ADVERTISEMENT

ಬೆಳ್ತಂಗಡಿ: ಗಡಾಯಿಕಲ್ಲು ಏರಲು ಜ್ಯೋತಿರಾಜ್ ಸಿದ್ಧತೆ

ತಂಡದಿಂದ ಪೂರ್ವತಯಾರಿ: 1,700 ಅಡಿ ಎತ್ತರ ಬಂಡೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 4:19 IST
Last Updated 11 ಫೆಬ್ರುವರಿ 2023, 4:19 IST
ಗಡಾಯಿಕಲ್ಲು ಹತ್ತಲು ಜ್ಯೋತಿರಾಜ್‌ ನಕ್ಷೆ ತಯಾರು ಮಾಡಿರುವುದು (ಎಡಚಿತ್ರ). ಧರ್ಮಸ್ಥಳಕ್ಕೆ ಭೇಟಿ ನೀಡಿದ ಜ್ಯೋತಿರಾಜ್ ಮತ್ತು ತಂಡ
ಗಡಾಯಿಕಲ್ಲು ಹತ್ತಲು ಜ್ಯೋತಿರಾಜ್‌ ನಕ್ಷೆ ತಯಾರು ಮಾಡಿರುವುದು (ಎಡಚಿತ್ರ). ಧರ್ಮಸ್ಥಳಕ್ಕೆ ಭೇಟಿ ನೀಡಿದ ಜ್ಯೋತಿರಾಜ್ ಮತ್ತು ತಂಡ   

ಬೆಳ್ತಂಗಡಿ: ಚಿತ್ರದುರ್ಗ ಕಲ್ಲಿನಕೋಟೆ, ಜೋಗ ಜಲಪಾತ ಪ್ರದೇಶ ಸೇರಿದಂತೆ ಅಪಾಯಕಾರಿ ಪ್ರದೇಶಗಳನ್ನು ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಬರಿಗೈಯಿಂದಲೇ ಏರುವ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಫೆ.12ರಂದು ಗಡಾಯಿಕಲ್ಲನ್ನು ಏರಲಿದ್ದು, ಈ ನಿಟ್ಟಿನಲ್ಲಿ ಅವರ ತಂಡವು ಪೂರ್ವತಯಾರಿ ಆರಂಭಿಸಿದೆ.

ತಾಲ್ಲೂಕಿನ ನಡ ಗ್ರಾಮದಲ್ಲಿರುವ ಗಡಾಯಿಕಲ್ಲು ನರಸಿಂಹ ಘಡ, ಜಮಲಾಬಾದ್ ಎಂದೂ ಹೆಸರುವಾಸಿಯಾಗಿದೆ. ಇದು ಸುಮಾರು 1,700 ಅಡಿ ಎತ್ತರವಿದೆ. ಹಲವಾರು ಪರ್ವತಗಳನ್ನು, ಬೆಟ್ಟ, ಕಟ್ಟಡಗಳನ್ನು ಏರಿರುವ ಜ್ಯೋತಿರಾಜ್, ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತಮ್ಮ ಸಾಹಸ ತೋರಲು ಮುಂದಾಗಿದ್ದಾರೆ.

ಅದಕ್ಕಾಗಿ ಬಸವರಾಜ್, ರಾಜಶೇಖರ, ಪವನ್ ಜೋಸ್, ನಿಂಗರಾಜು, ಮದನ್, ನವೀನ್, ಅಭಿ, ಪವನ್ ಕುಮಾರ್ ಎಂಬುವರ ಎಂಟು ಮಂದಿಯ ನಡಕ್ಕೆ ಬಂದಿದ್ದು, ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡಿದ್ದಾರೆ. ತಂಡವು ಶಾಸಕ ಹರೀಶ್ ಪೂಂಜ ಅವರನ್ನು ಭೇಟಿ ಮಾಡಿದೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಿಂದ ಗಡಾಯಿಕಲ್ಲು ಏರಲು ಅನುಮತಿಯನ್ನು ಪಡೆದಿದೆ.

ADVERTISEMENT

ಫೆ.12ರಂದು ಬೆಳಿಗ್ಗೆ 8.30ರ ಬಳಿಕ ಗಡಾಯಿಕಲ್ಲನ್ನು ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಕಡೆಯಿಂದ ಏರಲಿರುವ ಜ್ಯೋತಿರಾಜ್ ಸಾಹಸಕ್ಕೆ ತಂಡ ಮಾರ್ಕಿಂಗ್, ಪರಿಸರ ವೀಕ್ಷಣೆ ಮೊದಲಾದ ಪೂರ್ವ ತಯಾರಿಗಳನ್ನು ಶುಕ್ರವಾರ ನಡೆಸಿದೆ. ಕಾನೂನಿನ ಚೌಕಟ್ಟಿನೊಳಗೆ ಉತ್ತರಾಭಿಮುಖವಾಗಿ ಕೈಗಳ ಸಹಾಯದಿಂದ ಗಡಾಯಿಕಲ್ಲು ಏರಲಿರುವ ಜ್ಯೋತಿರಾಜ್ ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ಹಗ್ಗ ಅಳವಡಿಸಿಕೊಂಡು ಸಾಹಸ ನಡೆಸಲಿದ್ದಾರೆ.

ಬೆಟ್ಟ, ಗುಡ್ಡ, ಕಟ್ಟಡ, ಪರ್ವತ ಏರುವ ಜತೆ ಅಪಾಯಕಾರಿ ಸ್ಥಳಗಳಲ್ಲಿರುವ ಶವಗಳನ್ನು ಮೇಲೆತ್ತುವ ಹಾಗೂ ಇನ್ನಿತರ ಸಾಹಸಕಾರ್ಯ ಮಾಡುವ ಜ್ಯೋತಿರಾಜ್‌ಗೆ ಶಿಕ್ಷಣದಿಂದ ವಂಚಿತರಾಗುವ ಮಕ್ಕಳಿಗೆ ಸಹಕಾರ ನೀಡುವ ಸಲುವಾಗಿ ಫೌಂಡೇಶನ್ ಸ್ಥಾಪಿಸುವ ಉದ್ದೇಶವಿದೆ. ತನ್ನ ಸಾಹಸಮಯ ಕೆಲಸಗಳಿಂದ ಬರುವ ಆದಾಯವನ್ನು ಫೌಂಡೇಶನ್ ಸ್ಥಾಪನೆಗೆ ಮೀಸಲಿರಿಸುವ ಉದ್ದೇಶ ಹೊಂದಿದ್ದಾರೆ.

‘ಜೋಗ ಜಲಪಾತ ಪರಿಸರದಲ್ಲಿ ಜಾರಿ ಬಿದ್ದು ಗಾಯಗೊಂಡು ಚಿಕಿತ್ಸೆಗೆ ಒಳಗಾದ ಕಾರಣದಿಂದ ಕೂಡಿಟ್ಟ ದುಡ್ಡೆಲ್ಲ ವ್ಯಯವಾಗಿದೆ. ಮುಂದೆ ಜಿಮ್‌ ತರಗತಿ ತೆರೆಯುವ ಉದ್ದೇಶವನ್ನು ಹೊಂದಲಾಗಿದೆ. ಒಟ್ಟು 13 ಶಿಷ್ಯರನ್ನು ಹೊಂದಿದ್ದು, ಅವರೂ ಹಲವು ಸಾಹಸಗಳಲ್ಲಿ ಭಾಗವಹಿಸುತ್ತಿದ್ದಾರೆ’ ಎಂದು ಜ್ಯೋತಿರಾಜ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.