ಉಳ್ಳಾಲ(ದಕ್ಷಿಣ ಕನ್ನಡ): 'ಬಯಸಿದ್ದು ಎಲ್ಲರಿಗೂ ಸಿಗುವುದು ಕಡಿಮೆ. ಆದರೆ ಹಲವು ವರ್ಷಗಳ ಪ್ರೀತಿ ಹರಿಪ್ರಿಯಾಳನ್ನು ಭಗವಂತ ನನಗೆ ಕೊಟ್ಟಿದ್ದಾನೆ. ಅದಕ್ಕೆ ಚಿರ ಋಣಿ' ಎಂದು ಸಿನಿಮಾ ನಟ ವಸಿಷ್ಠ ಸಿಂಹ ಹೇಳಿದರು.
ನವದಂಪತಿಯಾದ ವಸಿಷ್ಠ ಸಿಂಹ- ಹರಿಪ್ರಿಯಾ ಕಲ್ಲಾಪು ಬುರ್ದುಗೋಳಿಯ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡುವ ಮೂಲಕ ಮದುವೆಯಾದ ಬಳಿಕದ ಮೊದಲ ದಸರಾ ಹಬ್ಬ ಅಚರಿಸಿದರು. ದಂಪತಿ ಕೊರಗತನಿಯನ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಬಂದಾಗ ಕೊರಗಜ್ಜನ ದರ್ಶನ ಮಾಡದೇ ಇದ್ದಲ್ಲಿ ವಾಪಸ್ಸು ತೆರಳುವಾಗ ಹೊರೆ ಹೊತ್ತಂಥ ಅನುಭವ ಆಗುತ್ತದೆ. ಮುಂದೆ ಲವ್ಲೀ ಚಿತ್ರ ಬಿಡುಗಡೆಯಾಗಲಿದ್ದು, ಬಹುತೇಕ ಶೂಟಿಂಗ್ ಈ ಜಿಲ್ಲೆಯಲ್ಲೇ ನಡೆದಿದೆ. ಶೂಟಿಂಗ್ ನಡೆದ ಸಂದರ್ಭದಲ್ಲೇ ಈ ದೈವಸ್ಥಾನಕ್ಕೆ ಭೇಟಿ ನೀಡಲು ಬಯಸಿದ್ದೆ. ಸಾಧ್ಯವಾಗಿರಲಿಲ್ಲ. ಈಗ ಸಾಧ್ಯವಾಯಿತು ಎಂದರು.
ನಟಿ ಹರಿಪ್ರಿಯಾ ಮಾತನಾಡಿ,'ತನ್ನ ಮೊದಲ ನಟನೆ ಕರಾವಳಿಯಿಂದಲೇ ಆರಂಭವಾಯಿತು. 'ಬದಿ' ಅನ್ನುವ ತುಳು ಚಿತ್ರದಲ್ಲಿ ಪ್ರಥಮವಾಗಿ ನಟಿಸಿದ್ದೆ. ಈ ಸಲದ ದಸರಾ ವಿಶೇಷವಾಗಿತ್ತು. ವಶಿಷ್ಠ ಅವರ ಹುಟ್ಟುಹಬ್ಬವನ್ನು ಇಲ್ಲೇ ಆಚರಿಸಿದ್ದೇವೆ. ನಾನೇ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿರುವೆ. ವಾರದುದ್ದಕ್ಕೂ ಕರಾವಳಿಯ ಎಲ್ಲಾ ದೇವಸ್ಥಾನಗಳ ಸಂದರ್ಶನ ನಡೆಸಿ ಕೃತಾರ್ಥರಾದೆವು' ಎಂದರು.
ಈ ಸಂದರ್ಭದಲ್ಲಿ ಕದ್ರಿ ಕ್ರಿಕೆಟರ್ಸ್ ನ ಜಗದೀಶ್ ಕದ್ರಿ, ಕುಂಪಲ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ಅಂಚನ್, ಸಾಯಿ ಪರಿವಾರ್ ಟ್ರಸ್ಟ್ ನ ಪ್ರವೀಣ್ ಎಸ್ ಕುಂಪಲ, ಬುರ್ದುಗೋಳಿ ಸಮಿತಿಯ ಕಮಲಾಕ್ಷ ವಿ ಕುಲಾಲ್, ನವೀನ್ ಕಾಯಂಗಳ, ಪುರುಷೋತ್ತಮ ಮೇಲಾಂಟ, ಪ್ರಶಾಂತ್ ಕಾಯಂಗಳ, ಪುರುಷೋತ್ತಮ ಕಲ್ಲಾಪು, ರವಿ, ಜ್ಞಾನೇಶ್ ಸಂಜಯ್, ಭವಿತ್, ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ನ ಕೌಶಿಕ್ ಸೇವಂತಿಗುಡ್ಡೆ, ಶವಿತ್ ಉಚ್ಚಿಲ್, ಪ್ರಜ್ವಲ್, ಭವಿಶ್ ಕುತ್ತಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.