ಪುತ್ತೂರು: ‘ಅಶೋಕ್ ಲೇಲ್ಯಾಂಡ್ ಕಂಪನಿಯ ಬಡಾ ದೋಸ್ತ್ ವಾಹನವನ್ನು ಖರೀದಿಸಿದ ನಂತರ ನಿರಂತರವಾಗಿ ವಾಹನದಲ್ಲಿ ಸಮಸ್ಯೆ ಉಂಟಾಯಿತು’ ಎಂದು ಗ್ರಾಹಕರೊಬ್ಬರು ಸಲ್ಲಿಸಿರುವ ದೂರಿನ ಪ್ರಕರಣಕ್ಕೆ ಸಂಬಂಧಿಸಿ ದ.ಕ.ಜಿಲ್ಲಾ ಗ್ರಾಹಕ ನ್ಯಾಯಾಲಯವು, ‘ಈ ವಾಹನದ ತಯಾರಿಕೆಯಲ್ಲಿ ದೋಷ ಇದೆ’ ಎಂಬುದನ್ನು ಎತ್ತಿ ಹಿಡಿದಿದ್ದು, ವಾಹನದ ವೆಚ್ಚಕ್ಕೆ ಶೇ 6 ಬಡ್ಡಿ ಸೇರಿಸಿ ಹಿಂತಿರುಗಿಸುವಂತೆ ಆದೇಶಿಸಿದೆ.
ಗ್ರಾಹಕರಾದ ಪುತ್ತೂರಿನ ಪದ್ಮನಾಭ ಪ್ರಭು ಎಂಬುವರು 2021ರಲ್ಲಿ ಖರೀದಿಸಿದ ಬಡಾ ದೋಸ್ತ್ ವಾಹನದಲ್ಲಿ ನಿರಂತರವಾಗಿ ಸೆನ್ಸಾರ್ ಹಾಳಾಗುವಿಕೆ, ಲೊಪಿಕ್ಅಪ್ ಸಮಸ್ಯೆಗಳು ಎದುರಾಗುತ್ತಿತ್ತು. ಈ ಸಂಬಂಧ ಅವರು 2022ರಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಅಲ್ಲದೆ, ತಜ್ಞರಿಂದ ವಾಹನದ ಪರಿಶೀಲನೆಗೆ ಅರ್ಜಿ ಸಲ್ಲಿಸಲಾಗಿತ್ತು. ಈ ದೂರಿನಲ್ಲಿ ವಾಹನದ ತಯಾರಿಕಾ ಸಂಸ್ಥೆಯಾದ ಅಶೋಕ ಲೇಲ್ಯಾಂಡ್ ಹಾಗೂ ಡೀಲರ್‌ಗಳಾದ ಮಂಗಳೂರಿನ ಕಾಂಚನ ಆಟೊಮೊಟಿವ್ ಸಂಸ್ಥೆ ಮತ್ತು ಅದರ ಪುತ್ತೂರು ಶಾಖೆಗಳನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ದೂರುದಾರರ ಮತ್ತು ಪ್ರತಿವಾದಿಗಳ ಸಾಕ್ಷಿ ವಿಚಾರಣೆ ನಡೆದ ನಂತರ ವಾದಗಳನ್ನು ಆಲಿಸಿದ ಗ್ರಾಹಕರ ನ್ಯಾಯಾಲಯ ಈ ವಾಹನದಲ್ಲಿ ತಯಾರಿಕಾ ದೋಷ ಇದೆ ಎಂಬ ದೂರುದಾರರ ವಾದವನ್ನು ಎತ್ತಿ ಹಿಡಿದಿದೆ. ಪ್ರತಿವಾದಿಗಳಾದ ಅಶೋಕ್ ಲೇಲ್ಯಾಂಡ್ ಕಂಪನಿ ಮತ್ತು ಕಾಂಚನ ಆಟೊಮೊಟಿವ್ ಸಂಸ್ಥೆಗಳು ದೂರುದಾರರಿಗೆ ವಾಹನದ ವೆಚ್ಚ ₹7,50,321 ಮೊತ್ತವನ್ನು ಶೇ 6 ಬಡ್ಡಿದರದಲ್ಲಿ ಹಿಂದಿರುಗಿಸುವಂತೆ ಆದೇಶ ನೀಡಿದೆ.
ಈ ಬಡ್ಡಿಯನ್ನು ದೂರಿನ ದಿನಾಂಕದಿಂದ ಪರಿಗಣಿಸಲು ಹಾಗೂ ಪ್ರತಿವಾದಿಗಳು ದೂರುದಾರರಿಗೆ ಸೇವಾ ನ್ಯೂನ್ಯತೆಯಿಂದಾದ ಮಾನಸಿಕ ಹಿಂಸೆಗಾಗಿ ₹ 25ಸಾವಿರ ಹಾಗೂ ವ್ಯಾಜ್ಯ ವೆಚ್ಚವಾಗಿ ₹ 10 ಸಾವಿರ ನೀಡಲು ಆದೇಶದಲ್ಲಿ ತಿಳಿಸಲಾಗಿದೆ.
ದೂರುದಾರರ ಪರವಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಪುತ್ತೂರಿನ ಎಚ್.ಆ್ಯಂಡ್ ಡಿ. ಲೀಗಲ್‌ನ ವಕೀಲರಾದ ಹರೀಶ್ ಕುಮಾರ್ ಬಳಕ್ಕ, ದೀಪಕ್ ಬೋಳುವಾರು, ಭುವನೇಶ್ವರಿ ಎಂ., ರಕ್ಷಿತಾ ಬಂಗೇರ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.