ಮಂಗಳೂರು: ಹೊರ ಜಿಲ್ಲೆಗಳ ಎಂಟು ಜನರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆಗೊಳಗಾಗಿರುವ 247 ಜನರಲ್ಲಿ ಕೋವಿಡ್–19 ಸೋಂಕು ಇರುವುದು ಮಂಗಳವಾರ ಲಭಿಸಿದ ಪರೀಕ್ಷಾ ವರದಿಗಳಿಂದ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 85,881 ಜನರ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕೋವಿಡ್–19 ಸೋಂಕು ತಗುಲಿರುವವರ ಒಟ್ಟು ಸಂಖ್ಯೆ 10,778ಕ್ಕೆ ಏರಿದೆ. ಈವರೆಗೆ ಒಟ್ಟು 75,103 ‘ನೆಗೆಟಿವ್’ ವರದಿಗಳು ಬಂದಿವೆ.
‘ಮಂಗಳೂರು ತಾಲ್ಲೂಕಿನ 171, ಬಂಟ್ವಾಳ ತಾಲ್ಲೂಕಿನ 48, ಬೆಳ್ತಂಗಡಿ ತಾಲ್ಲೂಕಿನ 10, ಪುತ್ತೂರು 6, ಸುಳ್ಯ 4 ಮತ್ತು ಹೊರ ಜಿಲ್ಲೆಗಳ 8 ಜನರಲ್ಲಿ ಕೋವಿಡ್ ಸೋಂಕು ಇರುವುದು ಮಂಗಳವಾರ ದೊರೆತ ವರದಿಗಳಿಂದ ಖಚಿತವಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 85, ಶೀತ ಜ್ವರದಿಂದ ಬಳಲುತ್ತಿದ್ದ (ಐಎಲ್‌ಐ) 72, ಉಸಿರಾಟದ ತೀವ್ರ ತೊಂದರೆ ಎದುರಿಸುತ್ತಿದ್ದ (ಎಸ್‌ಎಆರ್‌ಐ) 11 ಜನರು ಹಾಗೂ ಹೊರ ರಾಜ್ಯದಿಂದ ಬಂದಿರುವ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಉಳಿದ 78 ಜನರಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
98 ಮಂದಿ ಆಸ್ಪತ್ರೆಗೆ:ಮಂಗಳವಾರ ಪತ್ತೆಯಾದ ಪ್ರಕರಣಗಳ ಪೈಕಿ 62 ಪುರುಷರು ಮತ್ತು 36 ಮಹಿಳೆಯರು ಸೇರಿ 98 ಜನರಲ್ಲಿ ಕೋವಿಡ್ ಸೋಂಕಿನ ಗುಣ ಲಕ್ಷಣಗಳು ಪತ್ತೆಯಾಗಿವೆ. ಈ ಎಲ್ಲರನ್ನೂ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ಆರಂಭಿಸಲಾಗಿದೆ.
98 ಪುರುಷರು ಮತ್ತು 51 ಮಹಿಳೆಯರು ಸೇರಿ 149 ಜನರಲ್ಲಿ ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಈ ಎಲ್ಲರನ್ನೂ ಅವರ ಮನೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ.
218 ಜನರು ಗುಣಮುಖ:ಕೋವಿಡ್ ಸೋಂಕಿತರ ಪೈಕಿ 218 ಜನರ ಮಂಗಳವಾರದ ಪರೀಕ್ಷಾ ವರದಿಗಳು ‘ನೆಗೆಟಿವ್’ ಬಂದಿವೆ. ಈ ಎಲ್ಲರೂ ಗುಣಮುಖರಾಗಿರುವುದು ದೃಢಪಟ್ಟಿದೆ. ಆಸ್ಪತ್ರೆಗಳಲ್ಲಿದ್ದ 36 ಜನರು ಹಾಗೂ ಕೋವಿಡ್ ಆರೈಕೆ ಕೇಂದ್ರದಲ್ಲಿದ್ದ ಇಬ್ಬರನ್ನು ಬಿಡುಗಡೆ ಮಾಡಿ, ಮನೆಗಳಿಗೆ ಕಳುಹಿಸಲಾಗಿದೆ. ಮನೆಗಳಲ್ಲೇ ಪ್ರತ್ಯೇಕವಾಸದಲ್ಲಿದ್ದ 180 ಜನರ ಮೇಲಿನ ನಿಗಾವನ್ನು ಸ್ಥಗಿತಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 8,136 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 2,323 ಸಕ್ರಿಯ ಪ್ರಕರಣಗಳಿವೆ. ಸೋಂಕಿನ ಗುಣ ಲಕ್ಷಣಗಳಿರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿದ್ದು, ಉಳಿದವರನ್ನು ಕೋವಿಡ್ ಆರೈಕೆ ಕೇಂದ್ರ ಹಾಗೂ ಮನೆಗಳಲ್ಲೇ ಪ್ರತ್ಯೇಕವಾಸದಲ್ಲಿ ಇಡಲಾಗಿದೆ.
ಮೂವರ ಸಾವು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಲ್ಲಿ ಮೂವರು ಮೃತಪಟ್ಟಿರುವುದನ್ನು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಮಂಗಳವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಒಟ್ಟು ಸಂಖ್ಯೆ 319ಕ್ಕೇರಿದೆ.
‘ಮಂಗಳೂರು ಮತ್ತು ಬಂಟ್ವಾಳ ತಾಲ್ಲೂಕುಗಳ ತಲಾ ಒಬ್ಬರು ಹಾಗೂ ಹೊರ ಜಿಲ್ಲೆಯ ಒಬ್ಬರು ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಮೂವರಿಗೂ ಗಂಭೀರ ಸ್ವರೂಪದ ಅನ್ಯ ಕಾಯಿಲೆಗಳಿದ್ದವು’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.