ಮಂಗಳೂರು: ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನದಲ್ಲಿ 38 ಕಾಳಿಂಗ ಸರ್ಪದ ಮರಿಗಳು ಮೊಟ್ಟೆಯೊಡೆದು ಹೊರಬಂದಿವೆ.
ಸಂಪಾಜೆ ಪರಿಸರದಲ್ಲಿ ಸೆರೆ ಹಿಡಿದಿದ್ದ ಎಂಟು ವರ್ಷದ ನಾಗಮಣಿ ಮೊಟ್ಟೆ ಇಟ್ಟಿತ್ತು. ಮೊಟ್ಟೆಗಳಿಗೆ ಕೃತಕ ಕಾವು ನೀಡಿದ 76 ದಿನಗಳ ನಂತರ ಮರಿಗಳು ಹೊರ ಬಂದಿವೆ. ಈ ನಾಗಮಣಿ ಮತ್ತು ಪಿಲಿಕುಳದಲ್ಲಿ ಹುಟ್ಟಿದ್ದ 10 ವರ್ಷದ ನಾಗೇಂದ್ರನ ಸಂಯೋಗದಲ್ಲಿ ಈ ಮರಿಗಳು ಜನಿಸಿವೆ ಎಂದು ಜೈವಿಕ ಉದ್ಯಾನದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ಕೇಂದ್ರ ಮೃಗಾಲಯ ಪ್ರಾಧಿಕಾರವು 2007 ನವೆಂಬರ್‌ನಲ್ಲಿ ಪಿಲಿಕುಳವನ್ನು ಬಂಧಿತ ಸಂತಾನೋತ್ಪತ್ತಿಯ ಕೇಂದ್ರವೆಂದು ಗುರುತಿಸಿದೆ. ಆನಂತರ ಇಲ್ಲಿಗೆ ಕಾಳಿಂಗ ಸರ್ಪ ತಳಿ ಸಂವರ್ಧನಾ ಕೇಂದ್ರ ನಿರ್ಮಾಣಕ್ಕೆ ಅನುದಾನ ದೊರೆತಿದೆ. ಇಲ್ಲಿ 100ಕ್ಕೂ ಹೆಚ್ಚು ಕಾಳಿಂಗ ಸರ್ಪಗಳು ಇದ್ದವು. 2010ರಲ್ಲಿ 100ಕ್ಕೂ ಅಧಿಕ ಮೊಟ್ಟೆಗಳನ್ನು ಇಟ್ಟಿದ್ದವು. ಪ್ರಾಣಿ ವಿನಿಮಯದ ಭಾಗವಾಗಿ ಬೇರೆ ಮೃಗಾಲಯಗಳಿಗೆ ಇವನ್ನು ಕಳುಹಿಸಲಾಯಿತು. ಕೆಲವನ್ನು ಕಾಡಿಗೆ ಬಿಡಲಾಯಿತು. ಪ್ರಸ್ತುತ ಇರುವ 14 ಕಾಳಿಂಗ ಸರ್ಪಗಳಲ್ಲಿ ಐದು ಹೆಣ್ಣು, ಉಳಿದವು ಗಂಡು ಆಗಿವೆ.
ಹಿರಿಯ ಅಧಿಕಾರಿ ಜೆರಾಲ್ಡ್ ವಿಕ್ರಮ್ ಲೋಬೊ, ಪಶುವೈದ್ಯ ಡಾ.ಮಧುಸ್ಧನ್ ಕೆ, ಜೀವಶಾಸ್ತ್ರಜ್ಞೆ ಸುಮಾ ಎಂ.ಎಸ್. ಮತ್ತು ಉಸ್ತುವಾರಿ ದಿನೇಶ್ ಕುಮಾರ್ ಕೆಪಿ. ಒಳಗೊಂಡ ಅಧಿಕಾರಿಗಳ ತಂಡವು ಕೇಂದ್ರದಲ್ಲಿ ಹಾವುಗಳ ಸಂತಾನೋತ್ಪತ್ತಿಯನ್ನು ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.
‘ಮಳೆಯ ಕಾರಣ ಪಿಲಿಕುಳ ಜೈವಿಕ ಉದ್ಯಾನವನ್ನು ಸೋಮವಾರದವರೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಆಸ್ಟ್ರಿಚ್ ಇರುವ ಆವರಣದ ಹೊರಗೆ ಮರಮರವೊಂದು ಮುರಿದು ಬಿದ್ದಿದೆ. ಉದ್ಯಾನದ ಒಳಗೆ ಕೆಲವು ಮರಗಳು ಬಾಗಿದ ಕಾರಣ ಉರುಳುವ ಸಾಧ್ಯತೆಯಿದೆ. ಈ ಕಾರಣಕ್ಕೆ ಮಳೆ ಇಳಿಮುಖವಾಗುವ ತನಕ ಉದ್ಯಾನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ’ ಎಂದು ಜಯಪ್ರಕಾಶ್ ಭಂಡಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.