ADVERTISEMENT

ಮಾದಕ ವ್ಯಸನ ತಡೆಗೆ 528 ಕೋಶ ಸಕ್ರಿಯ

‘ಮಾದಕ‌ ವ್ಯಸನಮುಕ್ತ ಭಾರತ’ ಅಭಿಯಾನ, ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದ ಡಿ.ಸಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:30 IST
Last Updated 26 ಜೂನ್ 2024, 5:30 IST
ಮಾದಕ ಪದಾರ್ಥ ಸೇವನೆ ಚಟಕ್ಕೆ ಬಲಿಯಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಸ್ವಿಕರಿಸಿದರು–ಪ್ರಜಾವಾಣಿ ಚಿತ್ರ 
ಮಾದಕ ಪದಾರ್ಥ ಸೇವನೆ ಚಟಕ್ಕೆ ಬಲಿಯಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಸ್ವಿಕರಿಸಿದರು–ಪ್ರಜಾವಾಣಿ ಚಿತ್ರ    

ಮಂಗಳೂರು: ‘ಮಾದಕ ಪದಾರ್ಥ ಸೇವನೆ ಒಂದು ಕಾಯಿಲೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವ್ಯಸನದ ನಿಯಂತ್ರಣಕ್ಕೆ ಗೌಪ್ಯ ವ್ಯವಸ್ಥೆ ರೂಪಿಸಿದ್ದೇವೆ. ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ 528 ಕಡೆ ಮಾದಕ ಪದಾರ್ಥ ನಿಗ್ರಹ ಕೋಶಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಹೇಳಿದರು.

‘ಮಾದಕ‌ ವ್ಯಸನಮುಕ್ತ ಭಾರತ’ ಅಭಿಯಾನದ ಅಂಗವಾಗಿ ದ.ಕ ಜಿಲ್ಲಾಡಳಿತ, ಭಾರತೀಯ ಕರಾವಳಿ ರಕ್ಷಣಾ ಪಡೆ, ನಗರ ಪೊಲೀಸ್ ಕಮಿಷನರೇಟ್, ಮಂಗಳೂರು ಕಸ್ಟಮ್ಸ್‌ ಕಮಿಷನರೇಟ್‌ ಆಶ್ರಯದಲ್ಲಿ ಇಲ್ಲಿನ ಸೇಂಟ್‌ ಅಲೋಶಿಯಸ್‌ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಲೇಜಿನ ಪ್ರಾಂಶುಪಾಲರೇ ಈ ಕೋಶದ ಮುಖ್ಯಸ್ಥರು. ಮಾದಕ ದ್ರವ್ಯ ಸೇವನೆಯ ವಿಷವರ್ತುಲಕ್ಕೆ ಸಿಲುಕಿರುವ ವಿದ್ಯಾರ್ಥಿಗಳು ಅದರಿಂದ ಹೊರಬರಲು ಈ ಕೋಶದಲ್ಲಿರುವ ಆಪ್ತಸಮಾಲೋಚಕರ ನೆರವು ಪಡೆಯಬಹುದು’ ಎಂದರು.

ADVERTISEMENT

ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌, ‘18 ವರ್ಷಕ್ಕೆ ಮುನ್ನವೇ ಮಾದಕ ದ್ರವ್ಯ ಸೇವನೆ ಚಟಕ್ಕೆ ಬಲಿಯಾಗುವವರು ಜಾಸ್ತಿ. ಮಾನಸಿಕ ಒತ್ತಡ, ಗೆಳೆಯರ ಒತ್ತಾಯದಿಂದಾಗಿ ಆರಂಭವಾಗುವ ಈ ಚಟ ಬದುಕನ್ನೇ ಬಲಿ ಪಡೆಯುತ್ತದೆ. ವ್ಯಸನಿಗಳು ಸುಳ್ಳು ಹೇಳುವ, ಕಳ್ಳತನದ ಖಯಾಲಿ ಬೆಳೆಸಿಕೊಳ್ಳುತ್ತಾರೆ. ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸದಿದ್ದರೆ ಈ ವ್ಯಸನಿಗಳು ಅಪರಾಧ ಕೃತ್ಯಗಳಲ್ಲೂ ತೊಡಗುವ ಅಪಾಯವಿದೆ’ ಎಂದರು.

ಕಸ್ಟಮ್ಸ್‌ ಆಯುಕ್ತರಾದ ಪಿ. ವಿನಿತಾ ಶೇಖರ್‌, ‘ಜಗತ್ತಿನಲ್ಲಿ ಅಫೀಮನ್ನು ಅತಿ ಹೆಚ್ಚು ಉತ್ಪಾದಿಸುವ ಗೋಲ್ಡನ್‌ ಟ್ರಯಾಂಗಲ್‌ (ಥಾಯ್ಲೆಂಡ್‌, ಬರ್ಮಾ, ವಿಯೆಟ್ನಾಂ ಹಾಗೂ ಲಾವೋಸ್‌) ಹಾಗೂ ಗೋಲ್ದನ್ ಕ್ರೆಸೆಂಟ್‌  (ಪಾಕಿಸ್ತಾನ, ಅಫ್ಗಾನಿಸ್ತಾನ, ಇರಾನ್) ಪ್ರದೇಶಗಳ  ನಡುವೆ ನಮ್ಮ ದೇಶವಿದೆ.  ಮಾದಕ ಪದಾರ್ಥಗಳ ಕಳ್ಳಸಾಗಣೆಯ ನಡೆಸುವ ಮಾಫಿಯಾವು  ಭಯೋತ್ಪಾದನಾ ಚಟುವಟಿಕೆಗೂ ಹಣಕಾಸು ನೆರವು ಒದಗಿಸುತ್ತಿದೆ.  ಇದನ್ನು ಮಟ್ಟಹಾಕಲು ವಿವಿಧ ಕಾರ್ಯಾಚರಣೆ ಹಮ್ಮಿಕೊಳ್ಳುತ್ತಿದ್ದೇವೆ’ ಎಂದರು.

ಭಾರತೀಯ ಕರಾವಳಿ ರಕ್ಷಣಾ ಪಡೆಯ ಡಿಐಜಿ ಪಿ.ಕೆ.ಮಿಶ್ರಾ, ‘ಒಬ್ಬ ವ್ಯಕ್ತಿ ಈ ಚಟದಿಂದ ಹೊರಗೆ ಬರಲು ನೀವು ನೆರವಾದರೂ ಅದು ಸಮಾಜಕ್ಕೆ ಮಾಡುವ ದೊಡ್ಡ ಉಪಕಾರ’ ಎಂದರು.

ಎ.ಜೆ. ಇನ್ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನ ಮನೋರೋಗ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಕೆ. ಕಿರಣ್ ಕುಮಾರ್  ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. 

ಸೇಂಟ್‌ ಅಲೋಷಿಯಸ್‌ ಪಿ.ಯು. ಕಾಲೇಜಿನ ಪ್ರಾಂಶುಪಾಲ ಫಾ.ಕ್ಲಿಫರ್ಡ್‌ ಸಿಕ್ವೇರ ಹಾಗೂ  ದೇವಿಪ್ರಸಾದ್ ಭಾಗವಹಿಸಿದ್ದರು. ವೀಣಾ ಮಂಜುನಾಥ್‌ ಕಾರ್ಯಕ್ರಮ ನಿರೂಪಿಸಿದರು.

‘ಆರು ತಿಂಗಳಲ್ಲಿ 500ಕ್ಕೂ ಹೆಚ್ಚು ಎಫ್‌ಐಆರ್‌’

‘ಕಮಿಷನರೇಟ್‌ ವ್ಯಾಪ್ತಿಯಲ್ಲಿ ಎಡಿಪಿಎಸ್ ಕಾಯ್ದೆ ಅಡಿ ಆರು ತಿಂಗಳುಗಳಲ್ಲಿ 500 ಕ್ಕೂ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅವುಗಳಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳು ಮಾದಕ ಪದಾರ್ಥ ವ್ಯಸನಿಗಳ ವಿರುದ್ಧವೇ ದಾಖಲಾಗಿವೆ.  ಗೆಳೆಯರು ಈ ಚಟ ಹೊಂದಿದ್ದರೂ ಮಾಹಿತಿ ನೀಡುವ ಮೂಲಕ ಅವರ ಪುನರ್ವಸತಿಗೆ ನೆರವಾಗಿ’ ಎಂದು ಅನುಪಮ್ ಅರ್ಗವಾಲ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.