳ್ಗೆಗಾಗಿ ಕೆಲಸ ಮಾಡಬೇಕು ಎಂದರು.
‘ಕೋಮುವಾದ ಮತ್ತು ಭ್ರಷ್ಟಾಚಾರ ಭಾರತವನ್ನು ತೆಕ್ಕೆ ಹಾಕಿಕೊಂಡ ಎರಡು ಹಾವುಗಳು. ಅಧಿಕಾರದಲ್ಲಿ ಇರುವವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಕಾಲಕಾಲಕ್ಕೆ ಈ ಎರಡನ್ನೂ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಜಾತ್ಯತೀತ ತತ್ವ, ರಾಷ್ಟ್ರೀಯ ಏಕತೆ ಮತ್ತು ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಬೀಳುತ್ತಿದೆ. ಕೋಮುವಾದ ಮತ್ತು ಭ್ರಷ್ಟಾಚಾರವನ್ನು ಮಣಿಸಬಲ್ಲ ಶಕ್ತಿಯಾಗಿ ನಮ್ಮ ಸಾಂಸ್ಕೃತಿಕ ಚಳವಳಿಗಳು ರೂಪುಗೊಳ್ಳಬೇಕು’ ಎಂದರು.
ನುಡಿ ಎಂಬುದು ಸಿರಿ, ಬದುಕು, ಆರ್ದ್ರತೆ, ಸಂತೋಷ, ಯಾತನೆ ಎಲ್ಲವೂ ಹೌದು. ನುಡಿಗೆ ಸಮಾಜದ ಕೆಳ ಅಂತಸ್ತಿನ ಜನರ ಕಂಬನಿ, ಆತಂಕ, ಯಾತನೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಸಿಗಬೇಕು. ಅಂತಹ ಬೆಳವಣಿಗೆಗೆ ಜನನುಡಿ ಸಮಾವೇಶ ನಾಂದಿಯಾಗಲಿ ಎಂದರು.
ಭಯ ಬಿತ್ತುವ ಕೆಲಸ
ಮುಖ್ಯ ಅತಿಥಿಯಾಗಿದ್ದ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಭಯ ಬಿತ್ತುವ ಪ್ರಯತ್ನ ಹೆಚ್ಚುತ್ತಿದೆ. ಸಂವಿಧಾನದಿಂದ ಅಧಿಕಾರ ಮತ್ತು ಅಂತಸ್ತು ಕಳೆದುಕೊಳ್ಳುವ ಭಯದಲ್ಲಿ ಇರುವವರು ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡಲು ಯತ್ನಿಸುತ್ತಿದ್ದಾರೆ. ಮೌಢ್ಯ ಬಿತ್ತಿ ಫಸಲು ತೆಗೆಯುತ್ತಿದ್ದವರು ವಿಚಾರವಾದಿಗಳ ಹತ್ಯೆಯ ಮೂಲಕ ಭಯ ಸೃಷ್ಟಿಸಲು ಹೊರಟಿದ್ದಾರೆ’ ಎಂದರು.
‘ತಲೆಗೆ ಸಗಣಿ, ಊಟಕ್ಕೆ ಕಲ್ಲು, ರೋಗಕ್ಕೆ ಮೂತ್ರ, ಪಾಠದ ಬದಲು ಭಜನೆ ಮತ್ತು ಆಟದ ಬದಲು ಯೋಗ ಎಂಬ ಪ್ರಯೋಗಗಳಿಗೆ ಭಾರತ ಬಲಿಯಾಗುತ್ತಿದೆ. ಮೂಲಭೂತವಾದಿಗಳು ಎಂದೋ ಬಿತ್ತಿದ ಧಾರ್ಮಿಕ ಅಸಹಿಷ್ಣುತೆಯ ಬೀಜ ಈಗ ಹೆಮ್ಮರವಾಗಿ ನಮ್ಮನ್ನು ಕಾಡುತ್ತಿದೆ’ ಎಂದರು.
ರೈತ ಹೋರಾಟಗಾರ ಕಡಿದಾಳು ಶಾಮಣ್ಣ ಮಾತನಾಡಿ, ‘ನುಡಿ ಜನರ ಬದುಕಿನಿಂದ ದೂರವಾಗುವ ಅಪಾಯದ ವಾತಾವರಣ ನಿರ್ಮಾಣವಾಗುತ್ತಿದೆ. ಸರ್ಕಾರಿ ಶಾಲೆಗಳು ನಿರಂತರವಾಗಿ ಬಾಗಿಲು ಮುಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ನುಡಿಯನ್ನು ಸಶಕ್ತಗೊಳಿಸುವ ಪ್ರಯತ್ನದ ಭಾಗವಾಗಿ ಇಂತಹ ಸಮಾವೇಶ ಎಲ್ಲೆಡೆ ನಡೆಯಬೇಕು’ ಎಂದರು.
ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರು ಸಮಸ್ಯೆಯ ಸುಳಿಯೊಳಗೆ ಸಿಲುಕಿದೆ. ದೌರ್ಜನ್ಯ, ಕ್ರೌರ್ಯ ಹೆಚ್ಚುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆದ ಚಟುವಟಿಕೆಗಳು ಸಾಮಾಜಿಕವಾಗಿ ಬಲವಾದ ಆಘಾತ ನೀಡುತ್ತಿವೆ. ಇದಕ್ಕೆ ಈಗಲೇ ಪರಿಹಾರ ಕಂಡುಕೊಳ್ಳದಿದ್ದರೆ ಭವಿಷ್ಯತ್ತಿನಲ್ಲಿ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ ಎಂದು ಫಾದರ್ ಜಾನ್ ಫರ್ನಾಂಡಿಸ್ ಆತಂಕ ವ್ಯಕ್ತಪಡಿಸಿದರು.
ಲೇಖಕಿ ಡಾ.ಎಚ್.ಎಸ್.ಅನುಪಮಾ, ‘ಸಾಂಸ್ಕೃತಿಕ ಮುಖವಾಡಗಳನ್ನು ಬಯಲು ಮಾಡುವುದು ಈ ಸಮಾವೇಶದ ಮುಖ್ಯ ಗುರಿ. ಆ ಮೂಲಕ ಸಮಾಜದ ಕೊನೆಯ ಸ್ತರದಲ್ಲಿರುವ ಜನರ ಧ್ವನಿಯಾಗುವುದು ನಮ್ಮ ಉದ್ದೇಶ. ಇದಕ್ಕಾಗಿ ವಿಚಾರವಾದದ ಜೊತೆ ಸಮಾಜಮುಖಿ ಅಧ್ಯಾತ್ಮವನ್ನೂ ನಾವು ಬಳಕೆ ಮಾಡಿಕೊಳ್ಳಬೇಕು. ನಾರಾಯಣ ಗುರು, ಕೈವಾರ ತಾತಯ್ಯ, ಶಿಶುನಾಳ ಷರೀಫರಂತಹ ಅಧ್ಯಾತ್ಮಿಕ ನಾಯಕರು ನಮ್ಮ ಮಾದರಿ ಆಗಬೇಕು’ ಎಂದರು.
ಮುಸ್ಲಿಮರಲ್ಲಿನ ಜಾತ್ಯತೀತವಾದಿಗಳನ್ನು ಬದಿಗೆ ಸರಿಸುವ ಪ್ರಯತ್ನಕ್ಕೆ ಪ್ರಬಲ ಪ್ರತಿರೋಧ ರೂಪುಗೊಳ್ಳಬೇಕಾಗಿದೆ
- ಬಾನು ಮುಷ್ತಾಕ್,
ಲೇಖಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.