ADVERTISEMENT

ಮಂಗಳೂರು | ಅಕಾಡೆಮಿಗಳು ಅನಾಥ; ಯಾವಾಗ ಜೀವಸತ್ವ?

ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗೆ ಧಕ್ಕೆ; ಅಭಿವೃದ್ಧಿ ಕಾಮಗಾರಿಗಳು ಕುಂಠಿತ: ಶೀಘ್ರ ನೇಮಕಕ್ಕೆ ಒತ್ತಾಯ

ವಿಕ್ರಂ ಕಾಂತಿಕೆರೆ
Published 22 ಜನವರಿ 2024, 8:09 IST
Last Updated 22 ಜನವರಿ 2024, 8:09 IST
ತುಳು ಅಕಾಡೆಮಿ ಕಟ್ಟಡ -ಪ್ರಜಾವಾಣಿ ಚಿತ್ರ
ತುಳು ಅಕಾಡೆಮಿ ಕಟ್ಟಡ -ಪ್ರಜಾವಾಣಿ ಚಿತ್ರ   

ಮಂಗಳೂರು: ಸಿದ್ಧರಾಮಯ್ಯ ನೇತೃತ್ವದ ಹೊಸ ಸರ್ಕಾರ ಆಡಳಿತಕ್ಕೆ ಬಂದು ವರ್ಷವಾಗುತ್ತ ಬಂದರೂ ರಾಜ್ಯದ ನಿಗಮ–ಮಂಡಳಿ–ಅಕಾಡೆಮಿಗಳು ನಾಥನಿಲ್ಲದ ಸಂಸ್ಥೆಗಳಾಗಿಯೇ ಉಳಿದುಕೊಂಡಿವೆ. ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಆಗದೇ ಇರುವುದರಿಂದ ಕಲಾ ಸಾಂಸ್ಕೃತಿಕ ಮತ್ತು ಸಾಹಿತ್ಯ ಚಟುವಟಿಕೆಗಳು ನಿಂತುಹೋಗಿವೆ. ಪುನಃಶ್ಚೇತನಕ್ಕಾಗಿ ಅವು ಕಾಯುತ್ತಿವೆ.

ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಅಕಾಡೆಮಿಗಳ ಪೈಕಿ ತುಳು, ಕೊಂಕಣಿ ಮತ್ತು ಬ್ಯಾರಿ ಅಕಾಡೆಮಿಗಳ ಕಚೇರಿ ಮಂಗಳೂರಿನಲ್ಲಿ ಇದೆ. ಕರಾವಳಿಯ ಅಸ್ಮಿತೆಗೆ ಸಂಬಂಧಿಸಿದ ಇನ್ನೆರಡು ಅಕಾಡೆಮಿಗಳು ಯಕ್ಷಗಾನ ಮತ್ತು ಅರೆಭಾಷೆಗೆ ಸಂಬಂಧಿಸಿದವು. ಅವುಗಳ ಕಚೇರಿಗಳು ಕ್ರಮವಾಗಿ ಬೆಂಗಳೂರು ಮತ್ತು ಮಡಿಕೇರಿಯಲ್ಲಿ ಇವೆ. ಸ್ಥಳೀಯ ಅಕಾಡೆಮಿಗಳಲ್ಲಿ ಸರ್ಕಾರದ ಪರವಾಗಿ ಕಾರ್ಯಕ್ರಮಗಳು ನಡೆಯದೇ ಇರುವುದರಿಂದ ಈ ಭಾಗದ ಸಾಂಸ್ಕೃತಿಕ ಸೊಗಡು ಮುದುಡಿದೆ. ಅದು ಮತ್ತೆ ನಳನಳಿಸುವಂತೆ ಮಾಡಿ, ಭಾಷೆಯ ಸುಮದ ಘಮಲು ಏಳುವಂತೆ ಮಾಡಬೇಕು ಎಂಬುದು ಈ ಮೂರೂ ಭಾಷೆಗಳ ಸಾಂಸ್ಕೃತಿಕ ಲೋಕದಲ್ಲಿ ಮೂಡಿರುವ ಆಶಯ. 

ಅಕಾಡೆಮಿಗಳ ಅಧ್ಯಕ್ಷರ ಅವಧಿ 2022ರ ಸೆಪ್ಟೆಂಬರ್‌ ಅಂತ್ಯದಲ್ಲಿ ಮುಗಿದಿತ್ತು. ಅಂದಿನ ಬಿಜೆಪಿ ಸರ್ಕಾರದ ಅವಧಿ ಮುಗಿದು ವಿಧಾನಸಭೆ ಚುನಾವಣೆಗೆ ಆಗ ಅರು ತಿಂಗಳು ಉಳಿದಿದ್ದವು. ಆದ್ದರಿಂದ ತಾತ್ಕಾಲಿಕ ಸಮಿತಿ ರಚಿಸುವ ‘ಸಂಪ್ರದಾಯ’ವನ್ನು ಸಹ ಅಂದಿನ ಸರ್ಕಾರ ಕೈಬಿಟ್ಟಿತ್ತು. ಅಕಾಡೆಮಿಗಳ ಮೂಲಕ ನಡೆಯಬೇಕಾಗಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಆಗಿನಿಂದ ಸ್ಥಗಿತಗೊಂಡಿದ್ದವು. ಕರಾವಳಿ ಭಾಗದಲ್ಲಿ ತುಳುವಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಅಕಾಡೆಮಿಯ ಆಶ್ರಯ ಇಲ್ಲದೇ ಅಲ್ಲಲ್ಲಿ ನಡೆಯುತ್ತಿವೆ. ಆದಕ್ಕೆ ಹೋಲಿಸಿದರೆ ಬ್ಯಾರಿ ಮತ್ತು ಕೊಂಕಣಿ ಭಾಷಾ ಕಾರ್ಯಕ್ರಮಗಳು ಸ್ವಲ್ಪ ಕಡಿಮೆ.

ADVERTISEMENT

ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅಕಾಡೆಮಿಗಳಲ್ಲಿ ಆಸೆ ಚಿಗುರೊಡೆದಿತ್ತು. ಅಧ್ಯಕ್ಷ–ಸದಸ್ಯರ ಸ್ಥಾನಕ್ಕಾಗಿ ಲಾಬಿಯೂ ಆರಂಭಗೊಂಡಿತ್ತು. ನಂತರ ಎಲ್ಲವೂ ಸ್ತಬ್ಧವಾಗಿತ್ತು. ಆದರೆ ಸರ್ಕಾರಕ್ಕೆ 100 ದಿನ ತುಂಬಿದ ಸಂದರ್ಭದಲ್ಲಿ ಆಯ್ಕೆ ಪ್ರಕ್ರಿಯೆ ಆರಂಭವಾಗುವ ಲಕ್ಷಣಗಳು ಗೋಚರಿಸಿದ್ದವು. ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ಅನೇಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಭೇಟಿ ಮಾಡಿ ಬಂದಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂಲಕ ‘ಅರ್ಹತಾ ಪಟ್ಟಿ’ಯೊಂದು ಸರ್ಕಾರಕ್ಕೆ ತಲುಪಿತ್ತು. ಕಳೆದ ವರ್ಷದ ಸೆಪ್ಟೆಂಬರ್ 4ರಂದು ಮೈಸೂರಿನಲ್ಲಿ ವಿಭಾಗ ಮಟ್ಟದ ಸಭೆ ನಡೆದಿದ್ದು ಅದರಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಅಂತಿಮ ತೀರ್ಮಾನ ಆಗುವ ಸಾಧ್ಯತೆ ಇದೆ ಎಂದು ನಂಬಲಾಗಿತ್ತು. ಆದರೆ ಆ ಸಭೆಯ ನಂತರ ಯಾವ ಬೆಳಗವಣಿಗೆಯೂ ಆಗಲಿಲ್ಲ.

ಖರ್ಚು–ವೆಚ್ಚದ್ದೇ ಸಮಸ್ಯೆ:

ಸದ್ಯ ಎಲ್ಲ ಅಕಾಡೆಮಿಗಳ ಅಧ್ಯಕ್ಷರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೇ ಮುಂದುವರಿದಿದ್ದಾರೆ. ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕರು ಆಡಳಿತಾಧಿಕಾರಿಯಾಗಿದ್ದಾರೆ. ಆದರೂ ಕಾರ್ಯಕ್ರಮಗಳನ್ನು ಸಂಘಟಿಸುವುದು ಕಷ್ಟ ಎಂಬುದು ಅಕಾಡೆಮಿಗಳಿಗೆ ಸಂಬಂಧಿಸಿದವರ ಮಾತು. ಕಾರ್ಯಕ್ರಮಗಳನ್ನು ಮಾಡಲು ಮತ್ತು ಪುಸ್ತಕ ಪ್ರಕಾಶನಕ್ಕೆ ಬೇಕಾದ ಖರ್ಚು–ವೆಚ್ಚಕ್ಕೆ ಅಧ್ಯಕ್ಷರು ಮತ್ತು ಸಮಿತಿಯವರ ಅನುಮತಿ ಬೇಕಾಗುತ್ತದೆ. ಸಮಿತಿಯೇ ಇಲ್ಲದಿದ್ದರೆ ಅನುಮತಿ ಎಲ್ಲಿಂದ ಸಿಗಬೇಕು ಎಂದು ಕೇಳುತ್ತಾರೆ ಅಕಾಡೆಮಿಗಳ ಒಡನಾಟ ಇರುವವರು.

ಹಣಕಾಸಿನ ಸಮಸ್ಯೆಯಿಂದಾಗಿ ತುಳು ಭವನದ ಅಭಿವೃದ್ಧಿ ಮತ್ತು ಕೊಂಕಣಿ ಅಕಾಡೆಮಿಯ ಕಟ್ಟಡ ನಿರ್ಮಾಣ ಕಾರ್ಯ ಕುಂಠಿತಗೊಂಡಿದೆ ಎಂಬ ದೂರು ಕೇಳಿ ಬಂದಿದೆ. ‘ತುಳು ಭವನವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಆದರೆ ಅದಕ್ಕೆ ಸಂಬಂಧಿಸಿದ ಬಯಲು ರಂಗಮಂದಿರ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಈಗ ಉದಾಸೀನ ಮೂಡಿದೆ’ ಎಂದು ತುಳು ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಹೇಳಿದರು.

‘ಉರ್ವ ಸ್ಟೋರ್ ಬಳಿ ಹೊಸ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕೆ ₹5 ಕೋಟಿ ಮೊತ್ತವನ್ನು ಅಂದಾಜು ಮಾಡಲಾಗಿತ್ತು. ನಂತರ ಅದು ₹3 ಕೋಟಿಗೆ ಇಳಿಯಿತು. ಆ ಮೊತ್ತದಲ್ಲಿ ಕಟ್ಟಡ ನಿರ್ಮಾಣ ಪೂರ್ತಿ ಮಾಡುವುದು ಕಷ್ಟ. ಹೊಸ ಸಮಿತಿ ಅಸ್ತಿತ್ವಕ್ಕೆ ಬಂದರೆ ಇನ್ನೊಂದು ಕೋಟಿಗೆ ಬೇಡಿಕೆ ಇರಿಸಲು ಅನುಕೂಲ ಆಗುತ್ತಿತ್ತು ಎಂದು ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ಜಗದೀಶ ಪೈ ಅಭಿಪ್ರಾಯಪಟ್ಟರು.

‘ಅಕಾಡೆಮಿ ಸಕ್ರಿಯವಾಗಿದ್ದಾಗ ಸಾಕಷ್ಟು ಅನುದಾನ ಸಿಗುತ್ತಿತ್ತು. ಆದ್ದರಿಂದ ಯಕ್ಷಗಾನ, ನಾಟಕ, ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದವು. ನನ್ನ ಅವಧಿಯಲ್ಲಿ 21 ಪುಸ್ತಕ ಬಿಡುಗಡೆ ಆಗಿವೆ. ವಿಶೇಷ ಯೋಜನೆಯಡಿ ಸುಮಾರು 30 ಸಾವಿರ ಮಂದಿಗೆ ತುಳು ಲಿಪಿ ಕಲಿಸಲಾಗಿತ್ತು. ಈಗ ಅಕಾಡೆಮಿ ನಗಣ್ಯ ಆಗಿದೆ. ತಾತ್ಕಾಲಿಕ ಸಮಿತಿಯನ್ನಾದರೂ ನೇಮಕ ಮಾಡಿದ್ದರೆ ಕಾರ್ಯಕ್ರಮಗಳಿಗೆ ನಿರಂತರತೆ ಇರುತ್ತಿತ್ತು’ ಎಂದು ದಯಾನಂದ ಕತ್ತಲಸಾರ್ ಹೇಳಿದರು.

‘ತುಳು ಅಕಾಡೆಮಿ ಇತರ ಅಕಾಡೆಮಿಗಳಿಗಿಂತ ಭಿನ್ನ. ಇದಕ್ಕೆ ವಿಶಾಲ ತುಳುನಾಡಿನ ಅಸ್ಮಿತೆಯ ಜೊತೆ ನೇರ ಸಂಬಂಧವಿದೆ. ತುಳು ರಂಗಭೂಮಿ, ಭಾಷಾ ಶಿಕ್ಷಣದ ಬಗ್ಗೆಯೂ ಈ ಅಕಾಡೆಮಿಗೆ ಕಾಳಜಿ ಇದೆ. ಆದ್ದರಿಂದ ಇದರ ಚಟುವಟಿಗೆ ನಿಲ್ಲಬಾರದು. ಕನಿಷ್ಠಪಕ್ಷ ದತ್ತಿನಿಧಿಯಲ್ಲಾದರೂ ಕಾರ್ಯಕ್ರಮಗಳು ನಡೆಯುವಂತಾಗಬೇಕು’ ಎಂದು ಅವರು ಹೇಳಿದರು.

ಕೊಂಕಣಿ ಅಕಾಡೆಮಿ 

‘ಸ್ವಲ್ಪ ಕಾಲಾವಕಾಶ ಲಭಿಸಿದ್ದರೆ ಕೊಂಕಣಿ ಭವನದ ಕಾಮಗಾರಿ ಪೂರ್ತಿ ಆಗುತ್ತಿತ್ತು. ಮತ್ತೊಂದು ಮಹಡಿಯ ಕೆಲಸಕ್ಕೆ ಅನುಮೋದನೆ ಪಡೆಯಬಹುದಿತ್ತು. ಸಾಹಿತ್ಯ ಚಟುವಟಿಕೆ ನಿಧಾನಕ್ಕೆ ಕಡಿಮೆಯಾಗುತ್ತಿದ್ದು ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಆದರೆ ಅದಕ್ಕೆ ಮತ್ತೆ ವೇಗ ಸಿಗಬಹುದು’ ಎಂದು ಜಗದೀಶ್ ಪೈ ಹೇಳಿದರು.

ರಾಜೇಶ್‌ ಆಳ್ವ
ದಯಾನಂದ್ ಕತ್ತಲಸಾರ್
ಜಗದೀಶ್ ಪೈ
ತಂದೆ ಇಲ್ಲದ ಮನೆಯಂತಾಗುವುದು ಬೇಡ ಭಾಷೆ ಮತ್ತು ಸಾಹಿತ್ಯ–ಸಂಸ್ಕೃತಿಗೆ ಸಂಬಂಧಿಸಿದ ಅಕಾಡೆಮಿಗಳು ಸದಾ ಚಟುವಟಿಕೆಯಿಂದ ಇರಬೇಕು. ಇಲ್ಲವಾದರೆ ತಂದೆ ಇಲ್ಲದ ಮನೆಯ ಹಾಗೆ ಆಗುತ್ತದೆ. ಸರ್ಕಾರ ಯಾವತ್ತೂ ಅಕಾಡೆಮಿಗಳನ್ನು ರಾಜಕೀಯವಾಗಿ ನೋಡಬಾರದು. ರಾಜಕೀಯ ಬೇರೆ ಸಾಂಸ್ಕೃತಿಕ ಚಟುವಟಿಕೆ ಬೇರೆ. ಅಕಾಡೆಮಿಗಳು ಕ್ರಿಯಾಶೀಲವಾಗಿಲ್ಲದಿದ್ದರೆ ಬರಹಗಾರರಿಗೂ ಓದುಗರಿಗೂ ನಷ್ಟ.
ಸಾರಾ ಅಲಿ ಪರ್ಲಡ್ಕ ಸಾಹಿತ್ಯಾಸಕ್ತೆ

ಎರಡು ತಿಂಗಳಿಗೆ ಕಾರ್ಯಕ್ರಮಗಳ ಪಟ್ಟಿ ಸಿದ್ಧ

ಅಧ್ಯಕ್ಷರು ಮತ್ತು ಸದಸ್ಯರು ಇಲ್ಲದೇ ಇದ್ದರೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಬೇಕು ಎಂಬ ಉದ್ದೇಶದಿಂದ ಕರಾವಳಿಯ ಮೂರು ಅಕಾಡೆಮಿಗಳಿಗೆ ಸಂಬಂಧಿಸಿ ಸಂಘ– ಸಂಸ್ಥೆಗಳ ಸಹಯೋಗದಲ್ಲಿ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ನಡೆಸಬಹುದಾದ ಕಾರ್ಯಕ್ರಮಗಳ ಪಟ್ಟಿ ಸಿದ್ಧವಾಗಿದೆ. ‘ಮೂರೂ ಅಕಾಡೆಮಿಗಳಲ್ಲಿ ತಲಾ ಐದು ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಪಟ್ಟಿ ಸಿದ್ಧಗೊಳಿಸಲಾಗಿದೆ. ಇಲಾಖೆಯ ಅನುಮೋದನೆಗಾಗಿ ಅದನ್ನು ಕಳುಹಿಸಲಾಗಿದ್ದು ಒಪ್ಪಿಗೆ ಸಿಕ್ಕಿದರೆ ಸ್ವಲ್ಪ ಮಟ್ಟಿಗೆ ಸಾಂಸ್ಕೃತಿಕ ಪುನಃಶ್ಚೇತನ ಸಿಕ್ಕಿದಂತಾಗುತ್ತದೆ’ ಎಂದು ಮೂರೂ ಅಕಾಡೆಮಿಗಳ ರಿಜಿಸ್ಟ್ರಾರ್‌ ಮನೋಹರ ಕಾಮತ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊಂಕಣಿ ಚಟುವಟಿಕೆಗೆ ಕುತ್ತಿಲ್ಲ

ಭಾಷಾ ಅಕಾಡೆಮಿಗಳ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗೆಂದೇ ಸರ್ಕಾರ ಸಂಸ್ಥೆಗಳನ್ನು ಸ್ಥಾಪಿಸಿದ ನಂತರ ಅವುಗಳಿಂದ ಕಾರ್ಯಕ್ರಮಗಳು ನಡೆದರೆ ಸೊಗಸು. ಹಾಗೆಂದು ಅಕಾಡೆಮಿಗಳಿಗೆ ಅಧ್ಯಕ್ಷ– ಸದಸ್ಯರ ನೇಮಕ ಆಗದೇ ಇರುವುದರಿಂದ ಕೊಂಕಣಿ ಕಾರ್ಯಕ್ರಮಗಳಿಗೆ ಕುತ್ತು ಉಂಟಾಗಲಿಲ್ಲ. ವಿಶ್ವ ಕೊಂಕಣಿ ಕೇಂದ್ರ ಕೊಂಕಣಿ ಸಾಂಸ್ಕೃತಿಕ ಸಂಘ ಮತ್ತು ಕೊಂಕಣಿ ಭಾಷಾ ಮಂಡಳದಿಂದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ ಎಂದು ಕೊಂಕಣಿ ಲೇಖಕ ವೆಂಕಟೇಶ್ ಬಾಳಿಗ ಹೇಳಿದರು. ಅಧ್ಯಕ್ಷ ಮತ್ತು ಸದಸ್ಯರ ನೇಮಕಕ್ಕೆ ಸಂಬಂಧಪಟ್ಟು ಸರ್ಕಾರಕ್ಕೆ ರಾಜಕೀಯ ಒತ್ತಡಗಳು ಇರಬಹುದು. ಅದರಿಂದ ತಡವಾಗುತ್ತಿರಲೂಬಹುದು. ಆದರೂ ಅಕಾಡೆಮಿಗಳನ್ನು ಸಮರ್ಪಕವಾಗಿ ನಡೆಸಿಕೊಂಡುಹೋಗುವ ಜವಾಬ್ದಾರಿಯನ್ನು ಸರ್ಕಾರ ನಿಭಾಯಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ತುಳು ಸಾಹಿತ್ಯ ಲೋಕಕ್ಕೆ ನಷ್ಟ

ಕರಾವಳಿಯಲ್ಲಿ ಈಚೆಗೆ ತುಳು ಅಭಿವೃದ್ಧಿ ಕುಂಠಿತ ಆಗಿದೆ. ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟು ಇರುವ ಒಂದು ಅಕಾಡೆಮಿಯೂ ಈಗ ಸ್ತಬ್ಧವಾಗಿದೆ. ಇದರಿಂದ ತುಳು ಸಾಹಿತ್ಯ ಲೋಕಕ್ಕೆ ನಷ್ಟ ಆಗುತ್ತಿದೆ. ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರು ಇದ್ದಾಗ ಕಾರ್ಯಕ್ರಮಗಳನ್ನು ಆಯೋಜಿಸಲು ತುಳು ಭವನದ ಸಭಾಂಗಣ ಉಚಿತವಾಗಿ ಸಿಗುತ್ತಿತ್ತು. ಈಗ ₹15 ಸಾವಿರ ಬಾಡಿಗೆ ಕೇಳುತ್ತಾರೆ. ಪುರಭವನದ ಸಭಾಂಗಣ ₹12 ಸಾವಿರಕ್ಕೆ ಸಿಗುತ್ತದೆ. ಇಷ್ಟು ಕಷ್ಟದಲ್ಲಿ ಕಾರ್ಯಕ್ರಮಗಳನ್ನು ಮಾಡಲು ಯಾರು ಮುಂದಾಗುತ್ತಾರೆ ಎಂದು ಕೇಳುತ್ತಾರೆ ಅಖಿಲ ಭಾರತ ತುಳು ಒಕ್ಕೂಟದ ಸಂಘಟನಾ ಕಾರ್ಯದರ್ಶಿ ರಾಜೇಶ್ ಆಳ್ವ. ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರು ಇಲ್ಲದ ಕಾರಣ ಪ್ರಶಸ್ತಿಗಳು ಘೋಷಣೆ ಆಗುತ್ತಿಲ್ಲ. ಪುಸ್ತಕ ಪ್ರಕಾಶನ ನಡೆಯುತ್ತಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ತುಳು ಅಭಿವೃದ್ಧಿಯ ಬಗ್ಗೆ ಮಾತನಾಡುವ ಎಲ್ಲರೂ ಇಂಥ ವಿಷಯಗಳ ಬಗ್ಗೆ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.