ADVERTISEMENT

ಪಾಲಿಕೆ 20 ವಾರ್ಡ್‌ಗಳಿಗೆ ನೀರು ಪೂರೈಕೆ ವ್ಯತ್ಯಯ

ತುಂಬೆ: ಅಗೆತದಿಂದ ಕುಡಿಯುವ ನೀರು ಕೊಳವೆಗೆ ಹಾನಿ, ಗೇಲ್‌ ಕಂಪನಿಗೆ ₹ 5.50 ಲಕ್ಷ ದಂಡ ವಿಧಿಸಿದ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 7:22 IST
Last Updated 1 ಆಗಸ್ಟ್ 2024, 7:22 IST
ಬಂಟ್ವಾಳ ಸಮೀಪದ ತುಂಬೆಯಲ್ಲಿ ಕುಡಿಯುವ ನೀರು ಪೂರೈಕೆ ಕೊಳವೆಯನ್ನು ದುರಸ್ತಿಪಡಿಸಲು ಬುಧವಾರ ಮಣ್ಣನ್ನು ಅಗೆದು ತೆಗೆಯಲಾಯಿತು
ಬಂಟ್ವಾಳ ಸಮೀಪದ ತುಂಬೆಯಲ್ಲಿ ಕುಡಿಯುವ ನೀರು ಪೂರೈಕೆ ಕೊಳವೆಯನ್ನು ದುರಸ್ತಿಪಡಿಸಲು ಬುಧವಾರ ಮಣ್ಣನ್ನು ಅಗೆದು ತೆಗೆಯಲಾಯಿತು   

ಮಂಗಳೂರು: ತುಂಬೆಯಿಂದ ಬೆಂದೂರ್‌ವೆಲ್‌ ಕಡೆಗೆ ಕುಡಿಯುವ ನೀರು ಪೂರೈಸುವ ಕೊಳವೆಗೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ (ಗೇಲ್‌) ಕಂಪನಿಯು ಕೈಗೊಂಡ ಕಾಮಗಾರಿಯಿಂದಾಗಿ ಬುಧವಾರ ಹಾನಿ ಉಂಟಾಗಿದೆ. ನಗರದ ದಕ್ಷಿಣ ಭಾಗದ ಸುಮಾರು 20 ವಾರ್ಡ್‌ಗಳ ನೀರು ಪೂರೈಕೆ ವ್ಯತ್ಯಯವಾಯಿತು.

ಪಾಲಿಕೆ ಆಯುಕ್ತ ಆನಂದ ಸಿ.ಎಲ್‌ ಅವರು ಸ್ಥಳಕ್ಕೆ ಭೇಟಿ ನೀಡಿ, ದುರಸ್ತಿ ಕಾಮಗಾರಿಯನ್ನು  ಪರಿಶೀಲಿಸಿದರು.

‘ಪಡೀಲ್‌, ಜಪ್ಪು, ಶಕ್ತಿನಗರ ಪ್ರದೇಶಗಳ ಸುಮಾರು 20 ವಾರ್ಡ್‌ಗಳಿಗೆ ನೀರು ಪೂರೈಸುವ 1,100 ಮಿ.ಮೀ. ಸುತ್ತಳತೆಯ ಕೊಳವೆಗೆ ಗೇಲ್‌ ಕಂಪನಿ ಕೈಗೊಂಡ ಕಾಮಗಾರಿಯಿಂದ ಹಾನಿ ಉಂಟಾಗಿದೆ. ಕೊಳವೆಯು ತೂತಾಗಿ ಭಾರಿ ಪ್ರಮಾಣದಲ್ಲಿ ನೀರು ಪೋಲಾಗಿದೆ. ಪಾಲಿಕೆಯ ಕುಡಿಯುವ ನೀರಿನ ಕೊಳವೆ ಹಾದು ಹೋಗುವ ಕಡೆ ಯಾವುದೇ ಮುನ್ಸೂಚನೆ ನೀಡದೆಯೇ ರಂಧ್ರ ಕೊರೆದಿದ್ದಕ್ಕಾಗಿ ಗೇಲ್‌ ಕಂಪನಿಗೆ ₹ 5.50 ಲಕ್ಷ ದಂಡ ವಿಧಿಸಿದ್ದೇನೆ. ಅವರ ಖರ್ಚಿನಲ್ಲೇ ಕೊಳವೆಯನ್ನು ದುರಸ್ತಿ ಪಡಿಸುವಂತೆಯೂ ಸೂಚಿಸಿದ್ದೇನೆ’ ಎಂದು ಪಾಲಿಕೆ ಆಯುಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ದುರಸ್ತಿ ಕಾರ್ಯವು ಸಮರೋಪಾದಿಯಲ್ಲಿ ನಡೆಯುತ್ತಿದೆ. 20 ವಾರ್ಡ್‌ಗಳಿಗೆ ಮತ್ತೆ ನೀರು ಪೂರೈಕೆ ಗುರುವಾರವೇ ಸಾಧ್ಯವಾಗಬಹುದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕುಡಿಯುವ ನಿರು ಪೂರೈಕೆ ಕೊಳವೆಗೆ ಹಾನಿ ಉಂಟಾದ ಪ್ರದೇಶಕ್ಕೆ ಪಾಲಿಕೆಯ ವಿರೋಧ ಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ ನೇತೃತ್ವದಲ್ಲಿ ಪಾಳಿಕೆ ಸದಸ್ಯರ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ, ನವೀನ್‌ ಡಿಸೋಜ, ಲಾನ್ಸಿಲೋಟ್ ಪಿಂಟೊ, ಆಶ್ರಫ್ ಬಜಾಲ್, ಅಬ್ದುಲ್ ರವೂಫ್ ಜೊತೆಯಲ್ಲಿದ್ದರು.

ನೀರು ಪೂರೈಕೆ ಕೊಳವೆಯ ದುರಸ್ತಿ ಬಗ್ಗೆ ಸ್ಥಳದಲ್ಲಿದ್ದ ಪಾಲಿಕೆ ಆಯುಕ್ತ ಆನಂದ್‌ ಅವರಿಂದ ಪಾಲಿಕೆ ಸದಸ್ಯರು ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.