ADVERTISEMENT

ಮಂಗಳೂರು: 1,220 ನಕಲಿ ಕಾರ್ಡ್ ಪತ್ತೆ

ಜಿಲ್ಲೆಯಲ್ಲಿ 1.40 ಲಕ್ಷ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ

ಸಂಧ್ಯಾ ಹೆಗಡೆ
Published 29 ಆಗಸ್ಟ್ 2024, 6:52 IST
Last Updated 29 ಆಗಸ್ಟ್ 2024, 6:52 IST

ಮಂಗಳೂರು: ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ಗುರುತಿನ ಚೀಟಿ ಪಡೆದಿದ್ದ 1,220 ಮಂದಿಯನ್ನು ಪತ್ತೆ ಹಚ್ಚಿರುವ ಕಾರ್ಮಿಕ ಇಲಾಖೆ, ಅವರ ಕಾರ್ಡ್ ಅನ್ನು ರದ್ದುಗೊಳಿಸಿದೆ.

ಜಿಲ್ಲೆಯಲ್ಲಿ ಉಪವಿಭಾಗ–1 ಮತ್ತು ಉಪವಿಭಾಗ–2 ಇದ್ದು, ಒಟ್ಟು 1.40 ಲಕ್ಷ ಕಾರ್ಮಿಕ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಅವರಲ್ಲಿ ಜಿಲ್ಲೆಯವರು ಹಾಗೂ ಉದ್ಯೋಗಕ್ಕಾಗಿ ಹೊರಜಿಲ್ಲೆಗಳಿಂದ ಬಂದು ಇಲ್ಲಿ ನೆಲೆಸಿರುವವರು ಇದ್ದಾರೆ. ಬಂಟ್ವಾಳ ತಾಲ್ಲೂಕಿನಲ್ಲಿ ಗರಿಷ್ಠ ಸಂಖ್ಯೆ 35,490 ಕಾರ್ಡ್‌ಗಳು ವಿತರಣೆಯಾಗಿವೆ.

ನಕಲಿ ದಾಖಲಾತಿ ಸೃಷ್ಟಿಸಿ, ಗುರುತಿನ ಚೀಟಿ ಪಡೆದಿದ್ದ ಕಟ್ಟಡ ಕಾರ್ಮಿಕರಲ್ಲದವರ ಕಾರ್ಡ್ ರದ್ದುಗೊಳಿಸಲು ಕಳೆದ ವರ್ಷ ಕಾರ್ಮಿಕ ಇಲಾಖೆ ‘ಬೋಗಸ್ ಕಾರ್ಡ್ ರದ್ದತಿ ಅಭಿಯಾನ’ ಹಮ್ಮಿಕೊಂಡಿತ್ತು. ಆ ನಂತರದಲ್ಲೂ ಇಲಾಖೆಯಿಂದ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. 

ADVERTISEMENT

ಕೋವಿಡ್–19 ಸಾಂಕ್ರಾಮಿಕದ ವೇಳೆ ಕಾರ್ಮಿಕರಿಗೆ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡಿತ್ತು. ಈ ವೇಳೆ ಕೃಷಿ ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು, ಅಂಗನವಾಡಿ ಕಾರ್ಯಕರ್ತೆಯರು, ಟೈಲರ್‌ಗಳು ಕೂಡ ಕಾರ್ಡ್ ಪಡೆದಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪ್ರತಿ ಕಾರ್ಡ್‌ದಾರರ ಬಳಿ ಹೋಗಿ ಪರಿಶೀಲನೆ ಮಾಡಲಾಗಿದೆ. ಒಬ್ಬರು ಇನ್‌ಸ್ಪೆಕ್ಟರ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಸ್ಥಳಕ್ಕೆ ಭೇಟಿ ನೀಡಿ, ಎಲ್ಲ ದಾಖಲೆಗಳನ್ನು ಪರಿಶೀಲಿಸುತ್ತಾರೆ. ದಾಖಲೆ ಸಮರ್ಪಕವಾಗಿ ಇಲ್ಲಿದ್ದಲ್ಲಿ, ಕಾರ್ಡ್ ಅನ್ನು ತಿರಸ್ಕರಿಸಲಾಗುತ್ತದೆ. ಅರ್ಹತೆ ಇಲ್ಲದವರು ಕಾರ್ಡ್‌ ಪಡೆದಿದ್ದರೆ ಸ್ವ ಇಚ್ಛೆಯಿಂದ ವಾಪಸ್ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಅನೇಕರು ಕಾರ್ಡ್ ಹಿಂದಿರುಗಿಸಿದ್ದಾರೆ. ಅವರಲ್ಲಿ ಸ್ಥಳೀಯರೇ ಹೆಚ್ಚಿನವರು ಇದ್ದರು ಎಂದು ಕಾರ್ಮಿಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಅನರ್ಹರು ಸೌಲಭ್ಯ ಪಡೆದರೆ, ಅವರು ಪಡೆದ ಸೌಲಭ್ಯವನ್ನು ವಾಪಸ್ ಪಡೆದು, ಹಣ ಮರುಪಾವತಿಗೆ ತಿಳಿಸಲಾಗುತ್ತದೆ. ಜಿಲ್ಲೆಯಲ್ಲಿ ಅಂತಹ ಯಾವುದೇ ಪ್ರಕರಣ ದಾಖಲಾಗಿಲ್ಲ. ಒಂದು ಬಾರಿ ಕಾರ್ಡ್ ತಿರಸ್ಕೃತಗೊಂಡರೆ ಪುನಃ ಅವರಿಗೆ ಕಾರ್ಡ್ ನೀಡಲು ಆಗುವುದಿಲ್ಲ. ಅವರು 90 ದಿನ ಕೆಲಸ ಮಾಡಿರುವ ದಾಖಲೆಯನ್ನು ಮಾಲೀಕರಿಂದ ಪಡೆದು ಸಲ್ಲಿಸಿದರೆ, ಅದನ್ನು ಪರಿಶೀಲಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಕಾರ್ಡ್ ರದ್ದತಿ ಅಭಿಯಾನದ ಜೊತೆಗೆ ಅರ್ಹ ಫಲಾನುಭವಿಗಳು ಸೌಲಭ್ಯ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಅಭಿಯಾನವನ್ನೂ ನಡೆಸಲಾಗುವುದು.
–ನಾಝಿಯಾ ಸುಲ್ತಾನ್, ಕಾರ್ಮಿಕ ಇಲಾಖೆ ವಿಭಾಗೀಯ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.