ADVERTISEMENT

ಸಿಬಿಎಸ್‍ಇ, ಐಸಿಎಸ್‍ಇ ಕ್ರಮದಿಂದ ಆಧುನಿಕ ಅಸ್ಪೃಶ್ಯತೆ

ಆಳ್ವಾಸ್‌ ನುಡಿಸಿರಿಯಲ್ಲಿ ಶಿಕ್ಷಣ ಕ್ರಮ ಕುರಿತ ಗೋಷ್ಠಿ – ಡಾ.ನಿರಂಜನಾರಾಧ್ಯ ಬೇಸರ

ಕೋಡಿಬೆಟ್ಟು ರಾಜಲಕ್ಷ್ಮಿ
Published 29 ನವೆಂಬರ್ 2015, 8:38 IST
Last Updated 29 ನವೆಂಬರ್ 2015, 8:38 IST

ರತ್ನಾಕರ ವರ್ಣಿ ವೇದಿಕೆ, (ಮೂಡು­ಬಿದರೆ): ‘ಸಿಬಿಎಸ್‍ಇ, ಐಸಿಎಸ್‍ಇ, ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮ ಎಂಬ ನೆಪದಲ್ಲಿ ಇಂದು ಸಮಾಜವನ್ನು ವಿಭಜನೆ ಮಾಡಲಾಗುತ್ತಿದೆ. ಈ ಮೂಲಕ ಆಧುನಿಕ ಅಸ್ಪೃಶ್ಯತೆ ಸೃಷ್ಟಿ­ಯಾಗುತ್ತಿದೆ’ ಎಂದು ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ಹೇಳಿದರು.

ಆಳ್ವಾಸ್ ನುಡಿಸಿರಿಯಲ್ಲಿ ಶನಿವಾರ ‘ಶಿಕ್ಷಣ ಹೊಸತನದ ಹುಡುಕಾಟ’ ಎಂಬ ವಿಷಯದ ಬಗೆಗಿನ ಗೋಷ್ಠಿಯಲ್ಲಿ ಸಾಂವಿಧಾನಿಕ ಮೌಲ್ಯಗಳ ಕುರಿತು ಅವರು ಮಾತನಾಡಿದರು.

ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎಂಬ ಆಶಯವನ್ನು ಸಂವಿಧಾನದಲ್ಲಿ ಸೇರಿಸಿದರೂ ಐಸಿಎಸ್‍ಇ, ಸಿಬಿಎಸ್‍ಇ, ಆಂಗ್ಲ ಮಾಧ್ಯಮ ಎಂಬ ವಿವಿಧ ವಿಭಾಗಗಳಲ್ಲಿ ಶಿಕ್ಷಣವನ್ನು ನೀಡುವ ಮೂಲಕ ಕನ್ನಡ ಮಾಧ್ಯಮದ ಶಿಕ್ಷಣ, ಸಮಾಜದ ಅಂಚಿನಲ್ಲಿರುವವರಿಗೆ ಮಾತ್ರ ಸೀಮಿತವಾದುದು ಎಂಬ ಅಪಾರ್ಥ ಬರುವಂತಹ ಪರಿಸ್ಥಿತಿ ನಿರ್ಮಾಣ­ವಾಗಿದೆ. ಸಮಾಜದ ಅಂಚಿನ­ಲ್ಲಿರುವ­ವರಿಗೆ ಗುಣಾತ್ಮಕ ಶಿಕ್ಷಣ ಲಭ್ಯವಾಗದೇ ಇರುವಂತಹ ವ್ಯವಸ್ಥೆ ನಮ್ಮಲ್ಲಿ ರೂಪು­ಗೊಂಡಿದೆ ಎಂದು ಅವರು ಹೇಳಿದರು.

ಇಂದು ಸಮಾಜದಲ್ಲಿ ಅಸಹಿಷ್ಣುತೆ­ಯ ಬಗ್ಗೆ ಆಕ್ಷೇಪಗಳು ಕೇಳಿ ಬರುತ್ತಿವೆ. ಮಕ್ಕಳಿಗೆ ಬಾಲ್ಯದಲ್ಲಿ ಸಮಗ್ರವಾಗಿ ಶಿಕ್ಷಣ ನೀಡದೆ ಇರುವುದೇ ಅಸಹಿಷ್ಣುತೆಯ ಭಾವನೆ ಬೆಳೆಯಲು ಕಾರಣ. ಶಿಕ್ಷಣ ಎಂದರೆ ಬರೆಯ ಅಕ್ಷರಾಭ್ಯಾಸವಲ್ಲ. ಮಾನವೀಯತೆ, ಸಮಾನತೆ, ಸಂಸ್ಕೃತಿಯ ಮೌಲ್ಯಗಳನ್ನು ಅವರಲ್ಲಿ ಬಾಲ್ಯದಿಂದಲೇ ಬಿತ್ತಬೇಕು. ಅದಕ್ಕೆ ಸಮಾನ ಶಾಲಾ ಶಿಕ್ಷಣ ಪರಿಕಲ್ಪನೆಯೇ ಸೂಕ್ತವಾದ ಕ್ರಮ ಎಂದ ಅವರು, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಂವಿ­ಧಾನದ ಮೌಲ್ಯಗಳ ಪಾಠ ನಡೆಯಲಿ ಎಂದು ಸಲಹೆ ನೀಡಿದರು.

ಜಾಗತೀಕರಣದ ಬಗ್ಗೆ ಸಂಭ್ರಮ­ದಿಂದ ಬಣ್ಣಿಸುವವರಿದ್ದಾರೆ. ಆದರೆ ಇದು ನಮ್ಮ ಜೀವನಾವಶ್ಯಕ­ತೆಗಳನ್ನು ಮಾರು­ಕಟ್ಟೆ­ಯಲ್ಲಿ ಇಡು­ವಂತಹ ವ್ಯವಸ್ಥೆ. ಗುಲಾ­ಮ­ಗಿರಿಗೆ ಅತಿ ವೇಗವಾಗಿ ಸಾಗುವಂತೆ ಮಾಡುವ ಈ ಜಾಗತೀಕರಣದ ವೈಭವ ಸಲ್ಲದು. ಅದು ನಮ್ಮನ್ನು ಹೊಸ ದಾಸ್ಯಕ್ಕೆ ತಳ್ಳುತ್ತದೆ ಎಂದು ಹೇಳಿದರು.

ಕನ್ನಡ ಮಾಧ್ಯಮ ಎಂಬ ವಿಷಯದ ಬಗ್ಗೆ ಮಾತನಾಡಿದ ಡಾ. ಎಂ. ಮೋಹನ ಆಳ್ವ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಇಂದು ಅಂಕಿ ಅಂಶಗಳನ್ನು ತೆರೆದು ನೋಡಿದರೆ, ಆಂಗ್ಲ ಮಾಧ್ಯಮದ ಶೇ 88.27ರಷ್ಟು ಮಕ್ಕಳು ಎಸ್ಸೆಸ್ಸೆಲ್ಸಿಯಲ್ಲಿ ಪಾಸಾದರೆ, ಶೇ 78.7ರಷ್ಟು ಕನ್ನಡ ಮಾಧ್ಯಮದ ಮಕ್ಕಳು ಪಾಸಾಗುತ್ತಿದ್ದಾರೆ. ಸಿಇಟಿ ಪರಿಕಲ್ಪನೆಯಿಂದ ಎಲ್ಲರಿಗೂ ಉನ್ನತ ಶಿಕ್ಷಣದ ಅವಕಾಶವನ್ನು ಕಲ್ಪಿಸಿದರೂ ಕಾಲೇಜುಗಳಲ್ಲಿ ಸಿಇಟಿ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸುವ ಪ್ರಾಧ್ಯಾಪಕರ ಕೊರತೆ ಇದೆ. ಆದ್ದರಿಂದ ಮಕ್ಕಳು ಟ್ಯೂಷನ್ ದಂಧೆಗೆ ಶರಣಾ­ಗುವುದು ಅನಿವಾರ್ಯ ಆಗಿದೆ ಎಂದು ವಿಷಾದಿಸಿದರು.

ಆದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಕನ್ನಡ ಮಾಧ್ಯಮ ಶಾಲೆ ಈ ಎಲ್ಲ ಸಮಸ್ಯೆ­ಗಳನ್ನೂ ಸವಾಲಾಗಿ ಸ್ವೀಕರಿಸಿ ಮುಂದೆ ಬಂದಿದೆ. ಕನ್ನಡ ಮಾಧ್ಯಮದಲ್ಲಿ ಓದಿದರೂ ಸಿಬಿಎಸ್‍ಇ ಪಠ್ಯಕ್ರಮದಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಒಳ್ಳೆ ಅಂಕಗಳನ್ನು ಪಡೆಯುವುದು ಸಾಧ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ.

ಪ್ರತಿಭಾ ಕಾರಂಜಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮದ ಮಕ್ಕಳೇ ಮುಂದಿದ್ದಾರೆ. ತಾಯಿ ಭಾಷೆಯ ಸತ್ವವೇ ಅಂತಹುದು. ಸರ್ಕಾರ ಇಂತಹ ಪ್ರಯತ್ನಗಳನ್ನು ಗುರುತಿಸಬೇಕು. ಯಾವುದೇ ಸಮುದಾಯದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಆಳ್ವಾಸ್ ಸಂಸ್ಥೆ ಸಿದ್ಧವಾಗಿದೆ. ಅಧ್ಯಯನ ಸಾಮಗ್ರಿಗಳನ್ನು ರೂಪಿಸಲು ಸಿದ್ಧವಾಗಿದೆ ಎಂದ ಅವರು ಕನ್ನಡ ನಾಡಿನಲ್ಲಿ ಬೆಳೆಯುತ್ತಿರುವ ಭಾರಿ ಉದ್ಯಮಿಗಳು ಕನ್ನಡ ನುಡಿಯ ಉಳಿವಿಗಾಗಿ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ಸಮ್ಮೇಳನಾಧ್ಯಕ್ಷ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ನಾ. ದಾಮೋದರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾಜದ ಬಹುತೇಕ ಸಮಸ್ಯೆಗಳು ಸಮಾನ ಶಿಕ್ಷಣ ಪದ್ಧತಿಯಿಂದ ಬಗೆಹರಿಯುವುದು ಖಂಡಿತ.
- ಡಾ.ನಿರಂಜನಾರಾಧ್ಯ ವಿ.ಪಿ.
ಶಿಕ್ಷಣ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.