ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್‍ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ವಾರ್ಷಿಕವಾಗಿ ನೀಡುವ ರಾಜ್ಯ ಮಟ್ಟದ ವಂದನಾ ಪ್ರಶಸ್ತಿಗೆ ಚಿತ್ರನಟ ರಮೇಶ್ ಭಟ್ ಆಯ್ಕೆಯಾಗಿದ್ದಾರೆ.
ಮೇ 3ರಂದು ಸಂಜೆ 8 ಗಂಟೆಗೆ ನಗರದ ಮೋತಿ ಮಹಲ್ ಹೋಟೆಲ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಚಲನಚಿತ್ರ ಕ್ಷೇತ್ರದಲ್ಲಿ ರಮೇಶ್ ಭಟ್ ಅವರು ಸಲ್ಲಿಸಿದ ಸುದೀರ್ಘ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಫಲಕ, ಪ್ರಮಾಣಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಪ್ರಮುಖರಾದ ಡಾ. ದೇವದಾಸ್ ರೈ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿಟ್ಟೆ ವಿಶ್ವವಿದ್ಯಾಲಯ ಕುಲಪತಿ ಡಾ. ಸತೀಶ್ ಭಂಡಾರಿ ಪ್ರಶಸ್ತಿ ಪ್ರದಾನ ಮಾಡುವರು. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಸಾಯಿಬಾಬಾ ರಾವ್ ಅಧ್ಯಕ್ಷತೆ ವಹಿಸುವರು. ರೋಟರಿ ಜಿಲ್ಲಾ ಸಹಾಯಕ ಗವರ್ನರ್ ರಾಜಗೋಪಾಲ್ ರೈ, ಜಿಲ್ಲಾ ಪ್ರತಿನಿಧಿ ನಿಖಿಲ್ ಆರ್.ಕೆ. ಪಾಲ್ಗೊಳ್ಳುವರು. 2004–05ನೇ ಸಾಲಿನಿಂದ ಈವರೆಗೆ ಹಲವರಿಗೆ ಪ್ರಶಸ್ತಿ ನೀಡಲಾಗಿದೆ. ಕ್ರೀಡೆ, ವಾಣಿಜ್ಯೋದ್ಯಮ, ಶಿಕ್ಷಣ, ಕಲೆ, ಸಂಗೀತ, ಸಾಹಿತ್ಯ, ವಿಜ್ಞಾನ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗಿದೆ ಎಂದರು.
ರೋಟರಿ ಪ್ರಮುಖರಾದ ಸಾಯಿಬಾಬಾ ರಾವ್, ಅರ್ಜುನ್ ಪ್ರಕಾಶ್, ಎಂ.ವಿ.ಮಲ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.