ADVERTISEMENT

ಕಾಸರಗೋಡು | ಉಸಿರಾಟ ತೊಂದರೆ; 19 ವಿದ್ಯಾರ್ಥಿಗಳು ಆಸ್ಪತ್ರೆಗೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 13:57 IST
Last Updated 26 ಜುಲೈ 2023, 13:57 IST

ಕಾಸರಗೋಡು: ಕೆಮ್ಮು, ಉಸಿರಾಟd ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೀಲೇಶ್ವರದ ಏಕಲವ್ಯ ಮಾದರಿ ವಸತಿ ಶಾಲೆಯ 19 ವಿದ್ಯಾರ್ಥಿಗಳನ್ನು ಬುಧವಾರ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

11 ಮಂದಿಯನ್ನು ನೀಲೇಶ್ವರ ತಾಲ್ಲೂಕು ಆಸ್ಪತ್ರೆಗೂ 8 ಮಂದಿಯನ್ನು ಕಾಞಂಗಾಡಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೂ ದಾಖಲಿಸಲಾಗಿದೆ. ಇಬ್ಬರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾದಕ ಪದಾರ್ಥ ಸಹಿತ ಬಂಧನ

ADVERTISEMENT

ಕಾಸರಗೋಡು: ಪ್ರತ್ಯೇಕ ಪ್ರಕರಣಗಳಲ್ಲಿ ಬುಧವಾರ ಮಾದಕ ಪದಾರ್ಥ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಿಂಗಾಲ್ ಮೊಟ್ಟ ಎಂಬಲ್ಲಿ ಕಾರಿನಲ್ಲಿ ಸಾಗಾಟ ನಡೆಸುತ್ತಿದ್ದ 0.1 ಗ್ರಾಂ ಎಲ್ಎಸ್‌ಡಿ ಪದಾರ್ಥ ಸಹಿತ ಚಟ್ಟಂಚಾಲ್ ನಿವಾಸಿ ಝಕೀರ್ (34) ಎಂಬಾತನನ್ನು ಅಂಬಲತ್ತರ ಪೊಲೀಸರು ಬಂಧಿಸಿದ್ದಾರೆ. ಉದುಮಾ ಪಳ್ಳಂ ಎಂಬಲ್ಲಿ ಬೈಕಿನಲ್ಲಿ ಸಾಗಾಟ ನಡೆಸುತ್ತಿದ್ದ 8.320 ಗ್ರಾಂ ಎಂ.ಡಿ.ಎಂ.ಎ. ಸಹಿತ ಕಟ್ಟತ್ತಡ್ಕ ನಿವಾಸಿ ಮುಹಮ್ಮದ್ ಹನೀಫ (33) ಎಂಬಾತನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.

ನವಜಾತ ಶಿಶು ಮೃತ್ಯು: ಪೊಲೀಸರಿಗೆ ದೂರು

ಕಾಸರಗೋಡು: ಖಾಸಗಿ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಮನೆಮಂದಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಉಪ್ಪಳ ನಿವಾಸಿ ಮಹಿಳೆ ಈ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದರು. ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ನಡೆದಿತ್ತು. ಆದರೆ ಜನಿಸಿದ 12 ತಾಸುಗಳ ಮುನ್ನ ಶಿಶು ಕೊನೆಯುಸಿರೆಳೆದಿತ್ತು. ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಮನೆಮಂದಿ ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ನ್ಯುಮೋನಿಯಾ: ಮಗು ಮೃತ್ಯು

ಕಾಸರಗೋಡು: ನ್ಯುಮೋನಿಯಾದಿಂದ ಹಸುಳೆ ಮೃತಪಟ್ಟ ಘಟನೆ ಸೋಕಾಲು ಪುಲ್ ಕುತ್ತಿ ಎಂಬಲ್ಲಿ ನಡೆದಿದೆ. ಇಲ್ಲಿನ ನಳಿನಾನಂದ-ಅನಿತಾ ದಂಪತಿಯ ಪುತ್ರ ಕುಶಾಂಗ್ (1 ವರ್ಷ) ಮೃತಪಟ್ಟಿದ್ದು 5 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೆರೆಯಲ್ಲಿ ಮೃತದೇಹ ಪತ್ತೆ

ಕಾಸರಗೋಡು: ಪೆರಿಯ ಪಯಟ್ಟಿಚ್ಚಾಲ್‌ನ ತೋಟವೊಂದರ ಕೆರೆಯಲ್ಲಿ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ. ಮೂಲತಃ ಮಧ್ಯಪ್ರದೇಶ ನಿವಾಸಿ, ಈ ತೋಟದ ಕಾರ್ಮಿಕ ಮೋಹಿತ್ ಪಾಂಡೆ (19) ಎಂಬಾತನ ಮೃತದೇಹ ಈ ರೀತಿ ಪತ್ತೆಯಾಗಿದೆ. ಮಂಗಳವಾರ ನಾಪತ್ತೆಯಾಗಿದ್ದ ಈತನನ್ನು ಹುಡುಕುತ್ತಿದ್ದವರಿಗೆ ಕೆರೆಯ ಬಳಿ ಚಪ್ಪಲಿ ಪತ್ತೆಯಾಗಿದ್ದು, ಅಗ್ನಿಶಾಮಕದಳವನ್ನು ಕರೆಸಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

ಆ್ಯಸಿಡ್‌ ಸೇವಿಸಿ ಮಹಿಳೆ ಆತ್ಮಹತ್ಯೆ

ಬದಿಯಡ್ಕ: ದೇಲಂಪಾಡಿ ಸಮೀಪದ ತಿಮ್ಮನಗುಂಡಿ ಬಾಬು ನಾಯ್ಕರ ಪತ್ನಿ ಪುಷ್ಪಾವತಿ (60) ಆ್ಯಸಿಡ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಆ್ಯಸಿಡ್‌ ಸೇವಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ. ಅವರ ಪತಿ 1 ವರ್ಷದ ಹಿಂದೆ ನಿಧನರಾಗಿದ್ದು ಅದರ ಚಿಂತೆಯಿಂದ ಮನನೊಂದು ಆ್ಯಸಿಡ್ ಸೇವಿಸಿರುವುದಾಗಿ ಹೇಳಲಾಗಿದೆ. ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.