ಮಂಗಳೂರು: ಬಂಧಿಸಲು ಬಂದ ಮೂಡುಬಿದಿರೆ ಠಾಣೆಯ ಪೊಲೀಸ್ ಸಿಬ್ಬಂದಿ ಮೇಲೆ ಆರೋಪಿಯೊಬ್ಬ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದಾನೆ. ತೋಡಾರಿನಲ್ಲಿ ಹಾಡಿಯೊಂದರಲ್ಲಿ ಅವತಿದ್ದ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ತೋಡಾರು ಗ್ರಾಮದ ಹಿದಾಯತ್ ನಗರದ ಮಹಮ್ಮದ್ ಫೈಜಲ್ ಅಲಿಯಾಸ್ ಕ್ಯಾಬರೆ ಫೈಜಲ್ ಬಂಧಿತ ಆರೋಪಿ.
‘ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಬೇಕಾಗಿದ್ದ ಫೈಜಲ್‌ನ ಬಂಧನಕ್ಕೆ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯ ವಾರಂಟ್ ಜಾರಿಮಾಡಿತ್ತು. ಆತನನ್ನು ಬಂಧಿಸಲು ಠಾಣೆಯ ಎಎಸ್‌ಐ ರಾಜೇಶ್ ಅವರು ಹೆಡ್ ಕಾನ್‌ಸ್ಟೆಬಲ್ ಅಯ್ಯಪ್ಪ ಜೊತೆಗೆ ಹಿದಾಯತ್ ನಗರದಲ್ಲಿರುವ ಆರೋಪಿ ಮನೆಗೆ ಶುಕ್ರವಾರ ಮಧ್ಯಾಹ್ನ ತೆರಳಿದ್ದರು. ಈ ವೇಳೆ ಆರೋಪಿಯ ತಂದೆ ಹಮೀದ್, ಪೊಲೀಸರು ಮನೆಯೊಳಗೆ ಪ್ರವೇಶಿಸಲು ಅಡ್ಡಿಪಡಿಸಿದ್ದರು. ವಾರಂಟ್ ತೋರಿಸಿದ ಬಳಿಕವೂ ಆರೋಪಿಯನ್ನು ವಶಕ್ಕೆ ಪಡೆಯಲು ಅವಕಾಶ ನೀಡಿರಲಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮನೆಯೊಳಗಿದ್ದ ಫೈಜಲ್ ಹಿಂಬಾಗಿಲಿನಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ಅಯ್ಯಪ್ಪ ಅವರು ಮನೆಯ ಹಿಂಬಾಗಿಲ ಬಳಿ ಹೋಗಿ ಬಾಗಿಲಿಗೆ ಅಡ್ಡಲಾಗಿ ನಿಂತಿದ್ದರು. ಆಗ ಆರೊಪಿಯು ಹರಿತವಾದ ಡ್ರ್ಯಾಗರ್‌ನಿಂದ ಅಯ್ಯಪ್ಪ ಅವರಿಗೆ ಚುಚ್ಚಲು ಯತ್ನಿಸಿದ್ದ. ಇದರಿಂದ ಅವರ ಬಲಗೈಗೆ ಗಾಯಗಳಾಗಿವೆ. ಎಎಸ್‌ಐ ರಾಜೇಶ್ ಅವರು ಅಯ್ಯಪ್ಪ ಅವರ ನೆರವಿಗೆ ಧಾರಿಸಿದಾಗ ಆರೋಪಿಯು, ‘ಹತ್ತಿರ ಬಂದರೆ ಕೊಲ್ಲುತ್ತೇನೆ’ ಎಂದು ಬೆದರಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದ.’
‘ಬಳಿಕ ಪಿಎಸ್‌ಐಗಳಾದ ಸುದೀಪ್ ಹಾಗೂ ದಿವಾಕರ್ ಅವರನ್ನು ಸ್ಥಳಕ್ಕೆ ತೆರಳಿದ್ದರು. ಆರೋಪಿಗಾಗಿ ಹುಡುಕಿದಾಗ ಆತ ಸಮೀಪದ ಹಾಡಿಯಲ್ಲಿ ಅಡಗಿದ್ದ. ಆರೋಪಿಯನ್ನು ಸುತ್ತಿವರಿದು ಡ್ರ್ಯಾಗರ್ ಸಮೇತ ಬಂಧಿಸಲಾಗಿದೆ. ಆತನಿಗೂ ತರಚಿದ ಗಾಯಗಳಾಗಿವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ವಿರುದ್ಧ ಮೂಡುಬಿದಿರೆ, ವೇಣೂರು, ಮಂಗಳೂರು ಗ್ರಾಮಾಂತರ, ಲಿಂಗದಹಳ್ಳಿ, ಅಜೆಕಾರು ಠಾಣೆಗಳಲ್ಲಿ ಒಟ್ಟು 15 ಪ್ರಕರಣಗಳು ದಾಖಲಾಗಿವೆ. ಮೂಡುಬಿದಿರೆ ಠಾಣೆಯೊಂದರಲ್ಲೇ ಆರೋಪಿ ವಿರುದ್ಧ ಆರು ಪ್ರಕರಣಗಳಿವೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳು ಹಾಗೂ ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣದಲ್ಲಿ ಆತನ ವಿರುದ್ಧ ವಾರಂಟ್ ಜಾರಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.