ADVERTISEMENT

ಸೈಬರ್ ವಂಚಕರಿಗೆ ನೆರವಾದ ಆರೋಪದಲ್ಲಿ ಇಬ್ಬರ ಬಂಧನ: 86 ಸಿಮ್‌ ಕಾರ್ಡ್‌ ವಶ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 3:05 IST
Last Updated 15 ಆಗಸ್ಟ್ 2024, 3:05 IST

ಮಂಗಳೂರು: ಮರೋಳಿ ಗ್ರಾಮದ ಬಿಕರ್ನಕಟ್ಟೆ ಬಜ್ಜೋಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇಬ್ಬರು ಯುವಕರನ್ನು ಸೈಬರ್ ವಂಚಕರಿಗೆ ನೆರವಾದ ಆರೋಪದಲ್ಲಿ ಸೆನ್‌ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 86 ಸಿಮ್ ಕಾರ್ಡ್‌ಗಳು ಸಹಿತ ₹ 5.49 ಲಕ್ಷ ಮೌಲ್ಯದ ಸ್ವತ್ತುಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

‘ಬಿಬಿಎ ವಿದ್ಯಾರ್ಥಿ ಶಹಾದ್ ಮೊಹಮ್ಮದ್ ಸಮೀರ್‌ (21), ಮೊಹಮ್ಮದ್ ಅಜೀಮ್‌ (19) ಬಂಧಿತರು. ಅವರಿಬ್ಬರೂ ಬೆಳ್ತಂಗಡಿಯವರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಮರೋಳಿ ಗ್ರಾಮದ ಬಿಕರ್ನಕಟ್ಟೆ ಬಜ್ಜೋಡಿಯಲ್ಲಿ ಬಾಡಿಗೆ ಮನೆಯಲ್ಲಿರುವ ಯುವಕರು ಭಾರಿ ಸಂಖ್ಯೆಯಲ್ಲಿ ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸಿ, ವಿದೇಶದಲ್ಲಿರುವವರಿಗೆ ಅಕ್ರಮವಾಗಿ ಮಾರಾಟ ಮಾಡಲು ಸಂಚು ರೂಪಿಸಿದ ಬಗ್ಗೆ ಸೆನ್‌ ಠಾಣೆಯ ಪಿಎಸ್‌ಐ ಗುರಪ್ಪ ಕಂಟಿ ಅವರಿಗೆ ಮಾಹಿತಿ ಬಂದಿತ್ತು.

ADVERTISEMENT

‘ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು,  ಬೆಳ್ತಂಗಡಿಯ ಮುಸ್ತಾಫ ಮತ್ತು ಮಡಂತ್ಯಾರ್‌ನ ಸಾಜೀದ್ ಸೂಚನೆಯಂತೆ ವಿದೇಶಕ್ಕೆ ಮಾರಾಟ ಮಾಡಲು  ಗೆಳೆಯರನ್ನು ಪುಸಲಾಯಿಸಿ ಸಿಮ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದರು. ಆರೋಪಿ ಸಮೀರ್‌ನಿಂದ 86 ಸಿಮ್‌ ಕಾರ್ಡ್‌, ಎರಡು ಮೊಬೈಲ್ ಫೋನ್‌, ಸಾಗಾಟಕ್ಕೆ ಬಳಸಿದ ಮಾರುತಿ ಸ್ವಿಫ್ಟ್‌ ಕಾರನ್ನು ಹಾಗೂ ಇನ್ನೊಬ್ಬ ಆರೋಪಿ ಅಜೀಮ್‌ನಿಂದ ಒಂದು ಮೊಬೈಲ್ ಫೋನ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.