ADVERTISEMENT

ಬಿಜೆಪಿ ಮುಖಂಡ–ಮಹಿಳೆ ಸಂಭಾಷಣೆ: ಕುತೂಹಲ ಕೆರಳಿಸಿದ ₹ 3.50 ಕೋಟಿ ಪ್ರಸ್ತಾಪ

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಬಿಜೆಪಿ ಮುಖಂಡ – ಮಹಿಳೆ ನಡುವಿನ ಸಂಭಾಷಣೆಯದ್ದು ಎನ್ನಲಾದ ಆಡಿಯೊ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 4:22 IST
Last Updated 26 ಆಗಸ್ಟ್ 2024, 4:22 IST
   

ಪ್ರಜಾವಾಣಿ ವಾರ್ತೆ

ಪುತ್ತೂರು: ವಿಧಾನ ಸಭೆಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಹೊರಬಂದು, ಇತ್ತೀಚೆಗೆ ಪಕ್ಷಕ್ಕೆ ಮರಳಿದ ಮುಖಂಡ ಹಾಗೂ ಮಹಿಳೆಯೊಬ್ಬರ ನಡುವಿನ  ಸಂಭಾಷಣೆಯದ್ದು ಎನ್ನಲಾದ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸಂಭಾಷಣೆ ನಡುವೆ  ₹ 3.5 ಕೋಟಿ ವ್ಯವಹಾರದ ಪ್ರಸ್ತಾಪವಾಗಿದ್ದು, ಈ ಬಗ್ಗೆಯೂ ಚರ್ಚೆಯಾಗುತ್ತಿದೆ.

ಪುತ್ತೂರು ನಗರ-ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷರ ಆಯ್ಕೆಯ ಬಳಿಕ ಈ ಸಂಭಾಷಣೆ ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿದೆ. ಪ್ರಸನ್ನ ಕುಮಾರ್ ಮಾರ್ತ ಅವರಿಗೆ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ನೀಡಿದ್ದನ್ನು ಪ್ರಸ್ತಾಪಿಸಿರುವ ಮಹಿಳೆ, ‘ಇನ್ನು ಪಕ್ಷದಲ್ಲಿ ನಿಮಗೆ ಯಾವ ಹುದ್ದೆಯೂ ಸಿಗುವುದಿಲ್ಲ. ಇನ್ನು ಮುಂದೆ ಬ್ಯಾನರ್ ಕಟ್ಟಲು ಮಾತ್ರ’ ಎಂದು ಬಿಜೆಪಿ ವಿರುದ್ಧ ಬಂಡಾಯವೆದ್ದು ಮತ್ತೆ ಪಕ್ಷಕ್ಕೆ ಮರಳಿದ ಮುಖಂಡನನ್ನು ಛೇಡಿಸಿದ್ದಾರೆ.

ADVERTISEMENT

ಸಂಭಾಷಣೆ ನಡುವೆ ಮಹಿಳೆಯು, ‘ನೀವು ಹಣ ಪಡೆದ ಬಗ್ಗೆಯೂ ನನಗೂ ಗೊತ್ತುಂಟು’ ಎಂದು ಹೇಳುವ ಮೂಲಕ ಮಹಿಳೆ ಬಿಜೆಪಿ ಮುಖಂಡನನ್ನು ಗೇಲಿ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಮುಖಂಡ, ‘ನಾನು ಮೂರುವರೆ ಕೋಟಿ ತೆಗೆದುಕೊಂಡಿದ್ದೇನೆ ಎಂದು ನಮ್ಮವರೇ ಹೇಳಿಕೊಂಡು ಬರುತ್ತಾರೆ. ಅದಕ್ಕೆ ಏನಾದರೂ ಉಂಟಾ’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮಹಿಳೆ, ‘ನೀವು ಹಣ ತೆಗೆದುಕೊಳ್ಳಲಿಲ್ಲವಾ. ನೀವು ತೆಗೆದುಕೊಂಡಿದ್ದೀರಿ ಎಂದು ನಾನೂ ಹೇಳುತ್ತೇನೆ’ ಎನ್ನುತ್ತಾರೆ. ಆಗ ಮುಖಂಡ, ‘ಅದು ಹಾಗೆಯೇ’ ಎಂದು ಹಾರಿಕೆ ಉತ್ತರ ನೀಡುತ್ತಾರೆ.

‘ಬಿಜೆಪಿಗೆ ರಾಜನ ಹಾಗೇ ಹೋಗಬೇಕಾಗಿತ್ತು. ನಿಮಗೆ ಎಷ್ಟು ಸಲ ನಾನು ಹೇಳಿದ್ದೆ. ಜವಾಬ್ದಾರಿ ಸಿಗದೇ ಇದ್ದರೆ ಪಕ್ಷದ ಕಚೇರಿಗೆ ಕಾಲಿಡುವುದಿಲ್ಲ ಎಂದಿದ್ದ ನೀವು ನಾಚಿಕೆಗೆಟ್ಟು ಈಗ ಅಲ್ಲಿಗೆ ಹೋದಿರಿ. ಅಕ್ಷರಶ: ನೀವು ಈಗ ನಾಶವಾಗಿದ್ದೀರಿ’ ಎಂದು ಮಹಿಳೆ ಅಣಕಿಸಿದ್ದಾರೆ.
‘ರಾಜಕೀಯದಲ್ಲಿ ಮಾನ ಮರ್ಯಾದೆ ಬಿಟ್ಟು ಇದ್ರೆ ಮಾತ್ರ ದೊಡ್ಡ ಜನ ಆಗುತ್ತಾರೆ. ಇಲ್ಲಿ ದೊಡ್ಡ ಜನ ಆದವರೂ ನಾಚಿಕೆ ಮಾನ ಮರ್ಯಾದೆ ಬಿಟ್ಟವರು. ರಾಜಕೀಯ ಅಂದರೆ ಸುಳ್ಳು. ರಾಜಕೀಯದಲ್ಲಿ ಯಾರನ್ನೂ ನಂಬುವ ಪ್ರಶ್ನೆಯೇ ಇಲ್ಲ’ ಎಂದು ಮುಖಂಡ ಪ್ರತಿಕ್ರಿಯಿಸಿದ್ದಾರೆ.

ಈ ಸಂಭಾಷಣೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಜೆಪಿ ಮುಖಂಡ ಮೊಬೈಲ್‌ಗೆ ಕರೆ ಮಾಡಲಾಯಿತು. ಆದರೆ, ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.