ಮಂಗಳೂರು:‘ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದೆ ದೊಡ್ಡ ಸವಾಲು. ಕೋವಿಡ್ ಸ್ವಲ್ಪ ಮಟ್ಟಿಗೆ ಇಳಿಮುಖ ಕಂಡಿದ್ದರಿಂದ ಸಿನಿಮಾ ಕ್ಷೇತ್ರ ನಿಧಾನವಾಗಿ ಚೇತರಿಕೆ ಹಾದಿಯಲ್ಲಿ ಇದೆ. ಕೋವಿಡ್‌ನಿಂದಾಗಿ ದೊಡ್ಡ ಪ್ರಮಾಣದ ನಷ್ಟ ಸಿನಿಮಾ ಕ್ಷೇತ್ರಕ್ಕೆ ಆಗಿದ್ದು, ಈ ಆತಂಕ ಇನ್ನೂ ಕೂಡ ಮುಗಿದಿಲ್ಲ’ ಎಂದು ಬಾಲಿವುಡ್ ನಟ ಸುನಿಲ್ ಶೆಟ್ಟಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡಿಸೆಂಬರ್ 3 ರಂದು ಪುತ್ರ ಅಹಾನ್ ಶೆಟ್ಟಿ ಅವರ ‘ತಡಪ್’ ಹಿಂದಿ ಚಲನಚಿತ್ರ ಬಿಡುಗಡೆ ಆಗಲಿದೆ. ತಡಪ್ ಚಿತ್ರದ ನಿರ್ಮಾಣ ಕಾರ್ಯ ಒಂದೂವರೆ ವರ್ಷಗಳ ಹಿಂದೆಯೇ ಆಗಿತ್ತು. ಕೋವಿಡ್‌ನಿಂದಾಗಿ ಚಿತ್ರ ಬಿಡುಗಡೆ ಮುಂದೂಡಲಾಗಿತ್ತು. ಈಗ ಎಲ್ಲವೂ ಸ್ವಲ್ಪಮಟ್ಟಿಗೆ ಸಹಜ ಸ್ಥಿತಿಗೆ ಮರಳಿರುವುದರಿಂದ ಧೈರ್ಯ ಮಾಡಿ ಸಿನಿಮಾ ಬಿಡುಗಡೆಗೆ ಮುಂದಾಗಿದ್ದೇವೆ. ಜನ ಇಷ್ಟಪಟ್ಟು ಸಿನಿಮಾ ವೀಕ್ಷಣೆಗೆ ಬರುತ್ತಾರೆ. ನನಗೆ ನೀಡಿದ ಪ್ರೋತ್ಸಾಹವನ್ನು ಮಗನಿಗೂ ಪ್ರೇಕ್ಷಕರು ನೀಡುವ ದೊಡ್ಡ ವಿಶ್ವಾಸ ಇದೆ ಎಂದು ತಿಳಿಸಿದರು.
ಕೋವಿಡ್ ಕಾರಣದಿಂದ ತಡಪ್ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದ್ದ ಸಂದರ್ಭ ಒಟಿಟಿ ಮೂಲಕ ಬಿಡುಗಡೆ ಮಾಡುವಂತೆ ಹಲವಾರು ಅವಕಾಶಗಳು ಬಂದಿದ್ದವು. ಆದರೆ, ಸಿನಿಮಾ ಮಂದಿರಗಳಲ್ಲಿಯೇ ಮಗನ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬ ದೊಡ್ಡ ಆಸೆಯಿಂದ ಇಷ್ಟು ಸಮಯ ಕಾಯಬೇಕಾಯಿತು. ಇದೀಗ ಮುಹೂರ್ತ ಕೂಡಿ ಬಂದಿದೆ. ಫಿಕ್ಸ್ ಮಾಡಿದ್ದೇವೆ. ವಿಶ್ವದ 2000 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಏಕಕಾಲದಲ್ಲಿ ಸಿನಿಮಾ ಬಿಡುಗಡೆ ಆಗಿಲಿದೆ ಎಂದು ಅವರು ತಿಳಿಸಿದರು.
ಸಿನಿಮಾಗಳ ಮೂಲಕ ನಾವು ಈಗಾಗಲೇ ಸ್ಟಾರ್ ಪಟ್ಟ ಪಡೆದಿದ್ದೇವೆ. ಆದರೆ, ಯುವಪೀಳಿಗೆ ಇನ್ನೂ ಸ್ಟಾರ್ ಪಟ್ಟಕ್ಕೆ ಬರುಬೇಕು ಎಂದರೆ ಸಾಕಷ್ಟು ಹೋಂವರ್ಕ ಮಾಡಬೇಕು. ನನ್ನ ಮಗ ಇನ್ನೂ ಸಿನಿಮಾದಲ್ಲಿ ನಟನೆ ಮಾಡಿ ಅದನ್ನು ಪ್ರೇಕ್ಷಕರು ಮೆಚ್ಚಿದ ಬಳಿಕ ಸ್ಟಾರ್ ಆಗಬೇಕು ಎಂದು ತಿಳಿಸಿದರು.
ನಟ ಸುನಿಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಮಾತನಾಡಿ, ’ತಡಪ್’ ಸಿನಿಮಾ ತೆಲುಗಿನ ‘ಆರ್‌ಎಕ್ಸ್ 100’ ಸಿನಿಮಾದ ರಿಮೇಕ್. ಸಿನಿಮಾ ಕ್ಷೇತ್ರಕ್ಕೆ ಬರುವುದಕ್ಕೆ ತಂದೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಉತ್ತಮ ಚಿತ್ರಕತೆ ಇರುವ ’ತಡಪ್’ ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ. ಸಿನಿಮಾ ಕ್ಷೇತ್ರಕ್ಕೆ ಬರಬೇಕು ಎಂಬ ಆಸೆಯಿಂದ ಸುದೀರ್ಘ ಅವಧಿ ತರಬೇತಿ ಪಡೆದಿರುವೆ. ಉತ್ತಮ ನೃತ್ಯಪಟುಗಳಿಂದಲೂ ತರಬೇತಿ ಪಡೆದಿದ್ದೇನೆ. ತಡಪ್ ಸಿನಿಮಾ ಪ್ರೇಕ್ಷಕರಿಗೆ ಮೆಚ್ಚುಗೆ ಆಗಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಸಿನಿಮಾ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು, ದೇವಾನಂದ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಕೊಡಿಯಾಲ್‌ಬೈಲ್ ಇದ್ದರು.
‘ತುಳು ಭಾಷೆಯ ಗಟ್ಟಿತನ ಬೆಳೆಸಿದೆ’
‘ಕರಾವಳಿಯ ತುಳುವನಾಗಿ ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ತುಳು ಸಂಸ್ಕೃತಿಗೆ ಗಟ್ಟಿತನವಿದ್ದು, ಎಲ್ಲ ಕಡೆಗೂ ಬೆಳೆಯುವ ಚೈತನ್ಯ, ಶಕ್ತಿ ತುಂಬುತ್ತದೆ. ಹಿರಿಯರು ಕೂಡ ಇದೆ ಹಾದಿಯಲ್ಲಿ ಬೆಳೆದು ಬಂದವರು. ನನ್ನ ಮಗನನ್ನು ಕೂಡ ಅದೇ ರೀತಿಯ ವಾತಾವರಣದಲ್ಲಿ ಬೆಳೆಸಿದ್ದೇನೆ. ಆದರೆ, ಅವನಿಗೆ ತುಳು ಭಾಷೆ ಬರಲ್ಲ, ಪತ್ನಿಗೂ ಕೂಡ ತುಳು ಭಾಷೆ ಗೊತ್ತಿಲ್ಲ. ಈ ಕಾರಣದಿಂದ ಮನೆಯಲ್ಲಿ ನಾವು ತುಳು ಮಾತನಾಡದೇ ಇರುವ ಕಾರಣಕ್ಕೆ ತುಳು ಬರ್ತಿಲ್ಲ. ತುಳು ನಾಡಿನ ಸಂಸ್ಕೃತಿಯನ್ನು ಚೆನ್ನಾಗಿ ಮೆಚ್ಚಿಕೊಂಡಿದ್ದಾನೆ. ಈ ಕಾರಣಕ್ಕಾಗಿ ಸಿನಿಮಾ ಬಿಡುಗಡೆಗೆ ಮೊದಲು ತುಳುನಾಡಿದ ಆರಾಧ್ಯ ದೈವ, ದೇವರುಗಳ ಆಶೀರ್ವಾದ ಪಡೆಯಲು ಬಂದಿರುವೆ'ಎಂದು ನಟ ಸುನಿಲ್ ಶೆಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.