ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಪ್ರಕರಣವನ್ನು ವಿಶೇಷ ಪೊಲೀಸ್ ತನಿಖಾ ದಳಕ್ಕೆ (ಎಸ್‌ಐಟಿ) ಒಪ್ಪಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಗ್ರಹಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್., ‘ಪ್ರವೀಣ್ ಹತ್ಯೆ ಯೋಜಿತ ಕೃತ್ಯವಾಗಿದೆ. ಇದರ ಹಿಂದಿರುವ ಆರೋಪಿಗಳನ್ನು ಶೀಘ್ರ ಬಂಧಿಸಲು ಎಸ್ ಐಟಿ ರಚನೆ ಮಾಡಬೇಕು. ದಕ್ಷ ಪೊಲೀಸ್ ಅಧಿಕಾರಿಯನ್ನು ನೇಮಿಸಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ಸರ್ಕಾರ ಎನ್ ಐಎ ಮೂಲಕ ತನಿಖೆ ಮಾಡಿದರೂ ಸ್ವಾಗತ. ಆದರೆ ಆದಷ್ಟು ಶೀಘ್ರ ಆರೋಪಿಗಳ ಬಂಧನವಾಗಬೇಕು. ಹಿಂದೂ ನಾಯಕರ ಹತ್ಯೆಯ ಮೂಲಕ ಸಮಾಜ ತುಂಡರಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಲೇಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವ ಮೂಲಕ ಮುಂದೆಂದೂ ಇಂತಕ ಕೃತ್ಯಗಳು ಮರುಕಳಿಸಬಾರದು. ಆಡಳಿತದಲ್ಲಿ ಪಕ್ಷ ಯಾವುದೇ ಇರಲಿ, ಹಿಂದುತ್ವ ಮರೆತಾಗ ಎಚ್ಚರಿಸುವ ಕೆಲಸ ಮಾಡಿಯೇ ಮಾಡುತ್ತೇವೆ‘ ಎಂದರು.
ಮೃತ ಪ್ರವೀಣ್ ನೆಟ್ಟಾರು ಅವರ ಅಂತಿಮ ಶವಯಾತ್ರೆ ಸಂದರ್ಭದಲ್ಲಿ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಅಮಾಯಕ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ನಿಯಮ ಮೀರಿ ವರ್ತಿಸಿದ ಪೊಲೀಸರನ್ನು ಕೂಡ ಅಮಾನತು ಮಾಡಬೇಕು. ಗೃಹ ಸಚಿವರು ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರವೀಣ್ ಹತ್ಯೆಯಿಂದ ಇಡೀ ರಾಜ್ಯದಲ್ಲಿ ನೋವಿನ ವಾತಾವರಣ ನಿರ್ಮಾಣವಾಗಿದೆ. ಹಿಂದೂ ಕಾರ್ಯಕರ್ತನೊಬ್ಬನ ಅಗಲಿಕೆ ಇಡೀ ಸಮಾಜಕ್ಕೆ ಆದ ನಷ್ಟವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಶುಕ್ರವಾರ ಹಿಂದುತ್ವ ಸಂಘಟನೆಗಳ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಬಜರಂಗದಳ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಮಂಗಳೂರು ವಿಭಾಗ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಪುತ್ತೂರು ವಿಭಾಗ ಸಂಚಾಲಕ ಭರತ್ ಕುಮ್ಡೇಲು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.