ಪುತ್ತೂರು: ₹ 1.78 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈಶ್ವರಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ವೈದ್ಯಕೀಯ ಸೇವೆ ಸಿಗುವಂತಾಗಲು ಇಬ್ಬರು ಖಾಯಂ ವೈದ್ಯರ ನೇಮಕ ಮಾಡಬೇಕು ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಮೇನಾಲದ ಮುಧುರಾ ಸ್ಕೂಲ್ ನಿದೇಶಕ ಅಬ್ದುಲ್ ರಹಿಮಾನ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದರು.
ಆಸ್ಪತ್ರೆ ಕಟ್ಟಡ ಸುಸಜ್ಜಿತಗೊಂಡಿದ್ದರೂ ಖಾಯಂ ವೈದ್ಯರಿಲ್ಲ. ಈಗ ಇರುವ ವೈದ್ಯರು ವಾರದಲ್ಲಿ ಎರಡು ದಿನ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇರುವ ಸಿಬ್ಬಂದಿ ಸಂಜೆ 4.30ರ ವೇಳೆಗೆ ಆಸ್ಪತ್ರೆಗೆ ಬೀಗ ಹಾಕಿ ತೆರಳುತ್ತಿದ್ದಾರೆ. ಇದರಿಂದಾಗಿ ಈ ಭಾಗದ ಜನ ವೈದ್ಯಕೀಯ ಸೇವೆಯಿಂದ ವಂಚಿತರಾಗುವಂತಾಗಿದೆ. ವೈದ್ಯಕೀಯ ತಪಾಸಣೆಗೂ ದುಬಾರಿ ಹಣ ನೀಡಿ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರವು ಸುಮಾರು 12 ಸಾವಿರ ಜನಸಂಖ್ಯೆ ಹೊಂದಿರುವ ನೆಟ್ಟಣಿಗೆ ಮುಡ್ನೂರು, ಅಕ್ಕಪಕ್ಕದ ಪಡುವನ್ನೂರು, ಬಡಗನ್ನೂರು, ಮಾಡ್ನೂರು, ಕೊಳ್ತಿಗೆ ಗ್ರಾಮ ವ್ಯಾಪ್ತಿಯನ್ನೊಳಗೊಂಡಿದೆ. ಕೇರಳ ಗಡಿಪ್ರದೇಶದ ದೇಲಂಪಾಡಿ, ಅಡೂರು, ಅದೂರು ಗ್ರಾಮದ ಜನರೂ ಇಲ್ಲೇ ಆರೋಗ್ಯ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.