ಮಂಗಳೂರು: ವಿದ್ಯಾರ್ಥಿ ಜೀವನದಿಂದ ವೃತ್ತಿ ಬದುಕಿನ ಹೊಣೆಗಾರಿಕೆಗೆ ಅಡಿಯಿಟ್ಟ ಯುವ ಎಂಜಿನಿಯರ್‌ಗಳಿಗೆ ಪದವಿ ಪ್ರಮಾಣಪತ್ರ ಹಿಡಿದು ಫೋಟೊ ಕ್ಲಿಕ್ಕಿಸಿಕೊಳ್ಳುವ ಸಂಭ್ರಮ. ಬದುಕಿನ ಮುಖ್ಯ ಮೈಲಿಗಲ್ಲಿಗೆ ತಲುಪಿದ ಮಕ್ಕಳ ಸಾಧನೆ ಕಂಡ ಪಾಲಕರ ಕಂಗಳಲ್ಲಿ ಹೊಸ ಹೊಳಪು. ಹಿರಿ–ಕಿರಿಯರ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎನ್‌ಐಟಿಕೆ) 21ನೇ ಘಟಿಕೋತ್ಸವ.
ಶನಿವಾರ ಕಾಲೇಜಿನ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಜಿ.ಸತೀಶ್ ರೆಡ್ಡಿ, ತಿರುವನಂತಪುರಂನ ಸಿಎಸ್ಐಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್ ಡಿಸಿಪ್ಲಿನರಿ ಸೈನ್ಸ್ ಅಂಡ್ ಟೆಕ್ನಾಲಜಿಯ ನಿರ್ದೇಶಕ ಆನಂದ ರಾಮಕೃಷ್ಣನ್ ಅವರು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ವಿತರಿಸಿದರು.
‘ಪ್ರಾಧ್ಯಾಪಕರ ಮಾರ್ಗದರ್ಶನ, ಶಿಸ್ತುಬದ್ಧವಾಗಿ ಅಭ್ಯಾಸ ಮಾಡಿದರೆ ರ್‍ಯಾಂಕ್ ಗಳಿಸುವುದು ಕಷ್ಟವಾಗದು’ ಎಂದು ಎಂ.ಟೆಕ್‌ನಲ್ಲಿ ಎರಡು ಚಿನ್ನದ ಪದಕ ಕೊರಳಿಗೇರಿಸಿಕೊಂಡ ಒಡಿಶಾದ ಶಿವಾನಂದ ಪ್ರಧಾನ ಅನುಭವ ಹಂಚಿಕೊಂಡರು. ಅವರು ಪ್ರಸ್ತುತ ಕೆಎಫ್‌ಐಎಲ್ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದಾರೆ.
‘ದೇಶದಲ್ಲಿ ಯುವಶಕ್ತಿ ಸೃದೃಢವಾಗಿದ್ದು, ತಂತ್ರಜ್ಞಾನದಲ್ಲಿ ಭಾರತವು ದೇಶದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಕಾಲ ದೂರವಿಲ್ಲ. ಯುವ ತಲೆಮಾರು ಹೆಚ್ಚು ಕ್ರಿಯಾಶೀಲವಾಗುವ ಮೂಲಕ ಭಾರತವನ್ನು ಇನ್ನೊವೇಟಿವ್ ಹಬ್ ಆಗಿ ರೂಪಿಸಬೇಕಾಗಿದೆ’ ಎಂದು ಜಿ.ಸತೀಶ್ ರೆಡ್ಡಿ ಅಭಿಪ್ರಾಯಪಟ್ಟರು.
ಹಿಂದೆ ಶೇ 80ರಷ್ಟು ಪ್ರತಿಭಾವಂತರು ಉದ್ಯೋಗ, ಅವಕಾಶಗಳನ್ನು ಅರಸಿ ವಿದೇಶಕ್ಕೆ ಹೋಗುತ್ತಿದ್ದರು. ಈಗ ವಿವಿಧ ಕ್ಷೇತ್ರಗಳ ಶೇ 70ಕ್ಕೂ ಹೆಚ್ಚು ಪ್ರತಿಭಾವಂತರು ದೇಶದಲ್ಲೇ ನೆಲೆ ಕಂಡುಕೊಳ್ಳುವ ಪೂರಕ ವಾತಾವರಣ ದೇಶದಲ್ಲಿ ಸೃಷ್ಟಿಯಾಗಿದೆ. ದೇಶದಲ್ಲಿ ಅಭಿವೃದ್ಧಿಗೊಂಡಿರುವ ನವೀನ ತಂತ್ರಜ್ಞಾನಗಳು ಯುವಜನರನ್ನು ಸೆಳೆಯುತ್ತಿವೆ. ಕೃತಕ ಬುದ್ಧಿಮತ್ತೆ, ಸೈಬರ್ ತಂತ್ರಜ್ಞಾನ, ರಕ್ಷಣಾ ಕ್ಷೇತ್ರದಲ್ಲಿ ಸಾವಿರಾರು ಸ್ಟಾರ್ಟ್‌ಅಪ್‌ಗಳು ಪದವಿ ಪೂರೈಸಿ ಬರುವ ಎಂಜಿನಿಯರ್‌ಗಳಲ್ಲಿ ಉದ್ಯೋಗದ ಭರವಸೆ ಮೂಡಿಸಿವೆ ಎಂದು ಹೇಳಿದರು.
ಆನಂದ ರಾಮಕೃಷ್ಣನ್ ಮಾತನಾಡಿ, ‘ಆಹಾರ ಮತ್ತು ನೀರಿನ ಭದ್ರತೆ, ಆರೋಗ್ಯ ರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆಯಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಎದುರಾಗಿರುವ ಗಂಭೀರ ಸಮಸ್ಯೆಗಳ ಗಮನ ಹರಿಸಬೇಕಾಗಿದೆ. ನೀರಿನ ಭದ್ರತೆ ದೊಡ್ಡ ಸವಾಲಾಗಿದ್ದು, 54 ನಗರಗಳು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿವೆ. ಯುವ ಜನರು ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಯೋಚಿಸಬೇಕಾಗಿದೆ’ ಎಂದರು.
‘2022-23ನೇ ಸಾಲಿನಲ್ಲಿ 350ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ನೀಡಲು ಎನ್‌ಐಟಿಕೆ ಕ್ಯಾಂಪಸ್‌ಗೆ ಭೇಟಿ ನೀಡಿವೆ. ಶೇ 87ರಷ್ಟು ವಿದ್ಯಾರ್ಥಿಗಳು ₹16 ಲಕ್ಷಕ್ಕೂ ಅಧಿಕ ವಾರ್ಷಿಕ ಪ್ಯಾಕೇಜ್‌ನ ಉದ್ಯೋಗ ಪಡೆದಿದ್ದಾರೆ’ ಎಂದು ಪ್ರಾಸ್ತಾವಿಕ ಮಾತನಾಡಿದ ಎನ್‌ಐಟಿಕೆ ನಿರ್ದೇಶಕ ಬಿ. ರವಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.