ADVERTISEMENT

ಉಳ್ಳಾಲ: ಕಾರು ತಡೆದು ತಲವಾರು ಬೀಸಿದ ದುಷ್ಕರ್ಮಿಗಳು

ಹಿಂದು ಮುಖಂಡನ ಮೇಲೆ ಹಲ್ಲೆ ಪ್ರಕರಣದ ಆರೋಪಿ ಮೇಲೆ ಹಲ್ಲೆ ಯತ್ನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 2:56 IST
Last Updated 11 ನವೆಂಬರ್ 2024, 2:56 IST
<div class="paragraphs"><p> ತಲವಾರು</p></div>

ತಲವಾರು

   

ಉಳ್ಳಾಲ: ಇಲ್ಲಿನ ವಿಶ್ವ ಹಿಂದು ಪರಿಷತ್ ಮುಖಂಡನಿಗೆ ಹಲ್ಲೆ ಪ್ರಕರಣದ ಆರೋಪಿ ಆಸಿಫ್‌ ಪ್ರಯಾಣಿಸುತ್ತಿದ್ದ ಕಾರನ್ನು ಹಿಂಬಾಲಿಸಿದ್ದ ಹೆಲ್ಮೆಟ್ ಧಾರಿಗಳ ಗುಂಪು  ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆ.ಸಿ.ರೋಡ್- ಉಚ್ಚಿಲದ ಪೆಟ್ರೋಲ್ ಬಂಕ್‌ ಬಳಿ ಕಾರಿನತ್ತ ತಲವಾರು ಬೀಸಿದೆ ಎಂದು ಉಳ್ಳಾಲ ಠಾಣೆಯಲ್ಲಿ ಭಾನುವಾರ ಎಫ್‌ಐಆರ್‌ ದಾಖಲಾಗಿದೆ.

‘ಎಂಟು ಮಂದಿ ಹೆಲ್ಮೆಟ್‌ ಧರಿಸಿ ದ್ವಿಚಕ್ರ ವಾಹನದಲ್ಲಿ ಆಸಿಫ್‌ ಪ್ರಯಾಣಿಸುತ್ತಿದ್ದ ಕಾರನ್ನು  ಗುರುವಾರ (ನ.7ರಂದು) ರಾತ್ರಿ 9.30ರ ಸುಮಾರಿಗೆ ಹಿಂಬಾಲಿಸಿದ್ದರು. ಉಚ್ಚಿಲದ ಪೆಟ್ರೋಲ್ ಬಂಕ್‌  ಸಮೀಪ ಕಾರನ್ನು ಅಡ್ಡಗಟ್ಟಿದ್ದರು. ಎಲ್ಲರ ಕೈಯಲ್ಲೂ ಮೊಟ್ಟೆ ಹಾಗು ತಲವಾರುಗಳಿದ್ದವು. ದುಷ್ಕರ್ಮಿಗಳು ಬೀಸಿದ ತಲವಾರು ಆಸೀಫ್ ಇದ್ದ ಕಾರಿಗೆ ತಗುಲಿದ್ದು, ಗಾಜಿಗೆ ಹಾನಿಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘ಬೈಕುಗಳಲ್ಲಿದ್ದ ಆಗಂತುಕರು ಹಿಂಬಾಲಿಸುತ್ತಿರುವುದು ಗೊತ್ತಾದ ಬಳಿಕ ಆಸೀಫ್ ಇದ್ದ ಕಾರಿನ ಚಾಲಕ ವೇಗವಾಗಿ ವಾಹನ ಚಲಾಯಸಿದ್ದ. ತಲಪಾಡಿ ಟೋಲ್‌ಗೇಟ್ ಬಳಿ ಬ್ಯಾರಿಕೇಡ್‌ಗೆ ಕಾರು ಗುದ್ದಿದೆ. ಬಳಿಕ ಮಂಜೇಶ್ವರ ಠಾಣೆಗೆ ತೆರಳಿ ಅವರು ರಕ್ಷಣೆ ಕೋರಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತೊಕ್ಕೊಟ್ಟು ಓವರ್ ಬ್ರಿಡ್ಜ್ ಸಮೀಪ ಅ.17 ರಂದು ಅಪಘಾತ ಸಂಭವಿಸಿತ್ತು. ಈ ಸಂಬಂಧ ಶರತ್ ಕುಂಪಲ ಎಂಬವರ ಪರವಾಗಿ ಉಳ್ಳಾಲದ ಹಿಂದೂ ಮುಖಂಡ ಅರ್ಜುನ್ ಮಾಡೂರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇತ್ಯರ್ಥಕ್ಕೆ ತೆರಳಿದ್ದರು. ಶರತ್  ಹಾಗೂ ಕೇರಳ ಹೊಸಂಗಡಿಯ ಆಸೀಫ್ ಹಾಗೂ ಅವರಿಬ್ಬರ ಪರವಾಗಿ ಬಂದಿದ್ದವರ ನಡುವೆ ಠಾಣೆಯ ಬಳಿ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಅರ್ಜುನ್ ಮೇಲೆ ಹಲ್ಲೆ ನಡೆದಿತ್ತು. ಅಂದು ರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಳ್ಳಾಲ ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದ್ದರು. ಬಳಿಕ ಆರೋಪಿ ಆಸೀಫ್‌ನನ್ನು ಪೊಲೀಸರು ಬಂಧಿಸಿದ್ದರು. ಆತನಿಗೆ ಗುರುವಾರ ಜಾಮೀನು ಸಿಕ್ಕಿತ್ತು. ಮಂಗಳೂರು ಜೈಲಿನಿಂದ ಬಿಡುಗಡೆಗೊಂಡು ಕಾರಿನಲ್ಲಿ ಕೇರಳದ ಹೊಸಂಗಡಿಯ ಮನೆಗೆ ತೆರಳುವಾಗ ಆತನ ಕಾರಿನ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.