ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ವಿಷಯದಲ್ಲಿ ಡಾ. ವೆಂಕಟರಾಜ ಪುಣಿಂಚಿತ್ತಾಯ ಅವರ ಕೊಡುಗೆ ಅಪಾರ ಎಂದು ಡಾ.ಆಶಾಲತಾ ಸಿ.ಕೆ. ಅಭಿ ಪ್ರಾಯಪಟ್ಟರು. ಅಡ್ಯಾರಿನಲ್ಲಿ ಆಯೋಜಿಸಿದ ವಿಶ್ವ ತುಳುವೆರೆ ಪರ್ಬ ಕಾರ್ಯಕ್ರಮದಲ್ಲಿ ಭಾನುವಾರ ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ತುಳು ಪಾಡ್ದನದಿಂದ ಪ್ರಾರಂಭವಾದ ಅವರ ಸಾಹಿತ್ಯದ ಗಾಥೆ ಮಹಾಕಾವ್ಯವನ್ನು ತುಳುವಿಗೆ ಭಾಷಾಂತರಿಸುವವರೆಗೆ ನಡೆದಿದೆ. ತುಳು ಭಾಷಾ ಲಿಪಿಯ ಕುರಿತು ಚರ್ಚಿಸುವಾಗ ಮೊದಲು ಗುರುತಿಸಿಕೊಳ್ಳುವವರು ಡಾ. ಪುಣಿಂಚಿತ್ತಾಯ. ಆದರೆ, ನಮ್ಮ ಪೂರ್ವಜರ ಕಾಲದಲ್ಲೇ ಇದ್ದ ಲಿಪಿಯನ್ನು ಅವರು ಪ್ರಥಮ ಬಾರಿಗೆ ಬೆಳಕಿಗೆ ತಂದವರು. 16ನೇ ಶತಮಾನದ ಕವಿ ವಿಷ್ಣು ತುಂಗ ಬರೆದ ತಾಳೆ ಗರಿಯ ಗ್ರಂಥ ಪ್ರತಿಗಳಿಗೆ ಸಮಕಾಲೀನ ಸಮಯದಲ್ಲಿ ಪುಣಿಂಚಿತ್ತಾಯ ಅವರು ಜೀವಾರ್ಥ ನೀಡಿದ್ದಾರೆ ಎಂದರು.
ಮಧೂರು, ಕಲ್ಲಿಕೋಟೆ ವಿಶ್ವವಿದ್ಯಾಲಯದ ತಾಳೆಗರಿ ಸಂಗ್ರಹಾಲಯದಿಂದ ಹಿಂದಿನ ಕವಿಗಳು ಬರೆದ ಶ್ರೀ ಭಾಗವತೋ, ಸ್ವರ್ಣಪರ್ವ, ದೇವಿ ಮಹಾತ್ಮೆ ಕೃತಿಗಳನ್ನು ಜನರಿಗೆ ಪರಿಚಯಿಸಿದರು. ತಾಳೆಗರಿಗಳನ್ನು ಅಧ್ಯಯನ ಮಾಡಿ ಇತಿಹಾಸ ನಿರ್ಮಿಸ ಹೊರಟ ಅವರು, ತುಳು ಧಾತು ಕೋಶ, ತುಳು ಕವಿತೆಗಳ ಗೊಂಚಲು, ತುಳು ಮತ್ತು ಕಾಸರಗೋಡಿನ ಜನತೆಗೆ ಇರುವ ನಂಟಿನ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಹಲವು ಕೃತಿಗಳು ಇಂದಿಗೂ ಬೆಳಕಿಗೆ ಬರದಿರುವುದು ವಿಪರ್ಯಾಸ ಎಂದರು.
ಮಂದಾರ ಕೇಶವ ಭಟ್ ಕುರಿತು ಇಂದಿರಾ ಎಂ. ಸಾಲಿಯಾನ್ ಮಾತನಾಡಿ, ಮರಾಠಿ ತನ್ನ ಮಾತೃ ಭಾಷೆಯಾದರೂ ತುಳು ಭಾಷೆಗೆ ಒತ್ತು ನೀಡಿ ಯಕ್ಷಗಾನ ಕ್ಷೇತ್ರದಲ್ಲೂ ಮಂದಾರ ಕೇಶವ ಭಟ್ ತನ್ನ ಛಾಪು ಮೂಡಿಸಿದ್ದಾರೆ. ೨೨ ಅಧ್ಯಾಯದ ‘ಮಂದಾರ ರಾಮಾಯಣ’ವನ್ನು ಬರೆದಿದ್ದಾರೆ. ರಾಮನನ್ನು ಸಾಮಾನ್ಯ ಮನುಷ್ಯನಂತೆ ಬಿಂಬಿಸಿದ್ದಲ್ಲದೇ ತುಳು ನಾಡಿನ ಭೂತ ಕೋಲ, ನಾಗಮಂಡಲ, ಮಾಟ– ಮಂತ್ರಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಅಪ್ಪಣ್ಣ ಗುರ್ಕರೆ, ದೂಚನ್ನ ಪಂಡಿತ, ಸೋಮಕ್ಕ ಮುಂತಾದ ತನ್ನದೇ ಪಾತ್ರಗಳನ್ನು ನಿರ್ಮಿಸಿ ಕೃತಿಯನ್ನು ರಸವತ್ತಾಗಿಸಿದ್ದಾರಲ್ಲದೆ, ಭಾಷೆಯ ಸುಂದರತೆಯನ್ನೂ ಹೆಚ್ಚಿಸಿದ್ದಾರೆ ಎಂದರು. ಉದಯ ಧರ್ಮಸ್ಥಳ ಮಾತನಾಡಿ, ‘ಚೋಮನ ದುಡಿ’ಯನ್ನು ತುಳುಗೆ ತರ್ಜುಮೆ ಮಾಡಿ ಹಿರಿಯ ಕವಿಗಳಿಂದ ಮೆಚ್ಚುಗೆ ಪಡೆದ ಕೆದಂಬಾಡಿ ಜತ್ತಪ್ಪ ರೈ ಅವರು ತುಳು ಭಗವದ್ಗೀತೆಯನ್ನು ಬರೆದಿದ್ದಾರೆ. ‘ಮೃಗಯಾ ಸಾಹಿತ್ಯ ನಿರ್ಮಾತೃ’, ‘ತುಳುನಾಡ ಭೀಷ್ಮ’, ‘ನಡೆದಾಡುವ ವಿಶ್ವಕೋಶ’ ಎಂದು ಗುರುತಿಸಿಕೊಂಡು ತುಳು ಭಾಷಾ ಕಂಪನ್ನು ಎಲ್ಲೆಡೆ ಬಿತ್ತರಿಸಿದ್ದಾರೆ ಎಂದರು.
ಬಳಿಕ ಜ್ಯೋತಿ ಚೇಳ್ಯಾರ್ ಅವರು ಎಸ್. ಆರ್. ಹೆಗ್ಡೆ ಕುರಿತ ವಿಷಯ ಮಂಡಿಸಿದರು. ಪ್ರಕಾಶ್ ಚಂದ್ರ ಶಿಶಿಲ, ಡಿ.ಎಂ. ಕುಲಾಲ್, ರೂಪಕಲಾ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.