ಮಂಗಳೂರು: ಕೈಯಲ್ಲೊಂದು ಚೀಲ, ಅದರೊಳಗೊಂದು ಕೋಲು. ತಿಂಡಿ ಪೊಟ್ಟಣ, ನೀರು. ಎರಡೂ ತೋಳುಗಳಲ್ಲಿ ಜೋಳಿಗೆ. ಅದರಲ್ಲಿ ಕಂಬಳಿ, ನೆಲಹಾಸು, ಹೊದಿಕೆ, ದಿಂಬು. ಕೈಯಲ್ಲಿ ದೊಡ್ಡ ತ್ರಿವರ್ಣ ಧ್ವಜ. ಇದೆಲ್ಲದರೊಂದಿಗೆ ಅಭಿರಾಮ್ ಸತ್ಪತಿ ಪ್ರಯಾಣ ಮುಂದುವರಿಯುತ್ತಲೇ ಇದೆ.
ಕಳೆದ ವರ್ಷ ಮೇಯಲ್ಲಿ ಒಡಿಶಾದಿಂದ ಆರಂಭಗೊಂಡ ಅವರ ಯಾತ್ರೆ ಈಗ 10 ಸಾವಿರ ಕಿಲೊಮೀಟರ್ ದಾಟಿದೆ. ಇನ್ನೂ 3 ಸಾವಿರ ಕಿಲೊಮೀಟರ್ ಸಾಗಿದರೆ ಒಡಿಶಾದಲ್ಲೇ ಪಯಣ ಮುಕ್ತಾಯಗೊಳ್ಳಲಿದೆ. ದೈಹಿಕ ವ್ಯಾಯಾಮದ ಮಹತ್ವ, ತಂಬಾಕು ಉತ್ಪನ್ನಗಳ ಕೆಡುಕು ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುತ್ತ ಸಾಗುತ್ತಿರುವ 67 ವರ್ಷ ವಯಸ್ಸಿನ ಅಭಿರಾಮ್ ಬುಧವಾರ ಮಂಗಳೂರಿಗೆ ತಲುಪಿದ್ದಾರೆ.
ಒಡಿಶಾದ ದರ್ಲಗ ಗ್ರಾಮದಿಂದ ಕಳೆದ ವರ್ಷ ಮೇ 25ರಂದು ಹೊರಟ ಅಭಿರಾಮ್ ಅವರು ಭೂತಾನ್, ನೇಪಾಳಕ್ಕೆ ಸಾಗಿ ಚೀನಾ ಗಡಿಯ ಸಮೀಪದಿಂದ ಭಾರತಕ್ಕೆ ವಾಪಸಾಗಿ ವಾಘಾ ಗಡಿ, ಜಮ್ಮು ಮತ್ತು ಕಾಶ್ಮೀರ ಸುತ್ತಾಡಿ ಮಧ್ಯ ಭಾರತ, ದಕ್ಷಿಣದತ್ತ ಬಂದಿದ್ದಾರೆ. ಅಕ್ಟೋಬರ್ 10ರಂದು ಗೋವಾದಿಂದ ಕರ್ನಾಟಕಕ್ಕೆ ಬಂದಿರುವ ಅವರು 2025ರ ಮಾರ್ಚ್‌ನಲ್ಲಿ ಪಯಣಕ್ಕೆ ಅಂತ್ಯ ಹಾಡಲಿದ್ದಾರೆ.
‘ದೇವರು ಕರುಣಿಸಿರುವ ದೇಹವನ್ನು ಚಟಗಳಿಗಾಗಿ ಬಳಸಿಕೊಳ್ಳಬಾರು. ಒಳ್ಳೆಯ ಕೆಲಸಗಳನ್ನು ಮಾಡಿ ದೇಶಕ್ಕೆ ಒಳಿತು ಮಾಡಬೇಕು. ಕುಡಿತ, ಧೂಮಪಾನ, ಅನಾರೋಗ್ಯಕರ ಜೀವನ ಶೈಲಿಯನ್ನು ಬಿಡಬೇಕು, ನಿತ್ಯವೂ ನಡೆಯುವುದನ್ನು ರೂಢಿಸಿಕೊಳ್ಳಬೇಕು ಎಂಬುದೇ ನನ್ನ ನಡಿಗೆ ಆಶಯ. ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿದಿನ 20 ಕಿಮೀ ನಡೆಯುತ್ತೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
12ನೇ ತರಗತಿ ವರೆಗೆ ಕಲಿತಿರುವ ಅಭಿರಾಮ್ ಇಂಧನ ಇಲಾಖೆಯ ಉದ್ಯೋಗಿಯಾಗಿದ್ದರು. ಪುತ್ರ ಎಂಜಿನಿಯರ್ ಆಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಮದುವೆಯಾಗಿದೆ. ನಿವೃತ್ತಿಯಾದ ನಂತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಅಭಿರಾಮ್ ‘ನನ್ನ ನಡಿಗೆಯನ್ನು ಕಂಡು ಕೆಲವರು ಧೂಮಪಾನ ಸೇವನೆ ಬಿಟ್ಟಿದ್ದಾರೆ. ಅದನ್ನು ಮುಂದುವರಿಸುತ್ತಾರೆಯೋ ಇಲ್ಲವೋ ಗೊತ್ತಿಲ್ಲ. ನನ್ನಿಂದಾದ ಕಾರ್ಯ ಮಾಡುತ್ತಿದ್ದೇನೆ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.