ADVERTISEMENT

ರಘು ದೀಕ್ಷಿತ್‌ ‘ಫೋಕ್‌ –ರಾಕ್‌’ 4 ರಂದು

ಫಾದರ್‌ ಮುಲ್ಲರ್ಸ್‌ ವೈದ್ಯಕೀಯ ಕಾಲೇಜು: ‘ಅಡ್ರೆನಲಿನ್ 2024’ ಉತ್ಸವ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 3:01 IST
Last Updated 1 ಅಕ್ಟೋಬರ್ 2024, 3:01 IST
ಸುದ್ದಿಗೋಷ್ಠಿಯಲ್ಲಿ ಡಾ.ಲೆನೋನ್ ಡಿಸೋಜ ಮಾತನಾಡಿದರು. ಗಗನದೀಪ್, ವಾಂಚಿಕಾ, ಡಾ.ಆಂಟೊನಿ ಸಿಲ್ವನ್, ಡಾ.ವಿಲ್ಬರ್ ಲಿಯಾಂಡರ್‌ ಕುಟಿನ್ಹಾ, ಪ್ರಖ್ಯಾತ್ ಶೆಟ್ಟಿ, ಪ್ರಿನ್‌ಸ್ಟನ್ ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಡಾ.ಲೆನೋನ್ ಡಿಸೋಜ ಮಾತನಾಡಿದರು. ಗಗನದೀಪ್, ವಾಂಚಿಕಾ, ಡಾ.ಆಂಟೊನಿ ಸಿಲ್ವನ್, ಡಾ.ವಿಲ್ಬರ್ ಲಿಯಾಂಡರ್‌ ಕುಟಿನ್ಹಾ, ಪ್ರಖ್ಯಾತ್ ಶೆಟ್ಟಿ, ಪ್ರಿನ್‌ಸ್ಟನ್ ಭಾಗವಹಿಸಿದ್ದರು   

ಮಂಗಳೂರು: 'ಫಾದರ್ ಮುಲ್ಲರ್ಸ್‌ ವೈದ್ಯಕೀಯ ಕಾಲೇಜಿನ ಬೆಳ್ಳಿ ಹಬ್ಬದ ಅಂಗವಾಗಿ  ಇದೇ 2ರಿಂದ 5ರವರೆಗೆ ‘ಅಡ್ರೆನಲಿನ್ 2024’ ಯುವ ಉತ್ಸವವನ್ನು ಕಾಲೇಜಿನ ಮೈದಾನದಲ್ಲಿ ಏರ್ಪಡಿಸಿದ್ದೇವೆ. ಖ್ಯಾತ ಸಂಗೀತಗಾರ ರಘುದೀಕ್ಷಿತ್ ಅವರು ಇದೇ 4ರಂದು ಸಂಜೆ 6ರಿಂದ ನಡೆಸಿಕೊಡುವ ‘ಫೋಕ್‌ –ರಾಕ್‌’ ಈ ಉತ್ಸವದ ಪ್ರಮುಖ ಆಕರ್ಷಣೆ' ಎಂದು ಕಾಲೇಜಿನ ಡೀನ್ ಡಾ.ಆಂಟೊನಿ ಸಿಲ್ವನ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಉತ್ಸವದಲ್ಲಿ ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಕಲೆ ಮುಂತಾದ ಸುಮಾರು 40 ವಿಭಾಗಗಳಲ್ಲಿ ಆಕರ್ಷಕ ಸ್ಪರ್ಧೆಗಳು ನಡೆಯಲಿವೆ. ಒಟ್ಟು ₹ 5 ಲಕ್ಷ ಬಹುಮಾನ ಗಿಟ್ಟಿಸಲು ಅವಕಾಶವಿದೆ. ವೈದ್ಯಕೀಯ, ಎಂಜಿನಿಯರಿಂಗ್, ಕಾನೂನು ಹಾಗೂ ಇತರ ಪದವಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಈಗಾಗಲೇ 50 ಕ್ಕೂ ಹೆಚ್ಚು ಕಾಲೇಜುಗಳು  ಹೆಸರು ನೋಂದಾಯಿಸಿವೆ’ ಎಂದರು.

'ಅಡುಗೆ ಕಾರ್ಯಾಗಾರವನ್ನು ‘ಮಾಸ್ಟರ್ ಚೆಫ್ ಇಂಡಿಯಾ’ ವಿಜೇತ ಮೊಹ್ದ್ ಅಶಿಕ್ ನಡೆಸಿಕೊಡುವರು. ಅಲ್ಲದೇ ಪ್ರೀತಮ್ (ಸ್ವಯಂ ರಕ್ಷಣೆ),  ಕರಣ್ (ಡಿಜಿಟಲ್ ಕಲೆ), ರಾಯಾನ್ ಡಿಸೋಜ (ಫೋಟೋಗ್ರಾಫಿ), ಸುಮಂತ್ (ನೃತ್ಯ), ಪ್ರಜ್ಞಾ ಶೆಟ್ಟಿ (ಪ್ರಸಾದನ ಕಲೆ), ಹಿಲ್ಡಾ ಫರ್ನಾಂಡಿಸ್ (ಸಾರೀ ಡ್ರಾಪಿಂಗ್), ಬೀನಾ ಆಂಟೊನಿ (ಬಾಟಲಿ ಕಲೆ) ವಿವಿಧ ಕಾರ್ಯಾಗಾರಗಳನ್ನು ನಡೆಸಿಕೊಡುವರು’ ಎಂದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಲಹೆಗಾರರಾದ ಡಾ.ಲೆನೊನ್ ಡಿಸೋಜ, ಡಾ.ವಿಲ್ಬರ್ ಲಯಾಂಡರ್‌ ಕುಟಿನ್ಹೊ, ಫಾದರ್‌ ಮುಲ್ಲರ್‌ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಾಂಚಿಕಾ, ಗಗನದೀಪ್, ಫಾದರ್ ಮುಲ್ಲರ್ ಅಲೈಡ್‌ ಹೆಲ್ತ್ ಸೈನ್ಸಸ್ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ಪ್ರಿನ್‌ಸ್ಟನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.