ಸುಳ್ಯ: ‘ಮಳೆ ಮಾಪನ ಎನ್ನುವುದು ಆಸಕ್ತಿದಾಯಕ ಹವ್ಯಾಸ. ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಮಳೆ ಅಳತೆ ದಾಖಲಿಸುತ್ತೇನೆ. 47 ವರ್ಷಗಳ ಪ್ರತಿದಿನದ ಮಳೆ, ಚಳಿ, ಹವಾಮಾನದ ದಾಖಲೆ ನನ್ನಲ್ಲಿದೆ’ ಎಂದು ‘ಮಳೆ ಲೆಕ್ಕದ ಮೇಷ್ಟ್ರು’ ತಾಲ್ಲೂಕಿನ ಬಾಳಿಲದ ಪಿಜಿಎಸ್‌ಎನ್ ಪ್ರಸಾದ್ ಮಾತು ಆರಂಭಿಸುತ್ತಾರೆ.
ಪ್ರಸಾದ್ ಅವರು 1976ರಿಂದ ಹೈಸ್ಕೂಲು ವಿದ್ಯಾರ್ಥಿಯಾಗಿರುವಾಗ ಮಳೆ ಪ್ರಮಾಣ ದಾಖಲಿಸಲು ಆರಂಭಿಸಿದ್ದಾರೆ. ಯಾವ ದಿನ ಎಷ್ಟು ಮಿ.ಮೀ ಮಳೆ ಬಿದ್ದಿದೆ, ಯಾವ ದಿನ, ಯಾವ ವರ್ಷ ಅಧಿಕ ಮಳೆ ಬಿದ್ದಿದೆ, ಸರಾಸರಿ ಎಷ್ಟು ಮಳೆ ಬಿದ್ದಿದೆ ಮುಂತಾದ ವಿಫುಲ ಮಾಹಿತಿಗಳು ಅವರ ‘ಮಳೆಯೊಂದಿಗೆ ಮಾತುಕತೆ’ ಪುಸ್ತಕದಲ್ಲಿ ಲಭ್ಯವಿದೆ. ಮಳೆ ಅಧ್ಯಯನ ಕುರಿತು ಸಂಶೋಧನೆ ಮಾಡುವ ಅನೇಕರು ಇವರ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.
‘ತಂದೆ ಪಿ.ಎಸ್. ಗೋವಿಂದಯ್ಯ ಅವರು ಆಯಾ ದಿನ ಬಂದ ಮಳೆಯನ್ನು ದಿನಚರಿಯಲ್ಲಿ ದಾಖಲಿಸುತ್ತಿದ್ದರು. ಆಕಾಶವಾಣಿಯಲ್ಲಿ ಆಗುಂಬೆ, ಮಂಗಳೂರು ಮುಂತಾದ ಕಡೆ ಇಷ್ಟು ಮಳೆ ಬಿದ್ದಿದೆ ಎನ್ನುವುದನ್ನು ಬಿತ್ತರಿಸುತ್ತಿದ್ದುದನ್ನು ಕೇಳುತ್ತಿದ್ದೆ. ಇದರಿಂದ ಕುತೂಹಲ ಹೊಂದಿ ಮಳೆಯ ಪ್ರಮಾಣ ನಿಖರವಾಗಿ ದಾಖಲಿಸಲು ಮಳೆಮಾಪನ ಖರೀದಿಸಿದೆ’ ಎಂದು ಪ್ರಸಾದ್ ತಿಳಿಸುತ್ತಾರೆ.
‘ಆಸಕ್ತಿದಾಯಕ ವಿಷಯವಾಗಿರುವ ಮಳೆ ಮಾಪನಕ್ಕೆ ಬೇಕಾಗಿರುವುದು ಬದ್ಧತೆ. ನಾವು ಹಲ್ಲುಜ್ಜಲು ಬಳಸುವಷ್ಟು ಸಮಯ ಸಹ ಇದಕ್ಕೆ ಹಿಡಿಯುವುದಿಲ್ಲ. ಇಂದು 8 ಗಂಟೆಗೆ ಮಳೆ ಪ್ರಮಾಣ ನೋಡಿದರೆ ನಾಳೆಯೂ ಅದೇ ಹೊತ್ತಿಗೆ ನೋಡಬೇಕು. ಇಲ್ಲದಿದ್ದರೆ ವ್ಯತ್ಯಾಸವಾಗಿ ತಪ್ಪಾಗುತ್ತದೆ’ ಎಂದು ವಿವರಿಸುತ್ತಾರೆ ಅವರು.
ಮಳೆ ಮಾಪಕವನ್ನು ಮನೆಯ ಅಂಗಳದಲ್ಲಿ ಕಟ್ಟೆ ನಿರ್ಮಿಸಿ ಅದರ ಮೇಲೆ ಇಟ್ಟಿದ್ದಾರೆ. ಅದು ಮೆಡಿಕಲ್ ಲ್ಯಾಬೋರೇಟರಿಗಳಲ್ಲಿ ಸಿಗುವ ಒಂದೂವರೆ ಸೆಂ.ಮೀ. ವ್ಯಾಸ, 28 ಸೆಂ.ಮೀ ಎತ್ತರವಿರುವ ಪಾರದರ್ಶಕ ಗಾಜಿನ ಸರಳ ಉಪಕರಣ. ಉಪಕರಣದ ತಳಭಾಗ ಸಮತಟ್ಟಾಗಿರಬೇಕು. ಜಾಡಿ ತಳಭಾಗದಿಂದ ಮೇಲ್ಭಾಗದವರೆಗೆ ಏಕರೀತಿಯ ವ್ಯಾಸ ಹೊಂದಿರುವುದು ಅಗತ್ಯ. ತೆರೆದ ಅಂಗಳ ಅಥವಾ ಬಯಲಿನಲ್ಲಿ ಮಾಪಕ ಇಡಬೇಕು. ಮನೆ ಛಾವಣಿ, ಗಿಡ, ಮರಗಳು ಅಡ್ಡ ಇರಬಾರದು. ಅಡೆತಡೆ ಇಲ್ಲದೆ ಮಳೆ ನೀರು ನೇರವಾಗಿ ಮಾಪಕದ ಒಳಗೆ ಬೀಳುವಂತಿರಬೇಕು. ಇದರಿಂದ ಮಾತ್ರ ನಿಖರ ಮಾಪನ ಮಾಡಲು ಸಾಧ್ಯ.
ವಾರ್ಷಿಕ ಸರಾಸರಿ 435 ಸೆಂ.ಮೀ. ಮಳೆ ಬೀಳುತ್ತಿದೆ. 1999ರಲ್ಲಿ ಅತಿ ಹೆಚ್ಚು ಅಂದರೆ 5461 ಮಿ.ಮೀ. ಹಾಗೂ 1987ರಲ್ಲಿ ಅತಿ ಕಡಿಮೆ ಅಂದರೆ 2732 ಮಿ.ಮೀ. ಮಳೆ ಬಿದ್ದಿದೆ. 2013ರಲ್ಲಿ 70 ದಿನಗಳ ಕಾಲ ನಿರಂತರ ಮಳೆ ಸುರಿದಿದೆ. ಒಂದು ದಿನದಲ್ಲಿ ಅತಿ ಹೆಚ್ಚು ಅಂದರೆ 1982ರ ಆಗಸ್ಟ್ 1ರಂದು 292 ಮಿ.ಮೀ ಮಳೆ ಆಗಿದೆ. 1999ರಲ್ಲಿ ಮೇ 20ರಂದೇ ಮುಂಗಾರು ಆರಂಭವಾಗಿದ್ದರೆ, 1983ರಲ್ಲಿ ತಡವಾಗಿ ಅಂದರೆ ಜೂನ್ 16ರಂದು ಮುಂಗಾರು ಆರಂಭವಾಗಿದೆ. 47 ವರ್ಷಗಳಲ್ಲಿ ಮಾರ್ಚ್ 3, ಫೆಬ್ರವರಿ 3 ದಿನಗಳಂದು ಮಳೆಯೇ ಆಗಿಲ್ಲ. ಜೂನ್, ಜುಲೈ ತಿಂಗಳಲ್ಲಿ ಅಷ್ಟೂ ದಿವಸವೂ ಮಳೆ ಸುರಿದಿದೆ ಎನ್ನುವ ಆಸಕ್ತಿಕರ ಸಂಗತಿಗಳನ್ನು ಪ್ರಸಾದ್ ಅವರ ಮಳೆ ದಿನಚರಿಯಿಂದ ಕಂಡುಕೊಳ್ಳಬಹುದು.
ಕೃಷಿಗೆ ಮಳೆ ಪ್ರಮಾಣ ಅಳತೆಯಿಂದ ಅನುಕೂಲವಾಗುತ್ತದೆ. ಕಳೆದ ವರ್ಷ ಎಷ್ಟು ಮಳೆ ಬಂದಿದೆ, ಅದರ ಹಿಂದಿನ ವರ್ಷ ಎಷ್ಟು ಮಳೆಯಾಗಿದೆ ಎನ್ನುವ ಆಧಾರದಲ್ಲಿ ಯಾವ ಸಮಯದಲ್ಲಿ ಮಳೆ ಕಡಿಮೆ ಇರುತ್ತದೆ ಎನ್ನುವುದನ್ನು ಗಮನಿಸಬಹುದು. ಆ ಮೂಲಕ ಕೃಷಿಗೆ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಜಿಲ್ಲೆಯ ಪ್ರಧಾನ ಬೆಳೆ ಅಡಿಕೆ. ಅಡಿಕೆಗೆ ಬಾಧಿಸುವ ಕೊಳೆರೋಗಕ್ಕೆ ಉತ್ತಮ ಬಿಸಿಲು ಇರುವ ದಿನ ಔಷಧಿ ಸಿಂಪಡಣೆ ಮಾಡಬೇಕಾಗುತ್ತದೆ. ಯಾವ ದಿನ ಬಿಸಿಲು ಇರುತ್ತದೆ ಎನ್ನುವುದನ್ನು ಕಂಡುಕೊಳ್ಳಬಹುದು ಎಂದು ಅವರು ತಿಳಿಸುತ್ತಾರೆ.
ಸ್ವಾಭಾವಿಕವಾಗಿ ಮೂರು ವರ್ಷಗಳಲ್ಲಿ ಸರಾಸರಿ ಮಳೆ ಜಾಸ್ತಿಯಿದ್ದರೆ ನಂತರದ ಎರಡು ವರ್ಷ ಮಳೆ ಕಡಿಮೆ ಇರುತ್ತದೆ ಎನ್ನುವುದನ್ನು ಅವರು ಕಂಡುಕೊಂಡಿದ್ದಾರೆ. ಕಳೆದ 5 ವರ್ಷ ಮಳೆ ಜಾಸ್ತಿ ಇತ್ತು. ಆದರೆ ಈ ವರ್ಷ ಅದಕ್ಕಿಂತ ಶೇ 10ರಷ್ಟು ಮಳೆ ಕಡಿಮೆ ಇರಬಹುದು ಎಂಬುದು ಪ್ರಸಾದ್ ಅವರ ಲೆಕ್ಕಾಚಾರ. ಹವಾಮಾನ ಇಲಾಖೆಯವರೂ ಈ ಮಾಹಿತಿ ನೀಡುತ್ತಾರೆ.
ವಾರ್ಷಿಕವಾಗಿ ಈ ಭಾಗದಲ್ಲಿ ಸರಾಸರಿ 4 ಸಾವಿರಕ್ಕಿಂತ ಅಧಿಕ ಮಿ.ಮೀ ಮಳೆಯಾಗುತ್ತದೆ. ಆದರೆ ಈ ಬಾರಿ ಅದರ ಶೇ 40ದಷ್ಟು ಮಾತ್ರ ಮಳೆಯಾಗಿದೆ. ಇಂತಹ ಅನೇಕ ಮಾಹಿತಿಗಳನ್ನು ನಾವು ಮಳೆ ಅಳತೆಯಿಂದ ತಿಳಿದುಕೊಳ್ಳಬಹುದು ಎಂದು ಪ್ರಸಾದ್ ಹೇಳುತ್ತಾರೆ.
‘ನಾನು ಬೆಳೆಸಿಕೊಂಡು ಬಂದ ಹವ್ಯಾಸ ಇಂದು ಹಲವು ಜನರಿಗೆ ಪರಿಚಯವಾಗಿದೆ. ಕೆಲವರು ಆಸಕ್ತಿ ಬೆಳೆಸಿಕೊಂಡು ಮಳೆ ಮಾಪನ ಮಾಡುತ್ತಿರುವುದು ಸಂತಸ ತರುತ್ತದೆ. ಶಾಲಾ ವಿದ್ಯಾರ್ಥಿಗಳಿಗೆ ಮಳೆ ಮಾಪನದ ಆಸಕ್ತಿ ಮೂಡಿಸುತ್ತಿದ್ದೇವೆ. ಒಬ್ಬರಿಂದ ಒಬ್ಬರಿಗೆ ಇದು ನಿರಂತವಾಗಿ ಮುಂದುವರೆದುಕೊಂಡು ಹೋಗಬೇಕು. ಅದರಿಂದ ಅದೆಷ್ಟೋ ಮಾಹಿತಿ ದಾಖಲೀಕರಣಗೊಳ್ಳುತ್ತದೆ. ನಾನು ಈಗ ದಾಖಲಿಸಿರುವ ಮಾಹಿತಿಗಳಿಂದ ಸಂಶೋಧನೆ ನಡೆಸಬಹುದು. ಪಿಎಚ್‌ಡಿ ಮಾಡಲು ಉತ್ತಮ ವಿಷಯ’ ಎಂದು ಅವರು ಹೇಳುತ್ತಾರೆ.
‘ಚಿಕ್ಕಮಗಳೂರು, ಮಡಿಕೇರಿ ಇನ್ನಿತರ ಜಿಲ್ಲೆಗಳಲ್ಲಿ ಬ್ರಿಟೀಷರ ಕಾಲದಿಂದಲೂ ರೈತರು ನಿರಂತರವಾಗಿ ಮಳೆ ಅಳತೆ ದಾಖಲೀಕರಣ ಮಾಡುತ್ತಿದ್ದಾರೆ. ಆದರೆ ನಮ್ಮ ಜಿಲ್ಲೆಯಲ್ಲಿ ನಾನೇ ಆ ಸಾಧನೆ ಮಾಡಿದ್ದೇನೆ ಎಂದು ಖುಷಿ, ಹೆಮ್ಮೆ ನೀಡಿದೆ’ ಎಂದು ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.