ADVERTISEMENT

ಸುರತ್ಕಲ್‌ ಎನ್‌ಐಟಿಕೆ ಆವರಣದಲ್ಲಿ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 16:41 IST
Last Updated 17 ನವೆಂಬರ್ 2018, 16:41 IST

ಮಂಗಳೂರು: ಸುರತ್ಕಲ್‌ನ ಎನ್‌ಐಟಿಕೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಕಟ್ಟಡದ ಆರನೇ ಮಹಡಿಯ ಕಿಟಕಿಯಿಂದ ಕೆಳಕ್ಕೆ ಜಿಗಿದು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಶನಿವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಹಾರಾಷ್ಟ್ರದ ಲಾತೂರು ನಿವಾಸಿ ಆನಂದ ಪಾಠಕ್‌ (20) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಈತ ಎನ್‌ಐಟಿಕೆಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದ.

ಮಧ್ಯಾಹ್ನ 2.30ರ ಸುಮಾರಿಗೆ ಕಟ್ಟಡದ ಆರನೇ ಮಹಡಿಯ ಕಿಟಕಿಯಿಂದ ಕೆಳಕ್ಕೆ ಜಿಗಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಎನ್‌ಐಟಿಕೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಎಸ್‌.ನರೇಂದ್ರನಾಥ್‌ ನೀಡಿರುವ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್‌ ಠಾಣೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ADVERTISEMENT

ಹಾಜರಾತಿ ಕೊರತೆ ಕಾರಣ?: ಆನಂದ್‌ ಪಾಠಕ್‌ ಗಿಟಾರ್‌ ನುಡಿಸುತ್ತಿದ್ದ. ಎನ್‌ಐಟಿಕೆ ಮ್ಯೂಸಿಕ್‌ ಕ್ಲಬ್‌ನ ಸಕ್ರಿಯ ಸದಸ್ಯನೂ ಆಗಿದ್ದ. ಶನಿವಾರ ಮಧ್ಯಾಹ್ನ ಮ್ಯೂಸಿಕ್‌ ಕ್ಲಬ್‌ನಲ್ಲಿ ಅಭ್ಯಾಸ ನಡೆಸುವುದಕ್ಕಾಗಿಯೇ ಆರನೇ ಮಹಡಿಗೆ ಹೋಗಿದ್ದ. ಅಲ್ಲಿಂದಲೇ ಕೆಳಕ್ಕೆ ಜಿಗಿದಿದ್ದಾನೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಮೃತ ವಿದ್ಯಾರ್ಥಿ ಹಾಜರಾತಿ ಕೊರತೆ ಎದುರಿಸುತ್ತಿದ್ದ. ತರಗತಿ ತಪ್ಪಿಸದಂತೆ ಪ್ರಾಧ್ಯಾಪಕರು ಈತನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಶನಿವಾರ ಮಧ್ಯಾಹ್ನ ಕೂಡ ಪ್ರಾಧ್ಯಾಪಕರೊಬ್ಬರು ಮ್ಯೂಸಿಕ್‌ ಕ್ಲಬ್‌ ಬಳಿಯೇ ಆನಂದ್‌ಗೆ ಬುದ್ಧಿವಾದ ಹೇಳಿದ್ದರು. ತರಗತಿ ತಪ್ಪಿಸಿ ಮ್ಯೂಸಿಕ್‌ ಕ್ಲಬ್‌ಗೆ ಹೋಗದಂತೆ ಎಚ್ಚರಿಸಿದ್ದರು. ಆ ಬಳಿಕವೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಎನ್‌ಐಟಿಕೆ ಆವರಣದಲ್ಲಿ ಹರಿದಾಡುತ್ತಿದೆ.

ವಿದ್ಯಾರ್ಥಿಗಳ ಪ್ರತಿಭಟನೆ

ಹಾಜರಾತಿ ಕೊರತೆಯ ಕಾರಣದಿಂದ ಪ್ರಾಧ್ಯಾಪಕರು ಎಚ್ಚರಿಕೆ ನೀಡಿರುವುದೇ ಆನಂದ್‌ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ ಕೆಲವು ವಿದ್ಯಾರ್ಥಿಗಳು ಶನಿವಾರ ರಾತ್ರಿ ಎನ್‌ಐಟಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರಾಧ್ಯಾಪಕರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.